ಬೆಳಗ್ಗೆಯಿಂದಲೇ ಅಭ್ಯರ್ಥಿಗಳು ಸೇರಿದಂತೆ ಬೆಂಬಲಿಗರು ತಾಲೂಕು ಕಚೇರಿ ಎದುರು ಮತ ಎಣಿಕೆ ಹಿನ್ನೆಲೆಯಲ್ಲಿ ಜಮಾಯಿಸಿದ್ದರು.

ಹೊಸಪೇಟೆ: ತಾಲೂಕಿನ ಸೀತಾರಾಮ ತಾಂಡಾ ಗ್ರಾಪಂ ವ್ಯಾಪ್ತಿಯ ಎಂಟು ಸದಸ್ಯ ಸ್ಥಾನಗಳಿಗೆ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಇಲ್ಲಿನ ತಾಲೂಕು ಕಚೇರಿಯ ಒಂದನೇ ಮಹಡಿಯಲ್ಲಿ ಬುಧವಾರ ಶಾಂತಿಯುತವಾಗಿ ನಡೆಯಿತು.ಬೆಳಗ್ಗೆಯಿಂದಲೇ ಅಭ್ಯರ್ಥಿಗಳು ಸೇರಿದಂತೆ ಬೆಂಬಲಿಗರು ತಾಲೂಕು ಕಚೇರಿ ಎದುರು ಮತ ಎಣಿಕೆ ಹಿನ್ನೆಲೆಯಲ್ಲಿ ಜಮಾಯಿಸಿದ್ದರು. ಫಲಿತಾಂಶಕ್ಕಾಗಿ ಕುತೂಹಲದಿಂದ ಕಾದು ನಿಂತಿದ್ದ ಬೆಂಬಲಿಗರು, ಒಂದೊಂದೇ ಸ್ಥಾನದ ಫಲಿತಾಂಶ ಬರುತ್ತಿದ್ದಂತೆ ಶಿಳ್ಳೆ ಕೇಕೆ ಹಾಕಿ ಸಂಭ್ರಮಿಸಿದರು. ತಹಸೀಲ್ದಾರ ಕಚೇರಿ ಎದುರು ಅಂಗಡಿಗಳ ಮುಂದೆ ಜಮಾಯಿಸಿದ್ದ ಬೆಂಬಲಿಗರನ್ನು ಪೊಲೀಸರು ಚದುರಿಸಿದರು.

ಬೆಳಗ್ಗೆ 8ಕ್ಕೆ ಸಂಜೆ 6.20ರವರೆಗೆ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಒಂದು ಕೊಠಡಿಯಲ್ಲಿ ಎರಡು ಟೇಬಲ್‌ಗಳಲ್ಲಿ ಒಟ್ಟು ಆರು ಜನ ಚುನಾವಣಾ ಸಿಬ್ಬಂದಿ ಮತ ಎಣಿಕೆ ಮಾಡಿದರು. ಚುನಾವಣಾಧಿಕಾರಿ ಶಿವಕುಮಾರ ಮತ್ತು ಸಹಾಯಕ ಚುನಾವಣಾಧಿಕಾರಿ ಶಿವರಾಂ ನೇತೃತ್ವದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಿತು.

ಡಿ.21ರಂದು ಮತದಾನ ನಡೆದಿತ್ತು. ಸೀತಾರಾಮ ತಾಂಡಾದ 4 ಸ್ಥಾನಗಳಿಗೆ 9, ನಲ್ಲಾಪುರದಲ್ಲಿ 3 ಸ್ಥಾನಗಳಿಗೆ 11 ಮತ್ತು ಚಿನ್ನಾಪುರ ಗ್ರಾಮದಲ್ಲಿ ಒಂದು ಸ್ಥಾನಕ್ಕೆ ಮೂವರು ಸೇರಿ ಒಟ್ಟು 23 ಅಭ್ಯರ್ಥಿಗಳು ಕಣದಲ್ಲಿದ್ದರು.

ಫಲಿತಾಂಶ ವಿವರ:

ಸೀತಾರಾಂ ತಾಂಡಾ ಚುನಾವಣೆ ಕ್ಷೇತ್ರದ ನಾಲ್ಕು ಸ್ಥಾನಗಳಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಎರಡು ಸ್ಥಾನಗಳಿಗೆ ಎಲ್. ರಾಘವೇಂದ್ರ 628 ಮತ್ತು ಸಣ್ಣ ಲಕ್ಷ್ಮಣ 505, ಎಸ್ಸಿ ಮಹಿಳಾ ಮೀಸಲಿನಲ್ಲಿ ರೇಣುಕಾ 473 ಹಾಗೂ ಪರಿಶಿಷ್ಟ ಪಂಗಡ ಮಹಿಳಾ ಮೀಸಲಿನಲ್ಲಿ ಗಂಗವ್ವ 430 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ನಲ್ಲಾಪುರ ಕ್ಷೇತ್ರದಿಂದ ಸಾಮಾನ್ಯ ಮೀಸಲಿನಲ್ಲಿ ಎಸ್.ಕೆ. ಮೇಘನಾಥ 444 ಮತ, ಎಸ್ಸಿ ಮಹಿಳಾ ಮೀಸಲು ಕ್ಷೇತ್ರಗಳಿಂದ ಉಮಾ 207 ಮತ, ಮುನಿಯಮ್ಮ 183 ಮತಗಳಿಸಿ ಜಯಗಳಿಸಿದ್ದಾರೆ, ಹೊಸ ಚಿನ್ನಾಪುರ ಕ್ಷೇತ್ರದಲ್ಲಿ ಸಾಮಾನ್ಯ ಮೀಸಲು ಒಂದು ಕ್ಷೇತ್ರದಿಂದ ವೀರಭದ್ರಪ್ಪ 148 ಮತ ಗಳಿಸಿ ಜಯಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಶಿವಕುಮಾರ ತಿಳಿಸಿದರು.

ಮತ ಎಣಿಕೆಯ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಎಎಸ್ಪಿ ಮಂಜುನಾಥ, ಪಿಐಗಳಾದ ಗುರುರಾಜ್ ಕಟ್ಟಿಮನಿ, ಗೌಸ್, ಸೋಮ್ಲಾನಾಯ್ಕ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.