ಸ್ಥಳೀಯ ಸೌಕರ್ಯಗಳ ಪರಿಗಣಿಸಿ ಕೇಂದ್ರ ಗೃಹ ಇಲಾಖೆ ಗುರುತಿಸಿದ ರಾಜ್ಯದ ಮೂರು ಠಾಣೆಗಳ ಪೈಕಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಪೊಲೀಸ್ ಠಾಣೆಯೂ ಒಂದಾಗಿದೆ.

ಬಳ್ಳಾರಿ: ಜನಸ್ನೇಹಿ ಆಡಳಿತ, ಪ್ರಕರಣ ವಿಲೇವಾರಿ ಹಾಗೂ ಸ್ಥಳೀಯ ಸೌಕರ್ಯಗಳ ಪರಿಗಣಿಸಿ ಕೇಂದ್ರ ಗೃಹ ಇಲಾಖೆ ಗುರುತಿಸಿದ ರಾಜ್ಯದ ಮೂರು ಠಾಣೆಗಳ ಪೈಕಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಪೊಲೀಸ್ ಠಾಣೆಯೂ ಒಂದಾಗಿದೆ.

ಈ ಬಾರಿ ದೇಶದ 78 ಠಾಣೆಗಳನ್ನು ಕೇಂದ್ರ ಗೃಹ ಇಲಾಖೆ ಅತ್ಯುತ್ತಮ ಠಾಣೆಗಳನ್ನು ಗುರುತಿಸಿದೆ. ಈ ಪೈಕಿ ಸಿರಿಗೇರಿ ಠಾಣೆಗೆ ಪ್ರಶಸ್ತಿ ದೊರೆಯುವುದು ಖಚಿತವಾಗಿದ್ದು, ಘೋಷಣೆಯಷ್ಟೇ ಬಾಕಿಯಿದೆ. ಕಳೆದ ವರ್ಷ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಠಾಣೆ ಅತ್ಯುತ್ತಮ ಠಾಣೆ ಪ್ರಶಸ್ತಿ ಒಲಿದಿತ್ತು. ಈ ಬಾರಿಯೂ ಜಿಲ್ಲೆಯ ಸಿರುಗುಪ್ಪ ತಾಲೂಕಿಗೆ ಪ್ರಶಸ್ತಿಗೆ ಭಾಜನವಾಗುವ ನಿರೀಕ್ಷೆ ಮೂಡಿದೆ.

ಅತ್ಯುತ್ತಮ ಠಾಣೆ ಪಟ್ಟಿಗೆ ಆಯ್ಕೆ ಸಂಬಂಧ ಕೇಂದ್ರ ಗೃಹ ವ್ಯವಹಾರಗಳ ತಂಡದ ಮೌಲ್ಯಮಾಪನಾಧಿಕಾರಿಗಳು ಸಿರಿಗೇರಿ ಠಾಣೆಗೆ ಭೇಟಿ ನೀಡಿ, ಪರಿಶೀಲಿಸಿದರು. ಠಾಣೆಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಜನರ ಜತೆಗಿನ ವರ್ತನೆ, ವಿವಿಧ ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದಂತೆ ಅನುಸರಿಸುವ ಕ್ರಮಗಳು ಸೇರಿದಂತೆ ಪ್ರಶಸ್ತಿಗಿರುವ ವಿವಿಧ ಮಾನದಂಡಗಳನ್ವಯ ಠಾಣೆ ಕಾರ್ಯ ನಿರ್ವಹಿಸುತ್ತಿದ್ದಂತೆಯೇ ಎಂಬುದನ್ನು ಅಧಿಕಾರಿಗಳ ತಂಡ ಪರಿಶೀಲಿಸಿ, ಮಾಹಿತಿಯನ್ನು ದಾಖಲಿಸಿಕೊಂಡರು.

ಗಮನ ಸೆಳೆವ ಸಿರಿಗೇರಿ ಠಾಣೆ:

ಸಿರಿಗೇರಿ ಪೊಲೀಸ್ ಠಾಣೆ ಸೌಲಭ್ಯಗಳ ದೃಷ್ಟಿಯಿಂದ ಜನಾಕರ್ಷಣೀಯ ಕೇಂದ್ರವಾಗಿ ಬದಲಾಗಿದೆ. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಯಿಂದಾಗುವ ಅಪಾಯ, ಮದ್ಯಪಾನದಿಂದಾಗುವ ಅನಾಹುತಗಳು, ಹೆಲ್ಮೆಟ್ ಜಾಗೃತಿ, ಬಾಲ್ಯವಿವಾಹ ತಡೆ, ಸೈಬರ್ ವಂಚನೆ, ಮಕ್ಕಳ ಸಹಾಯವಾಣಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಸೇರಿದಂತೆ ಜನರಲ್ಲಿ ಜಾಗೃತಿ ಮೂಡಿಸಲು ಠಾಣೆಯ ಕಂಪೌಂಡ್ ಮೇಲೆ ಬರೆದಿರುವ ಚಿತ್ರಸಹಿತ ಬರಹಗಳು ಗಮನ ಸೆಳೆಯುತ್ತಿವೆ.

ಸಿಬ್ಬಂದಿಗಾಗಿ ಗ್ರಂಥಾಲಯ, ಸಭಾಂಗಣ, ಮಹಿಳಾ ಬಂದೀಖಾನೆ, ಶಂಕಿತ ಆರೋಪಿಯ ತನಿಖಾ ಕೋಣೆ, ಅಚ್ಚುಕಟ್ಟಾದ ವಾಹನ ನಿಲುಗಡೆ ವ್ಯವಸ್ಥೆ, ಸಿಬ್ಬಂದಿ ವಿಶ್ರಾಂತಿ ಕೋಣೆ ಹೀಗೆ ವಿವಿಧ ಸೌಕರ್ಯಗಳನ್ನು ಒಳಗೊಂಡಿರುವ ಸಿರಿಗೇರಿ ಠಾಣೆಯಲ್ಲಿನ ಸೌಕರ್ಯ, ಕಾನೂನು ಸುವ್ಯವಸ್ಥೆ ಹಿನ್ನಲೆಯಲ್ಲಿ ಈವರೆಗೆ ಕೈಗೊಂಡಿರುವ ಪೂರಕ ಕ್ರಮಗಳು, ತಂತ್ರಜ್ಞಾನ ಅಳವಡಿಕೆ, ಪ್ರಕರಣಗಳ ವಿಲೇವಾರಿ ಸೇರಿದಂತೆ ನಾನಾ ಅಂಶಗಳನ್ನು ಕೇಂದ್ರ ಗೃಹ ಇಲಾಖೆಯ ಠಾಣಾ ಮೌಲ್ಯಮಾಪನ ಅಧಿಕಾರಿಗಳಿಗೆ ಗಮನ ಸೆಳೆದಿದ್ದು, ಠಾಣೆಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಲ್ಲದೆ, ಠಾಣೆ ಸುಧಾರಣೆ ನೆಲೆಯಲ್ಲಿ ಠಾಣೆಯ ಪಿಎಸ್‌ಐ ಶಶಿಧರ್ ಅವರ ಕಾರ್ಯವೈಖರಿಯನ್ನು ಪ್ರಶಂಸಿದರು.

ಇದೇ ವೇಳೆ ಭೌತಿಕ ಪರಿಶೀಲನೆ ಜೊತೆಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದರು. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ತಂಡದ ಮೌಲ್ಯಮಾಪನಾಧಿಕಾರಿ ಸೈಯದ್ ಮಹ್ಮದ್ ಹಸನ್, ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತ 15 ಸಾವಿರ ಠಾಣೆಗಳ ಪೈಕಿ 100 ಉತ್ತಮ ಠಾಣೆಗಳನ್ನು ಆಯ್ಕೆ ಮಾಡಲಿದೆ. ಈ ಪೈಕಿ ರಾಜ್ಯದ ಮೂರು ಠಾಣೆಗಳನ್ನು ಗುರುತಿಸಲಾಗಿದ್ದು ಈ ಪೈಕಿ ಬಳ್ಳಾರಿ ಜಿಲ್ಲೆಯ ಸಿರಿಗೇರಿ ಠಾಣೆ ಸಹ ಸೇರಿದೆ ಎಂದು ತಿಳಿಸಿದರು.

ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳ ಭೇಟಿ ವೇಳೆ ಸಿರುಗುಪ್ಪಿ ಸಿಪಿಐ ಹನುಮಂತಪ್ಪ, ತೆಕ್ಕಲಕೋಟೆ ಸಿಪಿಐ ಚಂದನ ಗೋಪಾಲ, ಪಿಎಸ್‌ಐ ಶಶಿಧರ್ ಇದ್ದರು.