ಸಾವಿನ ಮನೆಗೂ ಸೈರನ್ ಹಾಕಿ ಶೃಂಗೇರಿ ಶಾಸಕರ ಓಡಾಟ: ಮಾಜಿ ಸಚಿವ ಜೀವರಾಜ್

| Published : Feb 16 2025, 01:48 AM IST

ಸಾವಿನ ಮನೆಗೂ ಸೈರನ್ ಹಾಕಿ ಶೃಂಗೇರಿ ಶಾಸಕರ ಓಡಾಟ: ಮಾಜಿ ಸಚಿವ ಜೀವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ ಕ್ಷೇತ್ರ ಶಾಸಕ ರಾಜೇಗೌಡರು ಸಾವಿನ ಮನೆಗೆ ಸಂತಾಪ ಹೇಳಲು ಹೋಗುವಾಗಲೂ ಸೈರನ್ ಹಾಕಿಯೇ ಓಡಾಟ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಜೀವರಾಜ್ ಆರೋಪಿಸಿದರು.

ಸಹಕಾರಿ ಕ್ಷೇತ್ರಗಳ ಚುನಾವಣೆಯಲ್ಲಿ ಜಯಿಸಿದ ಬಿಜೆಪಿ ಕಾರ್ಯಕರ್ತರಿಗೆ ಸನ್ಮಾನ

ಕನ್ನಡಪ್ರಭ ವಾರ್ತ ಕೊಪ್ಪ

ಶೃಂಗೇರಿ ಕ್ಷೇತ್ರ ಶಾಸಕ ರಾಜೇಗೌಡರು ಸಾವಿನ ಮನೆಗೆ ಸಂತಾಪ ಹೇಳಲು ಹೋಗುವಾಗಲೂ ಸೈರನ್ ಹಾಕಿಯೇ ಓಡಾಟ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಜೀವರಾಜ್ ಆರೋಪಿಸಿದರು.

ಕೊಪ್ಪ ಮಂಡಲದ ಭಾಜಾಪ ಕಚೇರಿಯಲ್ಲಿ ಸಹಕಾರಿ ಕ್ಷೇತ್ರಗಳ ನಿರ್ದೇಶಕ ಹಾಗೂ ತೆರವುಗೊಂಡ ಗ್ರಾಪಂ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಕಾರ್ಯಕರ್ತರಿಗೆ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ಈ ಹಿಂದಿನ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಜೀವರಾಜ್ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆಪಾದಿಸುತ್ತಿದ್ದ ಶೃಂಗೇರಿ ಶಾಸಕ ರಾಜೇಗೌಡರ ಕೈಯಲ್ಲಿ ಶಾಸಕರ ಅಧಿಕಾರದೊಂದಿಗೆ ಕ್ಯಾಬಿನೆಟ್ ದರ್ಜೆಯ ಅಧಿಕಾರಗಳಿದ್ದರೂ ತಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ಅಡ್ಡಗಾಲು ಹಾಕುವವರು ಯಾರೂ ಇಲ್ಲದಿದ್ದರೂ ತಮ್ಮ ಕ್ಷೇತ್ರದ ಅಭಿವೃದ್ಧಿಯಲ್ಲಿ ವಿಫಲರಾಗಿದ್ದಾರೆ ಎಂದರು.

ದೌರ್ಜನ್ಯ ಮತ್ತು ದ್ವೇಷ ರಾಜಕಾರಣವನ್ನು ಮೈಗೂಡಿಸಿಕೊಂಡಿರುವ ಶಾಸಕರ ಕ್ಷೇತ್ರದಲ್ಲಿ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಶೃಂಗೇರಿಯಲ್ಲಿ ನಡೆದ ಹಿಟ್ ಅಂಡ್ ರನ್ ಕೇಸಿನಲ್ಲಿ ಆಕ್ಸಿಡೆಂಟ್ ಆಗಿ ಗಾಯವಾದವರನ್ನು ಜೈಲಿಗೆ ಕಳುಹಿಸಿದ್ದಾರೆ. ಅತ್ತಿಕೊಡಿಗೆ ಪಿಎಸಿಎಸ್ ಬ್ಯಾಂಕಿನ ಅಧ್ಯಕ್ಷ ಸ್ಥಾನದ ಚುನಾವಣೆ ತಪ್ಪಿಸಲು ಪ್ರಯತ್ನಿಸಿದರು. ಆದರೂ ಬಿಜೆಪಿ ಬೆಂಬಲಿತರು ಅಲ್ಲಿ ಗೆದ್ದು ಅಧ್ಯಕ್ಷರಾಗಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೆಂಡದಿಂದ ಹಿಡಿದು ಮೆಟ್ರೋ, ಹಾಲು, ರಿಜಿಸ್ಟ್ರೇಷನ್ ಶುಲ್ಕ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಏನು ಕೇಳಿದರೂ ೨೦೦೦ ಕೊಟ್ಟಿದ್ದೇವೆ ಎನ್ನುತ್ತಾರೆ. ಹೆಂಡತಿಗೆ ೨೦೦೦ ಕೊಟ್ಟು ಗಂಡನಿಂದ ದುಪ್ಪಟ್ಟು ವಸೂಲಿ ಮಾಡಲಾಗುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮುಂದಿನ ಮೂರು ವರ್ಷಗಳಲ್ಲಿ ಪಂಚಾಯಿತಿ, ಡಿಸಿಸಿ ಬ್ಯಾಂಕ್ , ವಿಧಾನಸಭಾ ಚುನಾವಣೆಗಳು ಬರಲಿದ್ದು ಇದು ಸವಾಲಿನ ಸಮಯ. ಕಾರ್ಯಕರ್ತರಲ್ಲಿ ಏನೇ ಸಣ್ಣಪುಟ್ಟ ಸಮಸ್ಯೆ ಗಳಿದ್ದರೂ ಅದನ್ನು ಬಗೆಹರಿಸಿಕೊಂಡು ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲ್ಲುವಂತೆ ನೋಡಿಕೊಳ್ಳಬೇಕು. ಬಿಜೆಪಿ ದೇಶದಲ್ಲಿ ಅತೀ ದೊಡ್ಡ ಕಾರ್ಯಕರ್ತರ ಪಕ್ಷವಾಗಿದೆ ಎಂದರು.

ಕೊಪ್ಪ ಟಿಎಪಿಸಿಎಂಎಸ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಅನ್ನಪೂರ್ಣ ಸೇಲ್ಸ್ ಅಂಡ್ ಸರ್ವಿಸ್‌ನ ನವೀನ್ ಕುಮಾರ್, ಕಲ್ಕೆರೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ವಿಶ್ವನಾಥ್, ಹಾಲ್ಮುತ್ತೂರು ಸಹಕಾರ ಸಂಘದ ಅಧ್ಯಕ್ಷ ಎಂ.ಪಿ.ಸಂತೋಷ್ ಸೇರಿದಂತೆ ಜಯಗಳಿಸಿದವರನ್ನು ಸನ್ಮಾನಿಸಲಾಯಿತು.

ಬಿಜೆಪಿಯಿಂದ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು, ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಆಯೋಜನೆಯಲ್ಲಿ ನಡೆದ ಪಾರ್ಲಿಮೆಂಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಂತ್ರಿಕ ಕೃಷಿ ವಿಷಯ ಮಂಡಿಸಿ ಪ್ರಶಸ್ತಿ ಪಡೆದ ಬಿಜೆಪಿ ಮುಖಂಡ ಜಿ.ಎಸ್.ಮಹಾಬಲರವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಸುರೇಶ್ ಕಣಗಲ್, ಶೃತಿ ರೋಹಿತ್, ಪದ್ಮಾವತಿ ರಮೇಶ್ ಮುಂತಾದವರು ಇದ್ದರು.