ಕನ್ನಡಪ್ರಭ ವಾರ್ತೆ ಶಿರಸಿ
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯು 97.21 ಫಲಿತಾಂಶ ಪಡೆದುಕೊಂಡಿದೆ.ಜಿಲ್ಲೆಯಲ್ಲಿ ಒಟ್ಟು 9145 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 8884 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 261 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಾರೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಡಿ.ಆರ್. ನಾಯ್ಕ್ ತಿಳಿಸಿದ್ದಾರೆ.ಅಲ್ಲದೆ ಜಿಲ್ಲೆಯ ಒಟ್ಟೂ ಫಲಿತಾಂಶ ಶೇ. 97.21 ಆಗಿದ್ದು ರಾಜ್ಯಕ್ಕೆ ೬ನೇ ಸ್ಥಾನ ಬಂದಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು ಶಾಲೆಗಳು 182 ಇದ್ದು ಇದರಲ್ಲಿ ಶೇ. 100 ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 105 ಎಂದು ತಿಳಿಸಿದರು.ಈ ವರ್ಷ ಜಿಲ್ಲೆಯ ಶಿರಸಿ ತಾಲೂಕಿನ ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಲತಿಕಾ ನಾಗೇಶ ಮೊಗೇರ 623 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಹಾಗೂ ಜಿಲ್ಲೆಗೆ ಮೊದಲನೇ ಸ್ಥಾನ ಪಡೆದಿದ್ದಾಳೆ.ಯಲ್ಲಾಪುರ ತಾಲೂಕಿನ ಬೀಸಗೋಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಮೃದ್ಧಿ ಸಣ್ಣಪ್ಪ ಭಾಗ್ವತ 622 ಅಂಕ ಹಾಗೂ ಸಿದ್ದಾಪುರ ತಾಲೂಕಿನ ಪ್ರಶಾಂತಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ನ ರಜತ ವಿನಾಯಕ ಶೇಟ್ 622 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.ಶಿರಸಿಯ ಆವೇಮರಿಯಾ ಪ್ರೌಢಶಾಲೆ ಪ್ರಥಮ ವಿಷ್ಣು ನಿಲೇಕಣಿ, ಲಯನ್ಸ್ ಪ್ರೌಢಶಾಲೆಯ ಅದಿತಿ ಅನಿಲ್ ನಾಯ್ಕ, ಚಂದನ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಾತ್ವಿಕ ಪೂಜಾರಿ 621 ಅಂಕ ಪಡೆದು ರಾಜ್ಯಕ್ಕೆ ೫ನೇ ಸ್ಥಾನ ಹಾಗೂ ಜಿಲ್ಲೆಗೆ ೩ನೇ ಸ್ಥಾನ ಪಡೆದಿದ್ದಾರೆ.ಅಂಧ ವಿದ್ಯಾರ್ಥಿನಿಯ ಫಲಿತಾಂಶದಲ್ಲಿ ಎಡವಟ್ಟುಪರೀಕ್ಷೆ ಬರೆದಿದ್ದರೂ ಅಂಧ ವಿದ್ಯಾರ್ಥಿನಿಯೊಬ್ಬಳನ್ನು ಗೈರುಹಾಜರಿ ಎಂದು ತೋರಿಸುವ ಮೂಲಕ ಶಿಕ್ಷಣ ಮಂಡಳಿಯು ದೊಡ್ಡ ಎಡವಟ್ಟು ಮಾಡಿದೆ.
ಶಿರಸಿ ನಗರದ ಯೂನಿಯನ್ ಪ್ರೌಢಶಾಲೆಯ ಲೀಜಾ ಖಾನ್ ಎಂಬ ಪ್ರತಿಭಾವಂತ ವಿದ್ಯಾರ್ಥಿನಿ ಈ ಅನ್ಯಾಯಕ್ಕೆ ಒಳಗಾಗಿದ್ದಾಳೆ.
ಹುಟ್ಟು ಅಂಧಳಾಗಿದ್ದರೂ ಛಲ ಬಿಡದೆ ಪರೀಕ್ಷೆ ಬರೆದಿದ್ದ ಈಕೆ, ಉರ್ದುವಿನಲ್ಲಿ 124 ಮತ್ತು ಕನ್ನಡದಲ್ಲಿ 100 ಅಂಕ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾಳೆ.ಉಳಿದ ವಿಷಯಗಳಲ್ಲೂ ಉತ್ತಮ ಅಂಕ ಬಂದಿದ್ದರೂ, ಸಮಾಜ ವಿಜ್ಞಾನ ಪರೀಕ್ಷೆಗೆ ಗೈರಾಗಿದ್ದಾಳೆ ಎಂದು ಅಂಕಪಟ್ಟಿಯಲ್ಲಿ ನಮೂದಿಸಲಾಗಿದೆ. ಇದರಿಂದಾಗಿ ಆಕೆಯ ಫಲಿತಾಂಶಕ್ಕೆ ಹಿನ್ನಡೆಯಾಗಿದ್ದು, ವಿದ್ಯಾರ್ಥಿನಿ ಮತ್ತು ಪೋಷಕರಿಗೆ ತೀವ್ರ ನೋವುಂಟಾಗಿದೆ.ಇಲಾಖೆಯ ಈ ಬೇಜವಾಬ್ದಾರಿತನಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಧಿಕಾರಿಗಳು ಪರೀಕ್ಷಾ ಕೇಂದ್ರದ ಹಾಜರಾತಿಯನ್ನು ಪರಿಶೀಲಿಸಿ, ತಪ್ಪು ಸರಿಪಡಿಸಿ ಆಕೆಗೆ ನ್ಯಾಯ ಒದಗಿಸಬೇಕು ಎಂದು ಪೋಷಕರು ಮತ್ತು ಮುಖಂಡರು ಶಾಸಕರಿಗೆ ಹಾಗೂ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.