ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಅಬ್ಸೆಂಟ್ ಅಥವಾ ಶಿಫ್ಟೆಡ್ ಪಟ್ಟಿಯಲ್ಲಿ ಹೆಸರು ಬಂದಿರುವವರು, ತಮ್ಮ ತಾಲೂಕಿನ ತಹಸೀಲ್ದಾರರು, ಮತದಾರರ ನೋಂದಣಾಧಿಕಾರಿ ಅಥವಾ ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಿ ನಮೂನೆ ಭರ್ತಿ ಮಾಡಿ ನೀಡಲು ಅವಕಾಶವಿದೆ.
ಕೊಪ್ಪಳ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ರಮದ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪರಿಷ್ಕರಿಸಿ ಮರು ನಿಗದಿಪಡಿಸಿದ್ದು, ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸಲು ಆ. 17ರ ವರೆಗೆ ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮರುನಿಗದಿತ ಪರಿಷ್ಕರಣೆ ವೇಳಾಪಟ್ಟಿಯಂತೆ ಬಿಎಲ್‌ಒಗಳಿಂದ ಮನೆ ಮನೆ ಭೇಟಿ ಮತ್ತು ಮತಗಟ್ಟೆಗಳ ರ‍್ಯಾಷನಲೈಜೆಷನ್ ಆ. 17ರ ವರೆಗೆ ನಡೆಯಲಿದೆ. ಆ. 24ರಂದು ಕರಡು ಮತದಾರರ ಪಟ್ಟಿ ಪ್ರಕಟಣೆಯಾಗಲಿದೆ. ಆ. 24ರಿಂದ ಸೆ. 23ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ. ಆ. 24ರಿಂದ ಅ. 22ರ ವರೆಗೆ ನೋಟಿಸ್ ಅವಧಿ ಮತ್ತು ಹಕ್ಕು-ಆಕ್ಷೇಪಣೆಗಳ ವಿಲೇವಾರಿ ನಡೆಯಲಿದೆ. ಅ. 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆಯಾಗಲಿದೆ. ಜಿಲ್ಲೆಯ ನಾಗರಿಕರು ಹಾಗೂ ಮತದಾರರು ಈ ನಿಗದಿತ ಅವಧಿಯಲ್ಲಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಿಕೊಳ್ಳಬೇಕು ಎಂದರು.ಎಸ್‌ಐಆರ್ ಪ್ರಕ್ರಿಯೆಗೆ ಉತ್ತಮ ಸಹಕಾರ: ಜಿಲ್ಲೆಯಲ್ಲಿ ಹಂಚಿಕೆ ಮಾಡಲಾದ 11,90,214 ಗಣತಿ ನಮೂನೆಗಳಲ್ಲಿ ಇಲ್ಲಿಯವರೆಗೆ 10,41,046 ನಮೂನೆಗಳನ್ನು ಯಶಸ್ವಿಯಾಗಿ ಡಿಜಿಟಲೀಕರಣ ಮಾಡಲಾಗಿದೆ. ಬಿಎಲ್‌ಒಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಗದ ಮತದಾರರನ್ನು ಅಬ್ಸೆಂಟ್, ಶಿಫ್ಟೆಡ್, ಡೆಡ್, ಡುಪ್ಲಿಕೇಟ್, ಅದರ್ ಎಂದು ಗುರುತಿಸಲಾಗಿದ್ದು, ಇದರಲ್ಲಿ ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 1,49,168 ಮತದಾರರ (ಎ.ಎಸ್.ಡಿ.ಡಿ.ಒ.) ಪಟ್ಟಿಯನ್ನು ಜಿಲ್ಲಾ ವೆಬ್‌ಸೈಟ್‌ನಲ್ಲಿ https://koppal.nic.in/en/election/ ಪ್ರಚುರಪಡಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತಗಟ್ಟೆವಾರು ಮತದಾರರ ವಿವರವನ್ನು ಎಲ್ಲ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ನೀಡಲಾಗುತ್ತಿದೆ ಎಂದರು.
ಜಿಲ್ಲೆಯ ಎಲ್ಲ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಎಸ್‌ಡಿಡಿಒ ಪಟ್ಟಿ ನೀಡಲಾಗಿದ್ದು, ಅವರು ಸಹ ತಮ್ಮ ಬೂತ್ ಮಟ್ಟದ ಏಜೆಂಟರ ಸಹಾಯದಿಂದ ಪರಿಶೀಲಿಸಿ, ಆಕ್ಷೇಪಣೆಯನ್ನು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳು ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಸಲ್ಲಿಸಬಹುದು ಎಂದು ತಿಳಿಸಿದೆ.ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ 1315 ಮತಗಟ್ಟೆಗಳ ಪೈಕಿ 1200ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳಿಗೆ ಪ್ರತ್ಯೇಕ ಹೆಚ್ಚುವರಿಯಾಗಿ 37 ಮತಗಟ್ಟೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಅಬ್ಸೆಂಟ್ ಅಥವಾ ಶಿಫ್ಟೆಡ್ ಪಟ್ಟಿಯಲ್ಲಿ ಹೆಸರು ಬಂದಿರುವವರು, ತಮ್ಮ ತಾಲೂಕಿನ ತಹಸೀಲ್ದಾರರು, ಮತದಾರರ ನೋಂದಣಾಧಿಕಾರಿ ಅಥವಾ ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಿ ನಮೂನೆ ಭರ್ತಿ ಮಾಡಿ ನೀಡಲು ಅವಕಾಶವಿದೆ. ಹೊಸ ಮತದಾರರು, ಮತದಾರರ ಪಟ್ಟಿಯಿಂದ ಹೊರಗುಳಿದವರು ''ನಮೂನೆ 6'' ಸಲ್ಲಿಸಿ ಹೆಸರು ಸೇರಿಸಲು ವಿಶೇಷ ನೋಂದಣಿ ಅಭಿಯಾನ ಮತ್ತು ಕ್ಯಾಂಪ್‌ಗಳನ್ನು ಆಯೋಜಿಸಲಾಗುವುದು ಎಂದರು.ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಚುನಾವಣಾ ತಹಸೀಲ್ದಾರ್ ರವಿ ವಸ್ತ್ರದ್, ಜಿಲ್ಲಾ ಚುನಾವಣಾ ಶಾಖೆಯ ಶಿರಸ್ತೇದಾರರು ಇದ್ದರು.