ಕನ್ನಡಪ್ರಭ ವಾರ್ತೆ, ತುಮಕೂರು
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತಂತೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಎಸ್.ಐ.ಆರ್.ಕುರಿತ ವಿಶೇಷ ಜಾಗೃತಿ ಕಾರ್ಯಾಗಾರವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.ವಿಧಾನಪರಿಷತ್ ಸದಸ್ಯ ಡಾ.ರಮೇಶಬಾಬು ಮಾತನಾಡಿ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಂತರವು ಅರ್ಹ ಮತದಾರ ತನ್ನ ಹಕ್ಕಿನಿಂದ ವಂಚಿತರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಎರಡನೇ ಸ್ವಾತಂತ್ರ ಹೋರಾಟ ಇದಾಗಿದೆ. ಹಾಗಾಗಿ ಪ್ರತಿಯೊಬ್ಬ ಮತದಾರರು ಫಾರಂ ತುಂಬುವ ಮೂಲಕ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮತದಾರರನ್ನು ಸಂಪರ್ಕಿಸಿ,ಅವರಲ್ಲಿ ಜಾಗೃತಿ ಮೂಡಿಸುವ ಮೂಲಕ ಅವರ ಹಕ್ಕುಗಳನ್ನು ಕಾಪಾಡಬೇಕಿದೆ ಎಂದರು.
ಕೇಂದ್ರ ಸರ್ಕಾರ ಈಗಾಗಲೇ ಎಸ್.ಐ.ಆರ್.ನಂತರ ಅಧಿಕೃತ ಮತಪಟ್ಟಿಯಲ್ಲಿ ಇರುವ ಮತದಾರರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ನೀಡಲಾಗುವುದು ಎಂದು ಹೇಳಿದೆ.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಹ ಇದೇ ವಿಚಾರವನ್ನು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ.ಎಸ್.ಐ.ಆರ್.ವೇಳೆ ನಾವು ಕೊಂಚ ಎಡವಿದರೂ ಸಹ ಮತದಾನದ ಹಕ್ಕಿನ ಜೊತೆಗೆ,ಸರ್ಕಾರ ಸವಲತ್ತುಗಳಿಂದಲು ವಂಚಿತವಾಗಬೇಕಾಗುತ್ತಿದೆ.ಹಾಗಾಗಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಎಲ್ಲಾ ಕಾರ್ಯಕರ್ತರು ಸಹ ಪ್ರತಿ ಮಾಹಿತಿಯನ್ನು ಅರ್ಥ ಮಾಡಿಕೊಂಡು,ಜನರಿಗೆ ಅದನ್ನು ಅರ್ಥಮಾಡಿಸಿ ಫಾರಂ ತುಂಬುವಂತೆ ಮಾಡಿ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಡಾ.ರಮೇಶಬಾಬು ತಿಳಿಸಿದರು.ಕೆಪಿಸಿಸಿ ಉಪಾಧ್ಯಕ್ಷರಾದ ಮುರಳೀಧರ ಹಾಲಪ್ಪ ಮಾತನಾಡಿ, ಎಸ್.ಐ.ಆರ್.ನಿಂದಾಗಿ ಎಷ್ಟೇ ಅತಿರಥ, ಮಹಾರಥ ರೆನಿಸಿಕೊಂಡ ರಾಜಕೀಯ ಧುರೀಣರು ಸಹ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಸೋಲು ಕಂಡಿದ್ದಾರೆ. ಎಸ್.ಐ.ಆರ್ ನಿಂದ ಶಾಸನ ಸಭೆ, ಸಂಸತ್ ಸದಸ್ಯರಿಗೆ ಮಾತ್ರ ತೊಂದರೆಯಾಗುವುದಿಲ್ಲ.ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ,ಗ್ರಾಮಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವವರಿಗೂ ಹೊಡೆತ ಬೀಳಲಿದೆ. ಹಾಗಾಗಿ ಪ್ರತಿ ಹಳ್ಳಿಯಲ್ಲಿಯೂ ಮತದಾರರ ಹಕ್ಕು ರಕ್ಷಣೆಗೆ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕಾಗಿದೆ.ಒಂದು ವೇಳೆ ಮೈಮರೆತರೆ ನಾವು ಸೋಲುವ ಜೊತೆಗೆ, ಪಕ್ಷವೂ ಅಧಿಕಾರ ಕಳೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಎಸ್.ಐ.ಆರ್.ನಿಂದ ಸಾಕಷ್ಟು ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗುತಿದ್ದಾರೆ.ಹಾಗಾಗಿ ಕಾಂಗ್ರೆಸ್ ಪಕ್ಷ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡು,ಮತದಾನದ ಹಕ್ಕಿನಿಂದ ಆರ್ಹರು ವಂಚಿತರಾಗಬಾರದು ಎಂಬ ಆಶಯದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರಾಜ್ಯದಾದ್ಯಂತ ಕಾಂಗ್ರೆಸ್ ನಡೆ ನಿಮ್ಮ ಮತರಕ್ಷಣೆಯ ಕಡೆ ಎಂಬ ಜಾಗೃತಿ ಅಭಿಯಾನವನ್ನು ಆಯೋಜಿಸಿದೆ ಎಂದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಎಸ್.ಐ.ಆರ್ ಎಂಬುದು ಒಂದು ಸಾಮಾನ್ಯ ಪ್ರಕ್ರಿಯೆ ಯಾಗಿದ್ದರೂ ತಾನು ಅಧಿಕಾರದಲ್ಲಿ ಮುಂದುವರೆಯಬೇಕೆಂಬ ಉದ್ದೇಶದಿಂದ ವಿಶೇಷ ಪರೀಕ್ಷರಣೆಗೆ ಕೇಂದ್ರ ಮುಂದಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿದೆ. ನಮ್ಮೊಂದಿಗೆ ಅನೇಕ ಸಂಘ ಸಂಸ್ಥೆಗಳು ಕೈಜೋಡಿಸಿವೆ. ಬೂತ್ ಲೆವಲ್ ಏಜೆಂಟರು ಪ್ರತಿ ಮತದಾರರ ಹಕ್ಕು ರಕ್ಷಿಸಲು ಹೋರಾಟಕ್ಕೆ ಅಣಿಯಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ, ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಎಂಬುದು ಸ್ವಾಯತ್ತ ಸಂಸ್ಥೆಗಳು ಒಗ್ಗೂಡಿ ಬಿಜೆಪಿಯನ್ನು ನಿರಂತರವಾಗಿ ಅಧಿಕಾರದಲ್ಲಿ ಇಡುವ ಹುನ್ನಾರ ವಾಗಿದೆ. ಇದರ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಇಡೀ ರಾಜ್ಯದಾದ್ಯಂತ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್ ಪಕ್ಷದ ಮುಖಂಡರು, ಮಂಚೂಣಿ ಘಟಕದ ಮುಖ್ಯಸ್ಥರು, ಹಾಗೂ ಬಿಎಲ್‌ಓ 2 ಅವರು ಬಿ.ಎಲ್.ಓ 01ರ ಜೊತೆಗೆ ಸಂಪರ್ಕ ಪಡೆದು, ಮತದಾರರ ನೊಂದಣಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರುವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್, ಮಾಜಿ ಶಾಸಕರಾದ ಕೆ.ಎಸ್.ಕಿರಣ್‌ಕುಮಾರ್, ಡಾ.ಎಸ್.ಷಪಿಅಹಮದ್,ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ.ಆರ್,ಷಣ್ಮುಗಪ್ಪ, ಕೆಂಚಮಾರಯ್ಯ, ಹೆಚ್.ಸಿ.ಹನುಮಂತಯ್ಯ, ಜಾಗೃತ ಕರ್ನಾಟಕದ ಡಾ.ಬಸವರಾಜು, ಡಾ.ಅನಿಲ್‌ಕುಮಾರ್ ಚಿಕ್ಕದಾಳವಾಟ,ಚಂದನ್, ಏದ್ದೇಳು ಕರ್ನಾಟಕದ ಇಂದಿರಮ್ಮ, ರಾಮಚಂದ್ರಯ್ಯ,ತಾಜುದ್ದೀನ್ ಷರೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
