ಅಸಾಮಾನ್ಯ ಸಾಧನೆ ಮೆರೆದ ಮಹಾನುಭಾವ ಸರ್‌ಎಂವಿ

| Published : Mar 03 2024, 01:36 AM IST

ಸಾರಾಂಶ

ಅಸಾಮಾನ್ಯವಾದ ವಿಚಾರಗಳನ್ನು ಸಾಧಿಸಿ, ತೋರಿಸಿದ ವಿಶ್ವೇಶ್ವರಯ್ಯ ಅವರು ಮರಳು ಭೂಮಿಯಲ್ಲಿ ನೀರು ತುಂಬಿಸಿಕೊಟ್ಟ ಮಹಾನುಭಾವ. ಅವರ ಸಾಧನೆ, ಶೋಧನೆ ಮತ್ತು ಆಸಕ್ತಿ ಇಡೀ ದೇಶವೇ ಕೊಂಡಾಡಿದೆ ಎಂದು ಭದ್ರಾವತಿಯ ಹಿರಿಯ ಸಾಹಿತಿ ಜಿ.ವಿ. ಸಂಗಮೇಶ್ವರ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಸಾಮಾನ್ಯವಾದ ವಿಚಾರಗಳನ್ನು ಸಾಧಿಸಿ, ತೋರಿಸಿದ ವಿಶ್ವೇಶ್ವರಯ್ಯ ಅವರು ಮರಳು ಭೂಮಿಯಲ್ಲಿ ನೀರು ತುಂಬಿಸಿಕೊಟ್ಟ ಮಹಾನುಭಾವ ಎಂದು ಭದ್ರಾವತಿಯ ಹಿರಿಯ ಸಾಹಿತಿ ಜಿ.ವಿ. ಸಂಗಮೇಶ್ವರ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪುರುಷ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ಈರಮ್ಮ ವೀರಭದ್ರಪ್ಪ ದತ್ತಿನಿಧಿ ಆಶಯದಂತೆ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಕುರಿತು ಮಾತನಾಡಿದರು.

ಸರ್ ಎಂ.ವಿಶ್ವೇಶ್ವರಯ್ಯ ಅವರ ಸಾಧನೆ, ಶೋಧನೆ ಮತ್ತು ಆಸಕ್ತಿ ಇಡೀ ದೇಶವೇ ಕೊಂಡಾಡಿದೆ. ಕೆರೆ-ಕಟ್ಟೆಗಳನ್ನು ಕಟ್ಟುವುದು ಹೇಗೆ? ಅದಕ್ಕೆ ನೀರು ತುಂಬಿಸುವುದು ಹೇಗೆ? ಬರಡು ನಾಡಿನ ಭೂಮಿಯಲ್ಲಿಯೂ ಅತ್ಯಂತ ಕಡಿಮೆ ಖರ್ಚಿನಲ್ಲಿ ನೀರು ಉಳಿಸುವುದು ಹೇಗೆ ಎಂಬುದನ್ನು ತಮ್ಮ ಪ್ರಯೋಗಾತ್ಮಕ ಚಿಂತನೆಯಿಂದಲೇ ತೋರಿಸಿಕೊಟ್ಟರು ಎಂದರು.

ಬಿಜಾಪುರ, ಹೈದರಾಬಾದ್ ಮುಂತಾದ ಕಡೆಗಳಲ್ಲಿ ತಮ್ಮ ಎಂಜಿನಿಯರಿಂಗ್ ವೃತ್ತಿಯನ್ನು ಮುಂದುವರಿಸಿ, ಅಸಾಧಾರಣ ಪಾಂಡಿತ್ಯ ಪಡೆದಿದ್ದರು. ಆ ಮೂಲಕ ನೀರು ಸಂಗ್ರಹಣೆ ಮತ್ತು ಸರಬರಾಜು ಮಾಡುವ ಕುರಿತು ಅದರ ವೈಶಿಷ್ಟ್ಯಗಳನ್ನು ಪರಿಚಯಿಸಿ, ಸರ್ಕಾರದ ಗಮನ ಸೆಳೆದಿದ್ದಾರೆ. ಅಂದಿನ ಮೈಸೂರು ಮಹಾರಾಜರು ಸರ್‌ಎಂವಿ ಕಾಯಕ ಪ್ರಭುತ್ವಕ್ಕೆ ಬೆರಗಾಗಿದ್ದರು ಎಂದು ಹೇಳಿದರು.

ಮೈಸೂರು ಒಳಗೊಂಡಂತೆ ದೇಶದಲ್ಲಿ ಅನೇಕ ಚೆಕ್ ಡ್ಯಾಮ್‌ಗಳನ್ನು ನಿರ್ಮಿಸುವಲ್ಲಿ ಸರ್ ಎಂ.ವಿ. ತಮ್ಮ ಆಳವಾದ ಜ್ಞಾನವನ್ನು ಕಾಯಕಕ್ಕೆ ಮೀಸಲಾಗಿಟ್ಟರು. ಭದ್ರಾವತಿಯ ಉಕ್ಕು ಕಾರ್ಖಾನೆ ಒಳಗೊಂಡಂತೆ ಲಿಂಗನಮಕ್ಕಿ ಜಲಾಶಯವನ್ನು ನಿರ್ಮಿಸಲು ಅವರು ನೀಡಿದ ಕೊಡುಗೆ ದೊಡ್ಡದು. ಇಂದಿನ ಯುವಜನರು ಸರ್‌ಎಂ.ವಿ. ಅವರ ಜ್ಞಾನ ಮತ್ತು ಬದುಕು ಮಾದರಿ ಆಗಿಟ್ಟುಕೊಂಡು ಮುನ್ನಡೆಯಬೇಕು ಎಂದರು.

ಜಿ.ಶರಶ್ಚಂದ್ರ ರಾನಡೆ ಅವರು ಸ್ಥಾಪಿಸಿರುವ ದತ್ತಿನಿಧಿ ಆಶಯದಂತೆ ವರಕವಿ ಬೇಂದ್ರೆ ಕುರಿತು, ದೀಪಕ್ ಸಾಗರ್ ಮಾತನಾಡಿ, ಕನ್ನಡಕ್ಕೆ ಹೊಸ ಪದಗಳನ್ನು ನೀಡಿದ ಶಬ್ದ ಗಾರುಡಿಗ ದ.ರಾ. ಬೇಂದ್ರೆ. ತಮ್ಮ ಕಾವ್ಯಪ್ರಭೆ ಮೂಲಕವೇ ರಾಜ್ಯದ ಗಮನ ಸೆಳೆದರು. ಉತ್ತರ ಕರ್ನಾಟಕದ ಭಾಷೆಗೆ ತಾರಾ ಮೌಲ್ಯವನ್ನು ತಮ್ಮ ಕಾವ್ಯಗಳ ಮೂಲಕ ತಂದುಕೊಟ್ಟ ಮಹಾನ್ ಕವಿ ಬೇಂದ್ರೆ ಎಂದು ಬಣ್ಣಿಸಿದರು.

ಪ್ರಕೃತಿಯ ರಮಣೀಯತೆಯನ್ನು ಕಾವ್ಯದಲ್ಲಿ ತೆರೆದಿಡುತ್ತಲೇ ದ.ರಾ.ಬೇಂದ್ರೆ ನಿಧಾನವಾಗಿ ಅಧ್ಯಾತ್ಮದೊಡೆಗೆ ತಮ್ಮ ಕವನಗಳನ್ನು ಕೊಂಡೊಯ್ಯುತ್ತಾರೆ. ಅವರಿಗೆ ಯೋಗಿ ಅರವಿಂದರ ಪ್ರಭಾವ ಹೆಚ್ಚಿತ್ತು. ಸಂಖ್ಯಾ ಶಾಸ್ತ್ರವನ್ನು ಅಭ್ಯಾಸ ಮಾಡಿಕೊಂಡಿದ್ದ ಬೇಂದ್ರೆ ಅವರು ಅವುಗಳನ್ನು ಬಳಸಿಕೊಂಡು ಪದ್ಯಗಳನ್ನು ರಚಿಸಿದ್ದಾರೆ. ದೇಶದ ಇತಿಹಾಸದಲ್ಲಿ ಕವಿ ಬರೆದ ಪದ್ಯಕ್ಕೆ ಜೈಲುವಾಸ ಅನುಭವಿಸಿದ್ದು ಬಹಳ ಅಪರೂಪ ಎಂದು ತಿಳಿಸಿದರು.

ಬೇಂದ್ರೆ ಅವರು ಬರೆದ ನರಬಲಿ ಪದ್ಯದ ವಿರುದ್ಧ ಬ್ರಿಟಿಷರು 9 ತಿಂಗಳ ಕಾಲ ಅವರನ್ನು ಹಿಂಡಲಗಾ ಜೈಲಿನಲ್ಲಿ ಇಟ್ಟಿದ್ದರು. ಅಲ್ಲದೇ, ಅವರಿಗೆ ಸರ್ಕಾರಿ ನೌಕರಿಯನ್ನು ನೀಡದಂತೆಯೂ ತಾಕಿತು ಮಾಡಿದ್ದರು. ಬದುಕಿನಲ್ಲಿ ಎಲ್ಲ ಕಷ್ಟಗಳನ್ನು ಅನುಭವಿಸಿ, ಬೇಂದ್ರೆ ತಮ್ಮ ಕಾವ್ಯಪ್ರಭೆ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಅತ್ಯಂತ ಎತ್ತರದಲ್ಲಿ ನಿಲ್ಲುತ್ತಾರೆ ಎಂದರು.

ಇದೇ ವೇಳೆ ಬೇಂದ್ರೆ ಅವರ ನಾದಲೀಲೆ, ಬಾಲಬೋಧೆ, ಬಹತ್ತರ, ಗರಿ, ನಾಕುತಂತಿ, ಮುಂತಾದ ಕವನ ಸಂಕಲನಗಳ ಕವಿತೆಗಳನ್ನು ವಾಚಿಸಿದರು. ಗಾಯಕಿ ಸಹನಾ ಜಿ. ಭಟ್ ವರಕವಿ ಬೇಂದ್ರೆ ಅವರ ಗೀತಗಾಯನ ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್ ಉದ್ಘಾಟಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಎಚ್.ಬಸವರಾಜಪ್ಪ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ಎಂ.ಎಂ.ಸ್ವಾಮಿ ಉಪಸ್ಥಿತರಿದ್ದರು.

- - - -2ಎಸ್‌ಎಂಜಿಕೆಪಿ01:

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯ ಸ್ನಾತಕೋತ್ತರ ಪುರುಷ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ಈರಮ್ಮ ವೀರಭದ್ರಪ್ಪ ದತ್ತಿನಿಧಿ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ್ ಉದ್ಘಾಟಿಸಿದರು.