ಸಾರಾಂಶ
ಬೆಂಗಳೂರು : ಕೂಡು ಕುಟುಂಬಗಳು ಮನುಷ್ಯನ ಸುಖ, ಶಾಂತಿ, ನೆಮ್ಮದಿಯ ಬಾಳ್ವೆಗೆ ಸಹಾಯಕಾರಿ. ಆದರೆ, ಆಧುನಿಕ ಜಗತ್ತು ಪತಿ-ಪತ್ನಿ ಜೊತೆಗಿದ್ದರೆ ಅದೇ ಕೂಡು ಕುಟುಂಬ ಎಂಬ ಸ್ಥಿತಿಗೆ ಬಂದು ನಿಂತಿದೆ ಎಂದು ಲೇಖಕ ಕೆ.ಎನ್ ಗಣೇಶಯ್ಯ ವಿಷಾದಿಸಿದರು.
ಭಾನುವಾರ ನಗರದ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿರಿಮೂರ್ತಿ ಕಾಸರವಳ್ಳಿ ಅವರ ‘ಶಾಂತಿಧಾಮ’ ಕಾದಂಬರಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಮೃದ್ದ ಮತ್ತು ಸಂತೃಪ್ತಿಯ ಬದುಕಿಗೆ ಆಶ್ರಯವಾಗಿದ್ದ ಮಲೆನಾಡು, ಕಳೆದ ಕೆಲವು ದಶಕಗಳಿಂದ ಎದುರಿಸುತ್ತ ಬಂದ ಸ್ಥಿತ್ಯಂತರಗಳನ್ನು ಸರಳ, ಸುಂದರ ಕಥನದ ರೂಪದಲ್ಲಿ ‘ಶಾಂತಿಧಾಮ’ ಕೃತಿ ನಿರೂಪಿಸಿದೆ. ಏಳೆಂಟು ದಶಕಗಳ ಹಿಂದೆ ನೆಮ್ಮದಿಯ ಬದುಕಿಗೆ ನೆಲೆಯಾಗಿದ್ದ ಕೂಡು ಕುಟುಂಬಗಳು, ಆಧುನಿಕ ಕಾಲಚಕ್ರದ ಸುಳಿಯಲ್ಲಿ ಸಿಲುಕಿ ಯಾವ ರೀತಿಯಲ್ಲಿ ದುಸ್ಥಿತಿ ಎದರಿಸುತ್ತಿವೆ ಎನ್ನುವುದನ್ನು ಕೃತಿಯಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ ಎಂದರು.
ಲೇಖಕ ಗಜಾನನ ಶರ್ಮ ಮಾತನಾಡಿ, ಮಲೆನಾಡು ಪ್ರಾಂತ್ಯದ ಸಭ್ಯ, ಸುಸಂಸ್ಕೃತ ಶ್ರೀಮಂತ ಕುಟುಂಬವೊಂದು, ಕೇವಲ ಎರಡು ತಲೆಮಾರುಗಳ ಅವಧಿಯಲ್ಲಿ ತನ್ನ ಸುತ್ತ ಸಂಭವಿಸಿದ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿವರ್ತನೆಗಳ ಸುಳಿಗೆ ಸಿಲುಕಿ, ಅನಿವಾರ್ಯವಾಗಿ ತನ್ನನ್ನು ತಾನು ಆಧುನಿಕತೆಯ ತೆಕ್ಕೆಗೆ ಒಡ್ಡಿಕೊಂಡ ಕಥೆ ಇದಾಗಿದೆ. ಯುವ ಪೀಳಿಗೆಗೆ ಇಂತಹ ಕಥೆಗಳು ಸ್ಪೂರ್ತಿಯ ಚಿಲುಮೆಯಾಗುವುದರಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ನಿರಂಜನ ವಾನಳ್ಳಿ, ಲೇಖಕಿ ಸಿರಿಮೂರ್ತಿ ಕಾಸರವಳ್ಳಿ, ಎಂ.ಎಂ ಪ್ರಭಾಕರ್ ಕಾರಂತ್ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))