ಅರಹುಣಸಿಯಲ್ಲಿ ಇಂದು ಅಕ್ಕ ತಂಗಿಯರ ಜಾತ್ರೆ

| Published : Jul 16 2024, 12:36 AM IST

ಸಾರಾಂಶ

ರೋಣ ತಾಲೂಕಿನ ಅರಹುಣಸಿ ಗ್ರಾಮದೇವತೆ ದೇವಮ್ಮದೇವಿಯರ ಜಾತ್ರೆ ಜು. 16ರಂದು ಸಾಯಂಕಾಲ 4 ಗಂಟೆಗೆ ಜರುಗಲಿದೆ. ಈ ಜಾತ್ರೆಯಲ್ಲಿ ತೇರು ಎಳೆಯುವುದು, ಉತ್ತತ್ತಿ ಎಸೆಯುವುದು ಇರುವುದಿಲ್ಲ. ದೇವತೆಯರಿಬ್ಬರು ಕುಂಭ ಹೊತ್ತು ಪುರಪ್ರವೇಶ ಮಾಡುವುದೇ ಇಲ್ಲಿ ವಿಶೇಷ.

ರೋಣ: ಐತಿಹಾಸಿಕ ಹಿನ್ನೆಲೆಯುಳ್ಳ ಉತ್ತರ ಕರ್ನಾಟಕ ವಿಶಿಷ್ಟ ಜಾತ್ರೆಗಳಲ್ಲಿ ಒಂದಾದ ಅಕ್ಕ ತಂಗಿಯರ ಜಾತ್ರೆ ಎಂದು ಕರೆಸಿಕೊಳ್ಳುವ ತಾಲೂಕಿನ ಅರಹುಣಸಿ ಗ್ರಾಮದೇವತೆ ದೇವಮ್ಮದೇವಿಯರ ಜಾತ್ರೆ ಜು. 16ರಂದು ಸಾಯಂಕಾಲ 4 ಗಂಟೆಗೆ ಜರುಗಲಿದೆ.

ಗ್ರಾಮದ ಆರಾಧ್ಯ ದೇವತೆಯರಾದ ದೇವಮ್ಮನವರ ಜಾತ್ರೆಗೆ ತನ್ನದೆ ಆದ ವೈಶಿಷ್ಟ್ಯ, ಹಿರಿಮೆ ಇದೆ. ಗ್ರಾಮದ ಹೆಣ್ಣುಮಕ್ಕಳ ಅತಿ ಅಚ್ಚುಮೆಚ್ಚಿನ ಜಾತ್ರೆ ಇದಾಗಿದೆ. ಗ್ರಾಮದಿಂದ 2 ಕಿಮೀ ದೂರದ ಹೊರ ವಲಯದಲ್ಲಿರುವ ದೇವಮ್ಮನ ಗದ್ದುಗೆ ಬಳಿ ಜರುಗುವ ಜಾತ್ರೆ, ವೈಭವ-ವೈವಿಧ್ಯದಿಂದ ಕೂಡಿರುತ್ತದೆ. ಈ ಜಾತ್ರೆಯಲ್ಲಿ ತೇರು ಎಳೆಯುವುದು, ಉತ್ತತ್ತಿ ಎಸೆಯುವುದು ಇರುವುದಿಲ್ಲ. ದೇವತೆಯರಿಬ್ಬರು ಕುಂಭ ಹೊತ್ತು ಪುರಪ್ರವೇಶ ಮಾಡುವುದೇ ಇಲ್ಲಿ ವಿಶೇಷ.

ಗದ್ದುಗೆಯಿಂದ ದೇವತೆಯರನ್ನು ಕರೆತಂದು ಪುರಪ್ರವೇಶ ಮಾಡುವ ವೈಭವ, ಸಡಗರ, ಸಂಭ್ರಮ ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ತುದಿಗಾಲಲ್ಲಿ ನಿಂತಿರುತ್ತಾರೆ. 2 ಕಿಮೀನಿಂದ ನಡೆದುಕೊಂಡು ಬರುವ ಭಕ್ತರು, ದೇವತೆಯರು ಗ್ರಾಮದೊಳಕ್ಕೆ ಪ್ರವೇಶಿಸುವ ವೇಳೆ ತಾವಿಡುವ ಪ್ರತಿ ಹೆಜ್ಜೆಗೂ ಒಂದು ಕಾಯನ್ನಿಟ್ಟು ಭೂಮಿಗೆ ಅರ್ಪಣ (ಒಡೆಯುವುದು) ಮಾಡುತ್ತಾರೆ. 10 ಸಾವಿರಕ್ಕೂ ಹೆಚ್ಚು ಕಾಯಿ ಅರ್ಪಣೆ ಮಾಡಲಾಗುತ್ತದೆ.

ಇತಿಹಾಸ: 2 ಶತಮಾನಗಳ ಹಿಂದೆ ಗ್ರಾಮಕ್ಕೆ ಬಂದೊದಗಿದ ಗಂಡಾಂತರ ನಿವಾರಣೆಗಾಗಿ ಗ್ರಾಮದ ದೈವ ಗುದ್ನೇಶ್ವರನಲ್ಲಿ ಗ್ರಾಮಸ್ಥರು ಮೊರೆಯಿಟ್ಟರು. ಗುದ್ನೇಶ್ವರನು ದೇವಸ್ಥಾನದ ಅರ್ಚಕನ ಮೂಲಕ, ಅರಹುಣಸಿ ಗ್ರಾಮದ ಹೊರ ವಲಯದಲ್ಲಿ ವಾಸವಿರುವ ನನ್ನ ಸಹೋದರಿಯರಿಬ್ಬರನ್ನು ಪುರದೊಳಗೆ ಕರೆತಂದು, ಅವರಿಗೆ ಹಸಿರು ಸೀರೆ, ಹಸಿರು ಬಳೆ, ಅರಿಸಿನ, ಕುಂಕುಮ ಮೂಲಕ ಉಡಿ ತುಂಬಿ. ಆಗ ನಿಮ್ಮ ಸಂಕಷ್ಟ ನಿವಾರಣೆಯಾಗಲಿದೆ ಎಂದು ಸೂಚಿಸಿದನಂತೆ. ಆಗ ಗ್ರಾಮಸ್ಥರು ಸಹೋದರಿ ದೇವತೆಗಳ ಬಳಿ ಪುರ ಪ್ರವೇಶಕ್ಕೆ ಭಿನ್ನವಿಸಿದರಂತೆ. ಆಗ ದೇವತೆಯರು ನಮಗೆ ಹೆಜ್ಜೆಗೊಂದು ಪ್ರಾಣಿ ಬಲಿ ಕೇಳಿದರಂತೆ. ಇದಕ್ಕೆ ಪ್ರತಿಯಾಗಿ ಗ್ರಾಮಸ್ಥರು 2 ಕಣ್ಣಿನ ಪ್ರಾಣಿ ಬಲಿ ಬದಲಿಗೆ ಮೂರು ಕಣ್ಣಿನ ಕಾಯಿ ಅರ್ಪಣೆಗೆ ಪ್ರಾರ್ಥಿಸಿದರು. ಇದಕ್ಕೆ ದೇವಿಯರು ಒಪ್ಪಿಗೆ ಸೂಚಿಸಿದರು.

ಅಂದಿನಿಂದ ಇಂದಿನ ವರೆಗೂ ಪ್ರತಿ ವರ್ಷ ಜಾತ್ರೆಯಲ್ಲಿ 10 ಸಾವಿರಕ್ಕೂ ಹೆಚ್ಚು ಕಾಯಿ ಒಡೆಯಲಾಗುತ್ತದೆ.

20 ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇದೆ. ಜಾತ್ರೆಗೆ ಬರುವವರಿಗೆ ವಾಹನ ವ್ಯವಸ್ಥೆ, ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಇದು ನಮ್ಮ ಸಹೋದರಿಯರ ಅಚ್ಚುಮೆಚ್ಚಿನ ಜಾತ್ರೆಯಾಗಿದೆ ಎನ್ನುತ್ತಾರೆ ಗ್ರಾಮದ ಶಂಕರಗೌಡ ಗಿರಡ್ಡಿ, ಮಲ್ಲಿಕಾರ್ಜುನ ಚೌಡರಡ್ಡಿ.