ಶಿರಾ: ಹಾಸ್ಟೆಲ್‌ನಲ್ಲಿ ಮಕ್ಕಳಿಲ್ಲದಿದ್ದರೂ ಸಂಪೂರ್ಣ ಹಾಜರಾತಿ

| Published : Feb 05 2024, 01:46 AM IST

ಶಿರಾ: ಹಾಸ್ಟೆಲ್‌ನಲ್ಲಿ ಮಕ್ಕಳಿಲ್ಲದಿದ್ದರೂ ಸಂಪೂರ್ಣ ಹಾಜರಾತಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಾ ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಶಿರಾ ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಹಿಂದೆ 2023 ಆಗಸ್ಟ್ ೧ನೇ ತಾರೀಕು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ತುಮಕೂರು ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಎಲ್ಲಾ ವಸತಿ ನಿಲಯಗಳಲ್ಲೂ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಶಾಶ್ವತ ಫಲಕದಲ್ಲಿ ಪ್ರದರ್ಶಿಸುವುದು, ಮಕ್ಕಳ ರಕ್ಷಣಾ ನೀತಿ ರೂಪಿಸುವುದು, ಮಕ್ಕಳ ಸುರಕ್ಷತಾ ಸಮಿತಿ ರಚಿಸಿ ನಿಗದಿತವಾಗಿ ಸಭೆ ನಡೆಸಿ ದಾಖಲೆ ನಿರ್ವಹಿಸುವುದು ಸೇರಿದಂತೆ ಹಲವು ಸಲಹೆಗಳನ್ನು ನೀಡಲಾಗಿತ್ತು.

ಆದರೆ ಸದಸ್ಯರು ಭೇಟಿ ನೀಡಿದ ಎರಡೂ ವಸತಿ ನಿಲಯಗಳಲ್ಲೂ ಇದಾವುದೂ ಅನುಷ್ಠಾನವಾಗಿಲ್ಲದಿರುವುದು ಕಂಡುಬಂದಿತು. ಜಿಲ್ಲಾ ಮಟ್ಟದ ಅಧಿಕಾರಿಗಳು ಕೇವಲ ಸಭೆಗಳಲ್ಲಿ ಭಾಗವಹಿಸಿ ವರದಿ ನೀಡುತ್ತಾ ತಳಮಟ್ಟದಲ್ಲಿ ಅದನ್ನು ಅನುಷ್ಠಾನ ಮಾಡದಿರುವ ಹಾಗೂ ಮೇಲ್ವಿಚಾರಣೆ ನಡೆಸದಿರುವ ಬಗ್ಗೆ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಶಿರಾ ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಬೌತಿಕ ವಾತಾವರಣ ಹಾಗೂ ಸ್ವಚ್ಛತೆ ಉತ್ತವಾಗಿದೆ. ಆದರೆ ವಸತಿ ನಿಲಯದಲ್ಲಿ 108 ಮಕ್ಕಳು ದಾಖಲಾತಿ ಪಡೆದಿದ್ದರೂ ಸದಸ್ಯರ ಭೇಟಿಯ ಸಮಯದಲ್ಲಿ ಕೇವಲ 46 ಮಕ್ಕಳು ಹಾಜರಿದ್ದರು. ಈ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದ ಸದಸ್ಯರು ಸಾಕಷ್ಟು ಮಕ್ಕಳು ವಸತಿ ನಿಲಯದಲ್ಲಿ ಇಲ್ಲದಿದ್ದರೂ ಸಂಪೂರ್ಣ ಹಾಜರಾತಿ ಹಾಕುತ್ತಿರುವುದನ್ನು ಗಮನಿಸಿದರು.

ಈ ಬಗ್ಗೆ ಸದಸ್ಯರು ಹಾಜರಿದ್ದ ಮಕ್ಕಳನ್ನು ಪ್ರಶ್ನಿಸಿದಾಗ ಕೆಲವು ಮಕ್ಕಳು ನಿಲಯದಲ್ಲಿ ಊಟ ಮುಗಿಸಿ ಮನೆಗೆ ತೆರಳುವುದು, ಕೆಲವು ಮಕ್ಕಳು ಊರಿಗೆ ಹೋದರೆ ವಾರಗಟ್ಟಲೆ ವಾಪಾಸ್ ಬರುವುದಿಲ್ಲವೆಂದು ಮಾಹಿತಿ ನೀಡಿದರು. ಆದರೆ ನಿಲಯ ಪಾಲಕರು ಆ ಎಲ್ಲಾ ಮಕ್ಕಳಿಗೂ ಹಾಜರಾತಿ ನೀಡಿರುವುದು ಹಲವು ಅನುಮಾನಕ್ಕೆ ಕಾರಣವಾಯಿತು.

ತಾಲೂಕಿನ ಚಿಕ್ಕನಹಳ್ಳಿಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದಾಗಲೂ ಇದೆ ಅಂಶವನ್ನು ಗಮನಿಸಲಾಯಿತು. ಸದರಿ ವಸತಿ ನಿಲಯದಲ್ಲಿ 80 ಮಕ್ಕಳು ದಾಖಲಾತಿ ಪಡೆದಿದ್ದರೂ ಸದಸ್ಯರ ಭೇಟಿಯ ಸಮಯದಲ್ಲಿ ಕೇವಲ 40 ಮಕ್ಕಳು ಹಾಜರಿದ್ದರು.

ಭೇಟಿಯ ಸಮಯದಲ್ಲಿ ನಿಲಯದ ಮೇಲ್ವಿಚಾರಕ ಹಾಜರಿರಲಿಲ್ಲ. ಅಡುಗೆ ಸಿಬ್ಬಂದಿಯೇ ಮಕ್ಕಳ ಮೇಲ್ವಿಚಾರಣೆ ಮಾಡುತ್ತಿದ್ದರು. ಸದರಿ ವಸತಿ ನಿಲಯದಲ್ಲಿ ಮಕ್ಕಳಿಗೆ ಸಮವಸ್ತ್ರ ಬ್ಯಾಗ್ ವಿತರಣೆಯಾಗಿಲ್ಲದಿರುವುದು, ಕ್ರೀಡಾ ಸಾಮಗ್ರಿ ಪೂರೈಕೆಯಾಗಿಲ್ಲದಿರುವುದು, ಮಕ್ಕಳಿಗೆ ಅಗತ್ಯವಾದಷ್ಟು ಮಂಚ ಹಾಗೂ ಹಾಸಿಗೆ ಇಲ್ಲದಿರುವುದು, ವಾಟರ್‌ ಫಿಲ್ಟರ್‌ ದುರಸ್ತಿಯಾಗದಿರುವುದು ಸೇರಿದಂತೆ ಮಕ್ಕಳು ಹಲವು ಸಮಸ್ಯೆಗಳನ್ನು ಸದಸ್ಯರ ಗಮನಕ್ಕೆ ತಂದರು.

ಮಕ್ಕಳ ಜೊತೆಗೆ ಸಂವಾದ ನಡೆಸಿದ ಸದಸ್ಯರು ಈ ಸಮಸ್ಯೆಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲು ಸೂಚಿಸುವ ಭರವಸೆ ನೀಡಿದರು. ಒಟ್ಟಾರೆ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಹೆಚ್ಚಿನ ಹಾಜರಾತಿ ನೀಡುತ್ತಿರುವುದು ಮೇಲ್ನೋಟಕ್ಕೆ ಅವ್ಯವಹಾರ ನಡೆಯುತ್ತಿದೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಂಬಂಧಿಸಿದ ಅಧಿಕಾರಿಗಳಿಂದ ವಿವರಣೆ ಪಡೆಯುವುದಾಗಿ ತಿಳಿಸಿದರು.