ಶಿರಸಿ ಆಸ್ಪತ್ರೆ ಜಿಲ್ಲಾಸ್ಪತ್ರೆಯಾಗಿ ಅಭಿವೃದ್ಧಿ: ದಿನೇಶ್ ಗುಂಡೂರಾವ್

| Published : Jul 31 2025, 12:47 AM IST

ಶಿರಸಿ ಆಸ್ಪತ್ರೆ ಜಿಲ್ಲಾಸ್ಪತ್ರೆಯಾಗಿ ಅಭಿವೃದ್ಧಿ: ದಿನೇಶ್ ಗುಂಡೂರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರದ ಜಿಲ್ಲಾ ಆಸ್ಪತ್ರೆಯನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿಲೀನ ಮಾಡಿರುವುದರಿಂದ, ಶಿರಸಿಯಲ್ಲಿನ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕಾರವಾರ: ಕಾರವಾರದ ಜಿಲ್ಲಾ ಆಸ್ಪತ್ರೆಯನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿಲೀನ ಮಾಡಿರುವುದರಿಂದ, ಶಿರಸಿಯಲ್ಲಿನ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ಬುಧವಾರ ಜಿಪಂ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿರಸಿಯಲ್ಲಿನ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಅಭಿವೃದ್ಧಿ ಮಾಡುವ ಕುರಿತಂತೆ ಆಸ್ಪತ್ರೆಗೆ ಅಗತ್ಯವಿರುವ ಸಿಟಿ ಸ್ಕ್ಯಾನ್, ಎಂಆರ್‌ಐ ಯಂತ್ರೋಪಕರಣ, ಸಿಬ್ಬಂದಿ ಹಾಗೂ ಕಿಮೋಥೇರಪಿ, ಡೇ ಕೇರ್ ಸೆಂಟರ್ ಸ್ಥಾಪನೆಯ ಕುರಿತಂತೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ ಸಚಿವರು, ಜಿಲ್ಲೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ನಿರ್ಜೀವ ಜನನ ದರ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 2 ಮಂದಿ ಪ್ರಸೂತಿ ವೈದ್ಯರು, 2 ಮಂದಿ ಅರವಳಿಕೆ ತಜ್ಞರು ಮತ್ತು 2 ಮಂದಿ ಮಕ್ಕಳ ತಜ್ಞರ ಸೇವೆ ದೊರೆಯುವಂತೆ ಮಾಡುವ ಮೂಲಕ 24*7 ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಿ, ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆ ಹೆರಿಗೆ ಪ್ರಮಾಣವಿದ್ದಲ್ಲಿ ಅಲ್ಲಿ ಕಾರ್ಯ ನಿರ್ವಹಿಸುವ ತಜ್ಞ ವೈದ್ಯರನ್ನು ತಾಲೂಕು ಆಸ್ಪತ್ರೆಗೆ ನಿಯೋಜಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಜತೆಗೆ ತುರ್ತು ಸಂದರ್ಭದಲ್ಲಿ ವೈದ್ಯರ ಲಭ್ಯತೆ ಸಿಗುವುದರಿಂದ ಮುಂದೆ ಆಗಬಹುದಾದ ಅನಾಹುತ ತಡೆಗಟ್ಟಬಹುದಾಗಿದೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 3 ಸಮುದಾಯ ಕೇಂದ್ರಗಳ ಜತೆ ಹೊಸದಾಗಿ ನಿರ್ಮಾಣವಾಗುತ್ತಿರುವ 5 ಸಮುದಾಯಗಳಿಗೆ ಅಗತ್ಯ ಸಿಬ್ಬಂದಿ ನಿಯೋಜನೆ ಹಾಗೂ ಯಂತ್ರೋಪಕರಣ ಪೂರೈಕೆಗೆ ಆರ್ಥಿಕ ಇಲಾಖೆ ಸಮ್ಮತಿ ನೀಡಲಾಗಿದೆ ಎಂದರು.

ಗೃಹ ಆರೋಗ್ಯದ ಯೋಜನೆಯನ್ನು ಜಿಲ್ಲೆಯಲ್ಲಿ ತಕ್ಷಣ ಅನುಷ್ಠಾನ ಮಾಡುವಂತೆ ಸೂಚಿಸಿದ ಸಚಿವರು, ವೈದ್ಯರು ಮತ್ತು ಸಿಬ್ಬಂದಿ ಜಿಲ್ಲೆಯ ಪ್ರತಿ ಮನೆಗಳಿಗೆ ತೆರಳಿ ಬಿಪಿ, ಶುಗರ್, ಮುಂತಾದ ತಪಾಸಣೆ ಮಾಡಬೇಕು. ಈ ಕಾಯಿಲೆ ಕಂಡುಬಂದಲ್ಲಿ ನಿರಂತರವಾಗಿ ಉಚಿತವಾಗಿ ಔಷಧ ಸರಬರಾಜು ಮಾಡಬೇಕು. ತಾಯಿ ಮತ್ತು ಮಗು ಆರೈಕೆಗೆ ಆದ್ಯತೆ ನೀಡುವಂತೆ ತಿಳಿಸಿದ ಅವರು, ನಿಯಮಿತವಾಗಿ ಬಾಣಂತಿಯರು ಮತ್ತು ಗರ್ಭಿಣಿಯರನ್ನು ವೈದ್ಯರು ಮತ್ತು ಆಶಾ ಕಾರ್ಯಕರ್ತರು ಮೇಲ್ವಿಚಾರಣೆ ಮಾಡಬೇಕು ಎಂದರು.

ರಾಜ್ಯದಲ್ಲಿ ಶಾಶ್ವತ ದೃಷ್ಟಿ ಗ್ಯಾರಂಟಿಯಡಿ 398 ಆಶಾಕಿರಣ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲೆಯಲ್ಲಿ 14 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಸಾರ್ವಜನಿಕರು ಉಚಿತವಾಗಿ ತಮ್ಮ ದೃಷ್ಟಿದೋಷದ ತಪಾಸಣೆಯ ಜತೆ ಕನ್ನಡಕ ಮತ್ತು ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.

ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆಯನ್ನು ರಾಜ್ಯದ್ಯಾಂತ ಕಡ್ಡಾಯಗೊಳಿಸಲಾಗಿದ್ದು, ವೈದ್ಯರು ಮತ್ತು ಸಿಬ್ಬಂದಿ ತಮ್ಮ ಮೊಬೈಲ್ ಮೂಲಕವೇ ಹಾಜರಾತಿ ನೀಡಬಹುದಾಗಿದೆ. ಇದರಿಂದ ಹಾಜರಾತಿಯ ಸಮಯ ಲೊಕೇಷನ್, ಎಲ್ಲವೂ ತಿಳಿಯುವುದರಿಂದ ವೈದ್ಯರು ಮತ್ತು ಸಿಬ್ಬಂದಿ ಆಸ್ಪತ್ರೆಯಲ್ಲಿ ಇಲ್ಲ ಎಂಬ ದೂರಿನ ಬಗ್ಗೆ ನಿಖರ ಮಾಹಿತಿ ದೊರೆಯಲಿದೆ. ಜಿಲ್ಲೆಯ ಶೇ. 100ರಷ್ಟು ಸಿಬ್ಬಂದಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಡೋ ಸಲ್ಫಾನ್ ಪೀಡಿತರಿಗೆ ಚಿಕಿತ್ಸೆ, ಆರೈಕೆ ನೀಡಲು 100 ಬೆಡ್‌ನ ಪ್ರತ್ಯೇಕ ಕೇಂದ್ರ ತೆರೆಯುವ ಬಗ್ಗೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. 3ನೇ ತಲೆಮಾರಿಗೆ ಹರಡುತ್ತಿರುವ ಕುರಿತು ಅಧ್ಯಯನ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು. ಮಂಗನ ಕಾಯಿಲೆಗೆ ಲಸಿಕೆ ಬಗ್ಗೆ ಸಂಶೋಧನೆ ನಡೆಯುತ್ತಿದೆ, ಒಂದು ವರ್ಷದಲ್ಲಿ ಹೊಸ ಲಸಿಕೆ ಬರುವ ಸಾಧ್ಯತೆಯಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ದಿಲೀಷ್ ಶಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಳಗಾವಿ ವಿಭಾಗದ ವಿಭಾಗೀಯ ನಿರ್ದೇಶಕಿ ಡಾ. ಪುಷ್ಪಾ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಡಾ. ನೀರಜ್ ಮತ್ತಿತರರು ಇದ್ದರು.