ಕನ್ನಡಪ್ರಭ ವಾರ್ತೆ ದಾವಣಗೆರೆ
ನಾನು ರೇಣುಕಾಚಾರ್ಯ ರೀತಿ ಅಲ್ಲ. ಏನೇ ಇದ್ದರೂ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಬಳಿ ಕುಳಿತು ನಾನು ಮಾತನಾಡಿ, ಚರ್ಚಿಸುವವನೇ ಹೊರತು ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟು ಹಗುರವಾಗಲ್ಲ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ.ಸಿದ್ದೇಶ್ವರ ಹೇಳಿದರು.ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಗುರುವಾರ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜತೆಗಿನ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಪಕ್ಷದಲ್ಲಿ ಏನೇ ಇದ್ದರೂ ನಮ್ಮ ರಾಜ್ಯ ಮತ್ತು ರಾಷ್ಟ್ರೀಯ ನಾಯಕರೊಂದಿಗೆ ಕುಳಿತು, ಚರ್ಚಿಸಿ, ಮಾತನಾಡುತ್ತೇನೆ. ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟು ಹಗುರವಾಗುವುದಕ್ಕ ಸಾಧ್ಯವಿಲ್ಲ ಎಂದರು.
ಮೊದಲು ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರ ಜೊತೆಗೆ ಕುಳಿತು, ಚರ್ಚಿಸುತ್ತೇನೆ. ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಯಾರಾದರೂ ಘೋಷಣೆ ಮಾಡಿದ ನಂತರ ನಾನು ಮಾತನಾಡುತ್ತೇನೆ. ರಾಧಾಮೋಹನ ದಾಸ್ ಅಗರವಾಲ್, ವಿಜಯೇಂದ್ರದ ಜತೆಗೆ ಯಾವುದೇ ಮೀಟಿಂಗ್ ಇಲ್ಲಪ್ಪ, 2 ಸಲ ಟೀ ಕುಡಿದೆವು. ಊಟ ಮಾಡಿದೆವು. ಜನರಲ್ ಆಗಿ ಮಾತನಾಡಿ, ಬಂದೆವಷ್ಟೇ ಎಂದು ತಿಳಿಸಿದರು.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಾನಾಗಲೀ, ನನ್ನ ಕುಟುಂಬ ಯಾರೂ ಸಹ ನಿಲ್ಲುವುದಿಲ್ಲ. ಉಪ ಚುನಾವಣೆ ಟಿಕೆಟನ್ನು ಪಕ್ಷದ ಕಾರ್ಯಕರ್ತರಿಗೆ ನೀಡುವಂತೆ ಹೇಳಿದ್ದೇವೆ. ಈ ಬಗ್ಗೆ ಪಕ್ಷದ ವರಿಷ್ಟರು ತೀರ್ಮಾನ ಕೈಗೊಳ್ಳುತ್ತಾರೆ. ರೇಣುಕಾಚಾರ್ಯ ಇಂತಹವರಿಗೆ ಟಿಕೆಟ್ ನೀಡುವಂತೆ ಹೇಳುತ್ತಾನೆ. ನಾನೇನು ಇಂತಹವರಿಗೆ ಟಿಕೆಟ್ ಕೊಡಿ ಎಂದು ಹೇಳಿಲ್ಲವಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಇಲ್ಲಿಯೇ ಇದ್ದರು. ಸಭೆ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಆದರೆ, ಇಲ್ಲಿ ನಮ್ಮ ಮುಖಂಡರು, ಕಾರ್ಯಕರ್ತರು ಸಭೆ ಮಾಡಿದ್ದಾರೆ. ದಕ್ಷಿಣ ಉಪ ಚುನಾವಣೆ ಟಿಕೆಟ್ ವಿಚಾರದಲ್ಲಿ ನಾನು ಇಂತಹವರಿಗೆ ಟಿಕೆಟ್ ಕೊಡಿ ಅಂತಾ ಏನನ್ನೂ ಹೇಳುವುದಿಲ್ಲ. ನಮ್ಮಲ್ಲೂ ಆಕಾಂಕ್ಷಿಗಳಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ಹೇಳಿದ್ದೇನೆ. ನಾನಾಗಲೀ, ನಮ್ಮ ಕುಟುಂಬದ ಯಾರೂ ಸಹ ಉಪ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪುನರುಚ್ಛರಿಸಿದರು.
ಬಿಜೆಪಿಯಿಂದ ಯಾರನ್ನೂ ಉಚ್ಛಾಟಿಸುವಂತೆ ನಾನು ಹೇಳಿಲ್ಲ. ಹೊರಗೆ ನಿಂತಿರುವ ಮುಖಂಡರು, ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಾರೆ. ಇಂದಿನ ಕಾರ್ಯಕ್ರಮಕ್ಕೆ ಬಿ.ವೈ.ವಿಜಯೇಂದ್ರ ನನಗೆ ಕರೆದೊಯ್ಯಲು ಬಂದಿದ್ದರೆ ನೀವೇ ಕೇಳಿ, ವಿಜಯೇಂದ್ರ ಇಲ್ಲಿ ಹೊರಗಿದ್ದಾರೆ. ಎಲ್ಲಿದೆ ಸಭೆ? ಸಭೆನೇ ಇಲ್ಲವಲ್ಲ? ಯಾವುದೇ ಮೀಟಿಂಗ್ ಸಹ ಇಲ್ಲ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರನ್ನು ಬಿಟ್ಟು ನಾನು ಹೇಗೆ ಅಲ್ಲಿಗೆ ಹೋಗಲಿ ಎಂದು ಪ್ರಶ್ನಿಸಿದರು.