ಶಿರಸಿ- ಕುಮಟಾ ಹೆದ್ದಾರಿಯಲ್ಲಿ ಒಂದೆರಡು ಕಿಮೀ ರಸ್ತೆ, ಹಾರೂಗಾರ ಬ್ರಿಡ್ಜ್ ಕೆಲಸ ಆಗಬೇಕಿದೆ. ಅದನ್ನು ನವೆಂಬರ್ ಒಳಗೆ ಮುಗಿಸುವಂತೆ ಸೂಚಿಸಲಾಗಿದೆ ಎಂದು ಸಂಸದ ಕಾಗೇರಿ ತಿಳಿಸಿದರು.
ಶಿರಸಿ: ಅರೆಬರೆಯಾಗಿರುವ ಶಿರಸಿ- ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಮುಂದಿನ ಮಾರ್ಚ್ ಒಳಗೆ ಮುಗಿಸಿ ಮಳೆಗಾಲದೊಳಗೆ ಪೂರ್ಣ ಪ್ರಮಾಣದಲ್ಲಿ ಸಂಚಾರ ಮುಕ್ತಗೊಳಿಸಬೇಕು ಎಂದು ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ತಮ್ಮ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ಎನ್‌ಎಚ್‌ಎಐ, ಎನ್‌ಎಚ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆಯ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು.ಶಿರಸಿ- ಹಾವೇರಿ ಹೆದ್ದಾರಿ ಕಾಮಗಾರಿ ಸಾಕಷ್ಟು ಗೊಂದಲ ಆಗಿತ್ತು. ಆದರೂ ಈ ಮಳೆಗಾಲದಲ್ಲಿ ಸಂಚಾರಕ್ಕೆ ಸಮಸ್ಯೆಯಾಗದಂತೆ ನೋಡಿಕೊಂಡಿದ್ದೇವೆ. ಬರುವ ಅಕ್ಟೋಬರ್ ಮೊದಲ ವಾರದೊಳಗೆ ಬಾಕಿ ಇರುವ ಕಾಮಗಾರಿ ಆರಂಭಿಸುತ್ತಾರೆ. ಈ ಹೆದ್ದಾರಿಯ ಕಾಮಗಾರಿಯಲ್ಲಿ ಆರ್‌ಎನ್‌ಎಸ್ ಕಂಪನಿಯವರು ೨೧ ಕಿಮೀ ರಸ್ತೆ, ಒಂದು ಬ್ರಿಡ್ಜ್, ೨೯ ಕಲ್ವರ್ಟ್ ಚರಂಡಿ, ೫ಕಡೆ ರಸ್ತೆ ಅಗಲ ಮಾಡಲಿದ್ದಾರೆ. ಅಮ್ಮಾಪುರ ಕನ್‌ಸ್ಟ್ರಕ್ಷನ್‌ನವರು ೮.೪ ಕಿಮೀ ರಸ್ತೆ ಪೂರ್ಣ ಮಾಡಲಿದ್ದು. ೨೮ ಕಲ್ವರ್ಟ್ ಕಾಮಗಾರಿ ನಿರ್ವಹಿಸಲಿದ್ದಾರೆ ಎಂದರು.ಈ ಹೆದ್ದಾರಿಗೆ ಸಂಬಂಧಿಸಿ ಸಮಸ್ಯೆಗಳು ಸಾಕಷ್ಟಿದೆ. ನಗರದ ಅಗಸೆಬಾಗಿಲಿಂದ ಕೋಟೆಕೆರೆವರೆಗೆ ೧೧೦ ಅತಿಕ್ರಮಣ ಖುಲ್ಲಾ ಮಾಡಬೇಕಿದೆ. ಖಾಸಗಿ ಭೂಮಿಯಿದೆ. ಸರ್ಕಾರಿ ಭೂಮಿಯಿದೆ. ಇವುಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಎಸಿ ಕಚೇರಿ, ನಗರಸಭೆ, ಹೆಸ್ಕಾಂ ಮುಂತಾದ ಇಲಾಖೆಗಳು ಶೀಘ್ರ ಸ್ಪಂದಿಸಿದಷ್ಟು ಕೆಲಸ ಬೇಗ ಆಗಲಿದೆ ಎಂದರು.ಇನ್ನು ಶಿರಸಿ- ಕುಮಟಾ ಹೆದ್ದಾರಿಯಲ್ಲಿ ಒಂದೆರಡು ಕಿಮೀ ರಸ್ತೆ, ಹಾರೂಗಾರ ಬ್ರಿಡ್ಜ್ ಕೆಲಸ ಆಗಬೇಕಿದೆ. ಅದನ್ನು ನವೆಂಬರ್ ಒಳಗೆ ಮುಗಿಸುವಂತೆ ಸೂಚಿಸಲಾಗಿದೆ. ಇನ್ನು ಕರಾವಳಿ ಭಾಗದ ಭಟ್ಕಳದಿಂದ ಕಾರವಾರದವರೆಗೆ ಎನ್‌ಎಚ್ ೬೬ ಹೆದ್ದಾರಿ ಕಾಮಗಾರಿ ೨೦ ಸ್ಥಳದಲ್ಲಿ ಸಮಸ್ಯೆಯಿದೆ. ಕಂದಾಯ, ಪೊಲೀಸ್ ಹಾಗೂ ಖಾಸಗಿ ಸಹಕಾರ ಬೇಕಿದೆ. ಮುಂಬರುವ ಮಾರ್ಚ್ ಒಳಗೆ ಇದನ್ನು ಮುಗಿಸುವಂತೆ ಸೂಚನೆ ನೀಡಲಾಗಿದೆ. ಅಂಡರ್‌ಪಾಸ್ ಕೆಲಸವನ್ನೂ ಕಾಲಮಿತಿಯೊಳಗೆ ಮುಗಿಸುವುದಕ್ಕೆ ತಿಳಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಎನ್ಎಚ್ಐ ಅಧಿಕಾರಿಗಳು, ಐಆರ್‌ಬಿ ಅಧಿಕಾರಿಗಳು ಮತ್ತು ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.