ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

| Published : Aug 07 2025, 12:45 AM IST

ಸಾರಾಂಶ

ಬಿ.ಹೊಸೂರು ಗ್ರಾಮದ ಸರ್ಕಾರಿ ಗೋಮಾಳ ಜಾಗವನ್ನು ಈಗಾಗಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕಾಯ್ದಿರಿಸಲಾಗಿದ್ದು, ೨೦ ಗುಂಟೆಯನ್ನು ರಸ್ತೆಗೆ ಕಾಯ್ದಿರಿಸುವ ಬಗ್ಗೆ ಆರ್‌ಟಿಸಿಯಲ್ಲಿ ಹಾಗೂ ನಕಾಶೆಯಲ್ಲಿ ಇಂಡೀಕರಣ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ನೂತನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ನಿರ್ಮಾಣಕ್ಕಾಗಿ ಜಾಗ ಗುರುತಿಸುವ ಸಂಬಂಧ ಶಾಸಕ ಪಿ.ರವಿಕುಮಾರ್ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಬುಧವಾರ ತಾಲೂಕಿನ ಬಿ.ಹೊಸೂರು ಕಾಲೋನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಬಿ.ಹೊಸೂರು ಗ್ರಾಮದಲ್ಲಿ ಖಾಲಿ ಇರುವ ಸರ್ಕಾರಿ ಗೋಮಾಳದಲ್ಲಿ ೨ ಎಕರೆ ೧೩ ಗುಂಟೆ ಜಾಗವನ್ನು ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ನಿರ್ಮಾಣಕ್ಕೆ ಕಾಯ್ದಿರಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಿ.ಹೊಸೂರು ಗ್ರಾಮದ ಸರ್ಕಾರಿ ಗೋಮಾಳ ಜಾಗವನ್ನು ಈಗಾಗಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕಾಯ್ದಿರಿಸಲಾಗಿದ್ದು, ೨೦ ಗುಂಟೆಯನ್ನು ರಸ್ತೆಗೆ ಕಾಯ್ದಿರಿಸುವ ಬಗ್ಗೆ ಆರ್‌ಟಿಸಿಯಲ್ಲಿ ಹಾಗೂ ನಕಾಶೆಯಲ್ಲಿ ಇಂಡೀಕರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗೆ ಅಧಿಕಾರಿಗಳು ತಿಳಿಸಿದರು.

ಬಿ.ಹೊಸೂರು ಗ್ರಾಮದ ೪.೦೮ ಎಕರೆ ಜಮೀನನ್ನು ಮೊರಾರ್ಜಿ ಶಾಲೆಗಾಗಿ ಕಾಯ್ದಿರಿಸಿ ಆರ್‌ಟಿಸಿಯಲ್ಲಿ ನಮೂದಿಸಿ ಭೂಸ್ವಾಧೀನವಾಗಿರುವ ಬಗ್ಗೆ ದಾಖಲಾತಿ ಪರಿಶೀಲಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗಳು ರಾಜ್ಯದ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ದಾರಿ ದೀಪವಾಗಿದ್ದು ಉಚಿತವಾಗಿ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳಲ್ಲಿ ನೈತಿಕತೆ, ಸಧೃಡತೆ ಹಾಗೂ ಸ್ವಾವಲಂಬನೆ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಶಾಲೆಗಳನ್ನು ನಿರ್ಮಾಣ ಮಾಡುವುದು ಜಿಲ್ಲಾಡಳಿತದ ಗುರುತರ ಜವಾಬ್ದಾರಿಯಾಗಿದ್ದು, ಜನಪ್ರತಿನಿಧಿಗಳು ಇದಕ್ಕೆ ಸಹಕಾರ ನೀಡುತ್ತಿರುವುದು ಪ್ರಗತಿಗೆ ಪೂರಕವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.

ಪರಿಶೀಲನೆ ವೇಳೆ ಮಂಡ್ಯ ತಹಸೀಲ್ದಾರ್ ವಿಶ್ವನಾಥ್, ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಮಮತಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.