ಶಿವಲಿಂಗೇಗೌಡ ₹65 ಕೋಟಿ ಹಂಚಿಕೆ ಎಸ್‌ಐಟಿ ತನಿಖೆ ಮಾಡಿ

| Published : Dec 18 2024, 12:45 AM IST

ಸಾರಾಂಶ

ದಲಿತ ಸಮುದಾಯದವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ, ಅರಸೀಕೆರೆ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅವರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ 65 ಕೋಟಿ ರು. ಹಂಚಿಕೆ ಮಾಡುವ ಸಂಬಂಧ ಆಪ್ತರ ಜೊತೆ ಮಾತನಾಡಿದ್ದ ಆಡಿಯೋ ಎಲ್ಲಾ ಕಡೆ ವೈರಲ್ ಆಗಿದ್ದರೂ, ಎಸ್‌ಐಟಿ ರಚಿಸಿ ತನಿಖೆ ಏಕೆ ಮಾಡುತ್ತಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ಜಿ. ದೇವರಾಜೇಗೌಡ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿಯ ಚಳಿಗಾಲದ ಅಧಿವೇಶನದ ವೇಳೆ ಸಚಿವ ನರೇಂದ್ರ ಸ್ವಾಮಿ ಅವರು ಮುನಿರತ್ನ ದಲಿತ ಸಮುದಾಯದ ವಿರುದ್ಧ ಮಾತನಾಡಿರುವ ಆಡಿಯೋ ಎಸ್‌ಐಟಿ ತನಿಖೆಯಲ್ಲಿ ದೃಢಪಟ್ಟಿದೆ. ಆದ್ದರಿಂದ ಸದನದಲ್ಲಿ ಅವರು ಕೂರಬಾರದು ಎಂದು ಹೇಳಿದ್ದಾರೆ. ಆದರೆ ಶಾಸಕ ಕೆ.ಎಂ ಶಿವಲಿಂಗೇಗೌಡ ಅವರು ಲೋಕಸಭೆ ಚುನಾವಣೆ ವೇಳೆ ಕೋಟ್ಯಾಂತರ ರು. ಹಂಚಿಕೆ ಮಾಡಿರುವ ಸಂಬಂಧ ಸಂಭಾಷಣೆಯ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ ಎಂದರು.

ಶಿವಲಿಂಗೇಗೌಡ ಅವರು, ಮತದಾರರಿಗೆ ಕೋಟಿ ಕೋಟಿ ಹಣ ಹಂಚಿಕೆ ಬಗ್ಗೆ ಮಾತನಾಡುವ ವೇಳೆ ಸಿಎ, ಡಿಸಿಎಂ ಹೆಸರನ್ನೂ ಪ್ರಸ್ತಾಪ ಮಾಡಿದ್ದಾರೆ. ಕೂಡಲೇ ಎಸ್‌ಐಟಿ ರಚಿಸಿ ಕೆ.ಎಂ.ಶಿವಲಿಂಗೇಗೌಡ ಆಡಿಯೋ ಪ್ರಕರಣವನ್ನು ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ನಾನು ಚುನಾವಣಾ ಆಯೋಗ ಸೇರಿದಂತೆ ಎಲ್ಲರಿಗೂ ದೂರು ನೀಡಿದ್ದೇನೆ. ಆದರೂ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಇಲ್ಲಿವರೆಗೆ ಏಕೆ ಕ್ರಮ ಕೈಗೊಂಡಿಲ್ಲ. ರಾಮನಗರ ಶಾಸಕನ ಅಶ್ಲೀಲ ವಿಡಿಯೋ ಪ್ರಕರಣ ಏನಾಯ್ತು, ನೀವು ಮಾಡ ಬಾರದ್ದನ್ನು ಮಾಡಿದರೂ ಏನೂ ಶಿಕ್ಷೆ ಇಲ್ಲವೇ ಎಂದರು. ಹೊಳೆನರಸೀಪುರ ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಕೆಲಸದಲ್ಲಿನ ಒತ್ತಡದ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ನೋಟಿಸ್ ಕೊಡುತ್ತೀರಿ, ವಾಲ್ಮೀಕಿ ನಿಗಮ ಹಗರಣದಲ್ಲಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಎಷ್ಟು ಜನರ ಬಲಿ ಪಡೆಯುತ್ತೀರಿ?. ಕೂಡಲೇ ಶಿವಲಿಂಗೇಗೌಡ ಆಡಿಯೋ ಬಗ್ಗೆ ಶೀಘ್ರ ತನಿಖೆ ನಡೆಸಬೇಕು. ಆಡಿಯೋ ಬಿಡುಗಡೆಯಾದರೂ ತನಿಖೆ ನಡೆಸಿ, ಎಸ್‌ಐಟಿ ರಚಿಸಲಿಲ್ಲ. ಶಿವಲಿಂಗೇಗೌಡರನ್ನು ಏಕೆ ಬಂಧಿಸಲಿಲ್ಲ ಎಂದು ಸಿಡಿಮಿಡಿಗೊಂಡರು.ವಿವಿಧ ಪ್ರಕರಣಗಳಲ್ಲಿ ಆರೋಪ ಹೊತ್ತಿರುವ ಡಿಸಿಎಂ ಡಿ. ಕೆ. ಶಿವಕುಮಾ‌ರ್, ಸಿಎಂ ಸಿದ್ದರಾಮಯ್ಯ, ಶಾಸಕ ಕೆ. ಎಂ. ಶಿವಲಿಂಗೇಗೌಡ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರೆಲ್ಲ ಸದನದಿಂದ ಹೊರಬರಲಿ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೆ.ಎಂ. ಶಿವಲಿಂಗೇಗೌಡ 65 ಕೋಟಿ ರು. ಹಂಚಿಕೆ ಮಾಡುವ ಸಂಬಂಧ ಸಂಭಾಷಣೆ ಮಾಡಿರುವ ಆಡಿಯೋ ಹೊರಬಿದ್ದಿದೆ. ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಬೇಕು. ಶಿವಲಿಂಗೇಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.