ಶಿರಾ: ಇಂದು ಬರಗೂರಲ್ಲಿ 2 ಕೋಟಿ ವೆಚ್ಚದ ಸರ್ಕಾರಿ ಶಾಲೆ ಉದ್ಘಾಟನೆ

| Published : Feb 03 2024, 01:50 AM IST

ಸಾರಾಂಶ

ಫೆ. 3 ರ ಶನಿವಾರ ತಾಲೂಕಿನ ಬರಗೂರಿನಲ್ಲಿ 2 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ಉದ್ಘಾಟನೆ ಮಾಡಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಪ್ರತಿಯೊಂದು ಊರಿನಲ್ಲೂ ದೇವಸ್ಥಾನಗಳು ಅಭಿವೃದ್ಧಿಯಾದಂತೆ ಸರ್ಕಾರಿ ಶಾಲೆಗಳೂ ಸಹ ಅಭಿವೃದ್ಧಿಯಾಗಬೇಕು. ಆಗ ಮಾತ್ರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಹೆಚ್ಚು ಅನುದಾನ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಹೇಳಿದರು.

ನಗರದ ಸೇವಾ ಸದನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ವಿಧಾನಪರಿಷತ್ ಸದಸ್ಯನಾಗಿ ಆಯ್ಕೆಯಾದಾಗಿನಿಂದ ಪ್ರತಿ ವರ್ಷ ನನ್ನ ಹುಟ್ಟು ಹಬ್ಬಕ್ಕೆ ಒಂದೊಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿ ಅದೇ ದಿನವೇ ಉದ್ಘಾಟನೆ ಮಾಡುತ್ತೇನೆ ಎಂದು ಹೇಳಿದ್ದೆ ಅದೇ ರೀತಿ ಕಳೆದ 2023ನೇ ವರ್ಷದ ಹುಟ್ಟು ಹಬ್ಬದಲ್ಲಿ ಶಿರಾ ನಗರದ ಐತಿಹಾಸಿಕ ಬಾಲಕರ ಪ್ರೌಢಶಾಲೆಗೆ ನೂತನ ಹೈಟೆಕ್ ಶಾಲಾ ಕಟ್ಟಡಕ್ಕೆ 5 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದೆ. ಅದೇ ರೀತಿ ಈ ವರ್ಷವೂ ಕೂಡ ಫೆ. 3 ರ ಶನಿವಾರ ತಾಲೂಕಿನ ಬರಗೂರಿನಲ್ಲಿ 2 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ಉದ್ಘಾಟನೆ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಟಿ.ಬಿ. ಜಯಚಂದ್ರ ವಹಿಸುವರು. ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ, ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಶಿಕ್ಷಣ ಸಚಿವ ಮಧುಬಂಗಾರಪ್ಪ, ಸಂಸದ ಜಿ.ಎಸ್. ಬಸವರಾಜು, ರಾಜ್ಯ ಸಭಾ ಸದಸ್ಯ ಜಗ್ಗೇಶ್, ವಿಧಾನಪರಿಷತ್ ಸದಸ್ಯರಾದ ಡಾ.ವೈ.ಎ. ನಾರಾಯಣಸ್ವಾಮಿ, ಕೆ.ಎ. ತಿಪ್ಪೇಸ್ವಾಮಿ, ಆರ್‌. ರಾಜೇಂದ್ರ ಭಾಗವಹಿಸುವರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ತಾ.ಪಂ. ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ನಿವೃತ್ತ ಶಿಕ್ಷಕ ಕುಮಾರ್‌, ಮಾಜಿ ಗ್ರಾ.ಪಂ. ಅಧ್ಯಕ್ಷ ಈರಣ್ಣ ಪಟೇಲ್, ಸದಸ್ಯರಾದ ಎಂ.ಶಿವಲಿಂಗಯ್ಯ, ಮುಖಂಡರಾದ ನಾದೂರು ಕುಮಾರ್‌, ಎಂಜಿನಿಯರ್‌ ರಂಗನಾಥ್ ಇದ್ದರು.