ಜೂ. 30ರಿಂದ ಎಸ್‌ಐಆರ್‌ ಪ್ರಕ್ರಿಯೆ ಆರಂಭವಾಗಲಿದೆ. ಆದರೆ, ಮತದಾರರು ಸಾಕಷ್ಟು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಪ್ರತಿಯೊಬ್ಬ ನಾಗರಿಕರ ಮತದಾನದ ಹಕ್ಕು ರಕ್ಷಿಸಬೇಕು. ದಾಖಲೆಗಳ ಕೊರತೆಯಿಂದ ಯಾರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆಯದಂತೆ ಅಗತ್ಯ ಕ್ರಮಕೈಗೊಳ್ಳಬೇಕು.

ಹುಬ್ಬಳ್ಳಿ:

ಎಸ್‌ಐಆರ್‌ನಲ್ಲಿ ಯಾವ ಮತದಾರರ ಹೆಸರು ಬಿಟ್ಟು ಹೋಗದಂತೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಸಿಪಿಐ (ಎಂ), ಸಿಪಿಐ ಹಾಗೂ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಇಲ್ಲಿನ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜೂ. 30ರಿಂದ ಎಸ್‌ಐಆರ್‌ ಪ್ರಕ್ರಿಯೆ ಆರಂಭವಾಗಲಿದೆ. ಆದರೆ, ಮತದಾರರು ಸಾಕಷ್ಟು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಪ್ರತಿಯೊಬ್ಬ ನಾಗರಿಕರ ಮತದಾನದ ಹಕ್ಕು ರಕ್ಷಿಸಬೇಕು. ದಾಖಲೆಗಳ ಕೊರತೆಯಿಂದ ಯಾರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆಯದಂತೆ ಅಗತ್ಯ ಕ್ರಮಕೈಗೊಳ್ಳಬೇಕು. ಚುನಾವಣಾ ಆಯೋಗ ನಿಗದಿಪಡಿಸಿರುವ 11 ದಾಖಲೆಗಳ ಪೈಕಿ ಒಂದು ದಾಖಲೆಯನ್ನೂ ಒದಗಿಸಲು ಸಾಧ್ಯವಿಲ್ಲವೋ ಅಂಥವರಿಗೆ, ಜನನ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಕಾಯಂ ವಾಸ ದೃಢೀಕರಣ ಪತ್ರ, ಇತ್ಯಾದಿ ಅಗತ್ಯ ದಾಖಲೆ ಪಡೆದುಕೊಳ್ಳಲು ಸಾಧ್ಯವಾಗುವಂತೆ ನಿಯಮ ಸರಳಗೊಳಿಸಬೇಕು. ಸುಲಭ ಮತ್ತು ಶೀಘ್ರ ದಾಖಲೆಗಳನ್ನು ರಾಜ್ಯ ಸರ್ಕಾರವೇ ಒದಗಿಸಲು ಕ್ರಮ ತೆಗೆದುಕೊಳ್ಳಬೇಕು. ದಾಖಲೆಯಿಲ್ಲ ಎಂಬ ಕಾರಣಕ್ಕೆ ಆತಂಕಕ್ಕೆ ಒಳಗಾಗುವ ಜನರಲ್ಲಿ ವಿಶ್ವಾಸ ತುಂಬಬೇಕು. ಹೆಸರುಗಳ ಉಪನಾಮ, ಇನಿಷಿಯಲ್ ವ್ಯತ್ಯಾಸ, ವಯಸ್ಸಿನ ಅಂತರ ಕಡಿಮೆ ಅಥವಾ ಹೆಚ್ಚಿದೆ ಎಂದು ಮತದಾರರ ಪಟ್ಟಿಯಿಂದ ಕೈ ಬಿಡದಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲು ಚುನಾವಣಾ ಆಯೋಗಕ್ಕೆ ಕೋರಬೇಕು ಎಂದು ಎಂದು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ, ಸಿಪಿಐ ಜಿಲ್ಲಾ ಮುಖಂಡ ಬಿ.ಎ. ಮುಧೋಳ ಹಾಗೂ ಮುಖಂಡರಾದ ಬಿ.ಎಸ್. ಸೊಪ್ಪಿನ, ಬಿ.ಎನ್. ಪೂಜಾರಿ, ಬಾಬಾಜಾನ ಮುಧೋಳ, ಸಿದ್ದು ತೇಜಿ, ಮಂಜುಳಾ ಪವಾರ, ಸಂಗೀತ ಗೌಡ, ರಮೇಶ ಭೂಸ್ಲೆ, ಇಸೂಫ್ ಬಳ್ಳಾರಿ, ಗುರುಸಿದ್ದಪ್ಪ ಅಂಬಿಗೇರ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.