ಸೂರಜ್‌ ರೇವಣ್ಣ ಫಾರಂಗೆ ಸಂತ್ರಸ್ತನ ಕರೆತಂದು ಎಸ್‌ಐಟಿ ಮಹಜರು

| Published : Jun 29 2024, 12:38 AM IST / Updated: Jun 29 2024, 01:19 PM IST

ಸಾರಾಂಶ

ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ದ ಅಸಹಜ ಲೈಂಗಿಕ ಪ್ರಕರಣದಲ್ಲಿ ದೂರು ನೀಡಿದ್ದ ಸಂತ್ರಸ್ತನನ್ನು ಸಿಐಡಿ ತಂಡ ಸ್ಥಳ ಮಹಜರು ನಡೆಸುವ ಸಲುವಾಗಿ ಹೊಳೆನರಸೀಪುರದ ಗನ್ನಿಕಡ ಗ್ರಾಮದಲ್ಲಿರುವ ಡಾ.ಸೂರಜ್ ಅವರ ಫಾರಂ ಹೌಸ್‌ಗೆ ಕರೆತಂದು ಸ್ಥಳ ಮಹಜರು ನಡೆಸಿದರು.

 ಹೊಳೆನರಸೀಪುರ :  ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ದ ಅಸಹಜ ಲೈಂಗಿಕ ಪ್ರಕರಣದಲ್ಲಿ ದೂರು ನೀಡಿದ್ದ ಸಂತ್ರಸ್ತನನ್ನು ಸಿಐಡಿ ತಂಡ ಸ್ಥಳ ಮಹಜರು ನಡೆಸುವ ಸಲುವಾಗಿ ಗನ್ನಿಕಡ ಗ್ರಾಮದಲ್ಲಿರುವ ಡಾ.ಸೂರಜ್ ಅವರ ಫಾರಂ ಹೌಸ್‌ಗೆ ಕರೆತಂದು ಸ್ಥಳ ಮಹಜರು ನಡೆಸಿದರು.

ತಾಲೂಕಿನ ಗನ್ನಿಕಡ ಗ್ರಾಮದಲ್ಲಿರುವ ಡಾ.ಸೂರಜ್ ಅವರ ಫಾರಂ ಹೌಸ್‌ಗೆ ಶುಕ್ರವಾರ ಅರಕಲಗೂಡು ಮೂಲದ ಸಂತ್ರಸ್ತನನ್ನು ಸಿಐಡಿ ಅಧಿಕಾರಿಗಳು ಕರೆತಂದರು. ಆತನ ಹೇಳಿಕೆಯನ್ನು ಆಧರಿಸಿ ಸ್ಥಳದಲ್ಲಿ ಮಹಜರು ಪ್ರಕ್ರಿಯೆಗಳನ್ನು ನಡೆಸಿದರು. ತನ್ನ ಮೇಲೆ ಎಂಎಲ್‌ಸಿ ಡಾ. ಸೂರಜ್ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಂತ್ರಸ್ತ ಜೂ.22 ರಂದು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಎಂಎಲ್‌ಸಿ ಡಾ. ಸೂರಜ್‌ರನ್ನು ಬಂಧಿಸಿ, ನ್ಯಾಯಾಲಯದ ನಿರ್ದೇಶನದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದ ನಂತರ ಸಿಐಡಿ ಅಧಿಕಾರಿಗಳು ಘನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಡಾ.ಸೂರಜ್ ಅವರನ್ನು ವಶಕ್ಕೆ ಪಡೆದು, ತನಿಖೆ ಪ್ರಾರಂಭಿಸಿದ್ದಾರೆ.

ತನಿಖೆಗೆ ಪೂರಕವಾಗಿ ಶುಕ್ರವಾರ ತಾಲೂಕಿನ ಗನ್ನಿಕಡ ಗ್ರಾಮದಲ್ಲಿರುವ ಡಾ.ಸೂರಜ್ ಅವರ ಫಾರಂ ಹೌಸ್‌ಗೆ ಒಬ್ಬರು ಮಹಿಳಾ ಅಧಿಕಾರಿ ಸೇರಿದಂತೆ ನಾಲ್ವರು ಮೂರು ಜೀಪುಗಳಲ್ಲಿ ಸಂತ್ರಸ್ತನನ್ನು ಕರೆತಂದು ಸ್ಥಳ ಮಹಜರು ನಡೆಸಿದರು. ಡಾ.ಸೂರಜ್‌ರನ್ನು ಕರೆತಂದಿರಬಹುದು ಎಂದು ಭಾವಿಸಿದ ಅಭಿಮಾನಿಗಳು ಅವರನ್ನು ಕಾಣಲು ಜಮಾಯಿಸಿದ್ದರು.

ಕೆಎಸ್‌ಆರ್‌ಪಿ ತುಕಡಿಯನ್ನು ಬಿಗಿ ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.