ಸಾರಾಂಶ
ಪ್ರಸ್ತಾವಿತ ಹಲವು ಸ್ಥಳಗಳನ್ನು ವೀಕ್ಷಿಸಿದ ಶಾಸಕರು ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಇತರರಲ್ಲಿ ಸೂಕ್ತ ಸ್ಥಳ ಮತ್ತು ಇತರ ವಿವರಗಳ ವರದಿ ಸಲ್ಲಿಸುವಂತೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಇತ್ತೀಚೆಗೆ ನೂತನ ತಾಲೂಕು ಮಾನ್ಯತೆ ಪಡೆದಿರುವ ಪೊನ್ನಂಪೇಟೆಗೆ ಮಂಜೂರಾಗಿರುವ ತಾಲೂಕು ಆಸ್ಪತ್ರೆಯ ನಿರ್ಮಾಣಕ್ಕೆ ಸ್ಥಳ ನಿಗದಿ ಮಾಡುವ ಉದ್ದೇಶದಿಂದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಗಾರರಾದ ಎ.ಎಸ್. ಪೊನ್ನಣ್ಣ ಅವರು ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಆಸುಪಾಸಿನಲ್ಲಿ ಸ್ಥಳ ವೀಕ್ಷಣೆ ಹಾಗೂ ಪರಿಶೀಲನೆ ನಡೆಸಿದರು.ಪರಿಶೀಲನೆ ಸಂದರ್ಭದಲ್ಲಿ ಶಾಸಕರೊಂದಿಗೆ ಕಂದಾಯ ಇಲಾಖೆ ಅಧಿಕಾರಿಗಳು, ವೈದ್ಯಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಪ್ರಸ್ತಾವಿತ ಹಲವು ಸ್ಥಳಗಳನ್ನು ವೀಕ್ಷಿಸಿದ ಶಾಸಕರು ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಇತರರಲ್ಲಿ ಸೂಕ್ತ ಸ್ಥಳ ಹಾಗೂ ಇತರ ವಿವರಗಳ ವರದಿ ಸಲ್ಲಿಸುವಂತೆ ಸೂಚಿಸಿದರು.ಆಸ್ಪತ್ರೆಗೆ ಅತ್ಯಂತ ಸೂಕ್ತವೆನಿಸಿದ ಸ್ಥಳವನ್ನು ಅತಿ ಶೀಘ್ರದಲ್ಲಿ ನಿಗದಿ ಮಾಡಿ, ತಾಲೂಕು ಆಸ್ಪತ್ರೆಯ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕರು ಹೇಳಿದರು.
ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಲು ಬೇಕಾಗಿರುವ ಎಲ್ಲ ಮಾನದಂಡಗಳನ್ನು ಗಂಭೀರವಾಗಿ ಪರಿಗಣಿಸಿ ಅತ್ಯಂತ ಸೂಕ್ತ ಸ್ಥಳವನ್ನು ಅತಿ ಶೀಘ್ರದಲ್ಲಿ ಗುರುತಿಸಿ, ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ವೇಗವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದೆಂದು ಶಾಸಕರು ಭರವಸೆ ನೀಡಿದರು.ಈ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.