ಬಿಜೆಪಿ ರಾಜಕೀಯ ಲಾಭದ ತಂತ್ರಗಾರಿಕೆಯಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಮೂಲಕ ದಲಿತರು, ಅಲ್ಪ ಸಂಖ್ಯಾತರು, ಅನಕ್ಷರಸ್ಥರ ಮತದಾನದ ಹಕ್ಕನ್ನೇ ಕಸಿದುಕೊಳ್ಳಲು ಮುಂದಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಬಿಜೆಪಿ ರಾಜಕೀಯ ಲಾಭದ ತಂತ್ರಗಾರಿಕೆಯಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಮೂಲಕ ದಲಿತರು, ಅಲ್ಪ ಸಂಖ್ಯಾತರು, ಅನಕ್ಷರಸ್ಥರ ಮತದಾನದ ಹಕ್ಕನ್ನೇ ಕಸಿದುಕೊಳ್ಳಲು ಮುಂದಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಇರುವ ಅನಗತ್ಯ ಹೆಸರುಗಳನ್ನು ಪಟ್ಟಿಯಿಂದ ತೆಗೆಯುವ ಸಲುವಾಗಿ ಪರಿಷ್ಕರಣೆ ಅಗತ್ಯ. ಇದಕ್ಕೆ ಅಗತ್ಯ ಸಮಯ ನೀಡದೇ ಬಿಜೆಪಿ ಜಾರಿಗೆ ತಂದಿರುವ ಎಸ್‍ಐಆರ್ ಉದ್ದೇಶ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದಾಗಿದೆ. ಈ ಪ್ರಯೋಗದಿಂದ ಈಚೆಗೆ ದೇಶದಲ್ಲಿ ನಡೆದಿರುವ ಬಿಹಾರ ಮತ್ತು ಪಶ್ಷಿಮ ಬಂಗಾಳದಲ್ಲಿ ಬಿಜೆಪಿ ರಾಜಕೀಯ ಲಾಭ ಗಳಿಸಿದ್ದು ಕರ್ನಾಟಕದಲ್ಲೂ ಈ ಪ್ರಯತ್ನವನ್ನು ಮುಂದುವರಿಸಿದೆ. ಪಶ್ಷಿಮ ಬಂಗಾಳದಲ್ಲಿ 27 ಲಕ್ಷ ಮಂದಿ ಮತದಾನದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಹೂಡಿರುವ ಈ ತಂತ್ರಗಾರಿಕೆಯಿಂದ ಆಗುವ ಅನಾಹುತದ ಬಗ್ಗೆ ಅನಕ್ಷರಸ್ಥರು ಮಾತ್ರವಲ್ಲದೇ ವಿದ್ಯಾವಂತರಿಗೂ ಸರಿಯಾದ ಮಾಹಿತಿ ಇಲ್ಲದ ಕಾರಣ ಮತದಾನದಿಂದ ವಂಚಿತರಾಗುವುದು ಖಚಿತ. ಈ ನೆಲದಲ್ಲಿ ಹುಟ್ಟಿದವರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದೇ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಉದ್ದೇಶವಾಗಿದ್ದು ಬಿಜೆಪಿ ಸರ್ವಾಧಿಕಾರಿ ಧೋರಣೆಯ ತಂತ್ರಗಾರಿಕೆಯನ್ನು ರಾಜ್ಯದ ಮತದಾರರು ಅರ್ಥಮಾಡಿಕೊಳ್ಳಬೇಕಿದೆ ಎಂದರು.

ಜಾತಿಧರ್ಮದ ಭೇದವಿಲ್ಲದೇ ಈ ದೇಶದಲ್ಲಿ ಹುಟ್ಟಿದವರಿಗೆ ಚಲಾಯಿಸುವ ಹಕ್ಕಿದೆ. ಜೂನ್ 30 ನೇ ತಾರೀಕಿನಿಂದ ಆಗಸ್ಟ್ 5 ರೊಳಗೆ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸದವರಿಗೆ ಮತದಾನದ ಹಕ್ಕೇ ಇರುವುದಿಲ್ಲ. ಮತ್ತು ಸರ್ಕಾರದ ಸವಲತ್ತುಗಳಿಂದಲೂ ವಂಚಿತರಾಗುತ್ತಾರೆ. ಆಗಸ್ಟ್ 5 ನೇ ತಾರೀಕಿನ ಒಳಗೆ ಅರ್ಜಿ ಸಲ್ಲಿಸಬೇಕು ಅಥವಾ ಸಮೀಕ್ಷೆಗಾಗಿ ಮನೆಗಳಿಗೆ ಬರುವ ಬಿಎಲ್‍ಓಗಳಿಗೆ ಸರಿಯಾದ ಮಾಹಿತಿ ನೀಡಬೇಕು. ಅವೈಜ್ಞಾನಿಕವಾದ ಈ ಪರಿಷ್ಕರಣೆಯ ಬಗ್ಗೆ ಸುಪ್ರೀಂ ಕೋರ್ಟ್ ಕೂಡಾ ಒಪ್ಪಿಗೆ ನೀಡಿದ್ದು ಜನಜಾಗೃತಿಗೊಳಿಸುವುದೊಂದೆ ಪರಿಹಾರ ಮಾರ್ಗವಾಗಿದೆ ಎಂದೂ ಹೇಳಿದರು.

ಆರ್‍ಎಸ್‍ಎಸ್ ಬಗ್ಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆಯವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ದೇಶಪ್ರೇಮ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಆ ಸಂಘಟನೆಯಲ್ಲಿ ಚುನಾವಣೆಯೇ ಇಲ್ಲಾ. ಈ ನೆಲದ ಕಾನೂನನ್ನೂ ಪಾಲಿಸದೇ ನೂರು ವರ್ಷ ಇತಿಹಾಸದ ಆರ್‍ಎಸ್‍ಎಸ್‍ನಲ್ಲಿ ಮಹಿಳೆಯರಿಗೆ ಆದ್ಯತೆಯೇ ಇಲ್ಲ ಈವರೆಗೆ ನೋಂದಣಿಯನ್ನು ಯಾಕೆ ಮಾಡಿಲ್ಲಾ ಈ ಬಗ್ಗೆ ಜನರು ತೀರ್ಮಾನಿಸಬೇಕಿದೆ ಎಂದರು.

ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರುಗಳಾದ ಶಬನಂ ಮಂಜುಳಾ ನಾಗೇಂದ್ರ ಹಾಗೂ ವಿಲಿಯಂ ಮಾರ್ಟಿಸ್ ಇದ್ದರು.