ರೇವಣ್ಣ ನಿವಾಸ, ತೋಟದ ಮನೆಗಳಲ್ಲಿ ಎಸ್‌ಐಟಿ ಮತ್ತೆ ತಪಾಸಣೆ

| Published : May 29 2024, 12:49 AM IST

ಸಾರಾಂಶ

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ರಾಸಲೀಲೆ ವೀಡಿಯೋಗಳನ್ನು ಒಳಗೊಂಡ ಪೆನ್‌ಡ್ರೈವ್‌ ಪ್ರಚಾರ ಮಾಡಿದ ಆರೋಪದಲ್ಲಿ ಇದೀಗ ಎಸ್ ಐಟಿ ಪೊಲೀಸರ ತಂಡ ಮತ್ತಿಬ್ಬರನ್ನು ಬಂಧಿಸಿದೆ.

ಕನ್ನಡಪ್ರಭ ವಾರ್ತೆ ಹಾಸನ

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ರಾಸಲೀಲೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಮಂಗಳವಾರ ಮತ್ತೆ ಹಾಸನ ನಗರದಲ್ಲಿರುವ ಸಂಸದರ ನಿವಾಸ ಹಾಗೂ ಹೊಳೆನರಸೀಪುರದಲ್ಲಿರುವ ಎಚ್‌.ಡಿ.ರೇವಣ್ಣ ಅವರ ‘ಚನ್ನಾಂಬಿಕ’ ನಿವಾಸ ಮತ್ತು ಗನ್ನಿಕಡದಲ್ಲಿರುವ ಅವರ ತೋಟದ ಮನೆಗಳಲ್ಲಿ ಮಂಗಳವಾರ ತಪಾಸಣೆ ನಡೆಸುತ್ತಿದ್ದಾರೆ.

ಪ್ರಜ್ವಲ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿರುವ ಮಹಿಳೆಯರ ಹೇಳಿಕೆ ಆಧರಿಸಿ, ಈ ಹಿಂದೆಯೂ ಕೂಡ ಹಾಸನ ನಗರದ ಆರ್‌ಸಿ ರಸ್ತೆಯಲ್ಲಿರುವ ಸಂಸದರ ನಿವಾಸ, ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ನಿವಾಸ ಮತ್ತು ಚನ್ನರಾಯಪಟ್ಟಣದ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಗನ್ನಿಕಡದಲ್ಲಿರುವ ತೋಟದ ಮನೆಯಲ್ಲಿ ಸಂತ್ರಸ್ತ ಮಹಿಳೆಯರೊಂದಿಗೆ ತಪಾಸಣೆ ನಡೆಸಿದ್ದರು.

ಹೊಳೆನರಸೀಪುರದ ಮನೆಗೂ ಭೇಟಿ, ಪರಿಶೀಲನೆ:

ಶಾಸಕ ಎಚ್.ಡಿ.ರೇವಣ್ಣನವರ ಹೊಳೆನರಸೀಪುರದ ಮನೆಗೆ ಮಂಗಳವಾರ ಎಸ್‌ಐಟಿ ಅಧಿಕಾರಿಗಳು ಎರಡನೇ ಬಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಶಾಸಕ ಎಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಸಂತ್ರಸ್ತ ಮಹಿಳೆಯೊಬ್ಬರು ಏಪ್ರಿಲ್ ೨೮ ರಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಮೇ ೪ ರಂದು ಪ್ರಕರಣದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿರುವ ಹೇಳಿಕೆ ಹಿನ್ನೆಲೆಯಲ್ಲಿ ಮೇ ೨೮ರ ಮಂಗಳವಾರ ದಿನದಂದು ಎಸಿಪಿ ಸತ್ಯನಾರಾಯಣ ನೇತೃತ್ವದಲ್ಲಿ ಎಸ್‌ಐಟಿ ಅಧಿಕಾರಿಗಳು ಪಟ್ಟಣದ ಶಾಸಕ ಎಚ್.ಡಿ.ರೇವಣ್ಣನವರ ಮನೆಗೆ ಎರಡು ವಾಹನಗಳಲ್ಲಿ ಆಗಮಿಸಿ, ಸಂತ್ರಸ್ತ ಮಹಿಳೆಯರಿಂದ ಹೇಳಿಕೆ ಪಡೆದ ನಂತರ ಪರಿಶೀಲನೆ ನಡೆಸಿದರು. ಪಟ್ಟಣದ ಪೊಲೀಸರು ಸಿಪಿಯು, ಮಾನಿಟರ್, ಪ್ರಿಂಟರ್ ಕೊಂಡೊಯ್ದು, ಅಗತ್ಯ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಸಂತ್ರಸ್ತ ಮಹಿಳೆಯರ ಹೇಳಿಕೆಯನ್ನು ಎಸ್‌ಐಟಿ ಅಧಿಕಾರಿಯೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದರು. ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ ಸ್ಥಳಗಳಲ್ಲಿ ಮಹಜರು ನಡೆಸಿದರು ಎನ್ನಲಾಗಿದೆ.

ಪೆನ್‌ಡ್ರೈವ್‌ ಪ್ರಚಾರ; ಮತ್ತಿಬ್ಬರ ಬಂಧನ

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ರಾಸಲೀಲೆ ವೀಡಿಯೋಗಳನ್ನು ಒಳಗೊಂಡ ಪೆನ್‌ಡ್ರೈವ್‌ ಪ್ರಚಾರ ಮಾಡಿದ ಆರೋಪದಲ್ಲಿ ಇದೀಗ ಎಸ್ ಐಟಿ ಪೊಲೀಸರ ತಂಡ ಮತ್ತಿಬ್ಬರನ್ನು ಬಂಧಿಸಿದೆ. ತಮ್ಮ ಮೇಲೆ ಪ್ರಕರಣ ದಾಖಲಾದ ನಂತರದಲ್ಲಿ ಜಿಲ್ಲಾಮಟ್ಟದ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತವಾದ ನಂತರದಲ್ಲಿ ಹೈಕೋರ್ಟ್‌ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಹಾಗಾಗಿ ಮಂಗಳವಾರ ಬೆಂಗಳೂರಿನ ಹೈಕೋರ್ಟ್‌ಗೆ ತೆರಳಿದ್ದ ಸಂದರ್ಭದಲ್ಲಿ ನವೀನ ಗೌಡ ಹಾಗೂ ಚೇತನ್ ಗೌಡ ಇಬ್ಬರನ್ನು ಬಂಧಿಸಿ, ಹಾಸನಕ್ಕೆ ಕರೆತರಲಾಗುತ್ತಿದೆ.