ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟಿಸುವ ಪರಿಸ್ಥಿತಿ: ಸಂಸದ ಬಿ.ವೈ.ರಾಘವೇಂದ್ರ

| Published : Jun 18 2024, 12:49 AM IST

ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟಿಸುವ ಪರಿಸ್ಥಿತಿ: ಸಂಸದ ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಅಭಿನಂದನಾ ಸಮಾರಂಭದಲ್ಲಿ ನೂತನ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ವಿಧಾನಪರಿಷತ್ ಸದಸ್ಯ ಭೋಜೇಗೌಡ ಡಾ.ಧನಂಜಯ ಸರ್ಜಿಯವರನ್ನು ಗೌರವಿಸಲಾಯ್ತು.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷ ರು. ನೀಡುವ ಆಮಿಷದ ಮೂಲಕ ಮತದಾರರನ್ನು ಸೆಳೆಯುವ ತಂತ್ರಗಾರಿಕೆಯಲ್ಲಿಯೂ ಸೋತಿರುವ ಕಾಂಗ್ರೆಸ್ ರಾಜ್ಯದಲ್ಲಿ ಎರಡಂಕಿ ಸ್ಥಾನ ಗಳಿಸುವಲ್ಲಿ ವಿಫಲವಾಗಿದೆ. ಜನವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾದ ಸಂದರ್ಭ ಬಂದೊದಗಿದೆ ಎಂದು ನೂತನ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಮಂಡಲ ಬಿಜೆಪಿ ವತಿಯಿಂದ ಸೋಮವಾರ ಪಟ್ಟಣದ ವಿಧ್ಯಾಧಿರಾಜ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸುಭದ್ರ ಸರ್ಕಾರ ಹಾಗೂ ಭಾರತದ ನಿರ್ಮಾಣದ ಸಲುವಾಗಿ ಪಕ್ಷದ ಕಾರ್ಯಕರ್ತರು ಹಿಂದಿನ ಸರ್ಕಾರದ ಸಾಧನೆಗಳನ್ನು ತಿಳಿಸುವ ಸಲುವಾಗಿ ಮತದಾರರ ಮನೆಗಳಿಗೆ ತೆರಳಿ ಪಕ್ಷ ಗೆಲ್ಲಿಸುವಲ್ಲಿ ಮಾಡಿರುವ ಕಾರ್ಯ ಸ್ಮರಣೀಯವಾಗಿದ್ದು ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ ಎಂದು ಹೇಳಿದರು.

ಮತದಾರರಿಂದ ತಿರಸ್ಕೃತಗೊಂಡಿರುವ ಕಾಂಗ್ರೆಸ್ಸಿಗರು ಜನರಿಗೆ ನೀಡಿರುವ ಸವಲತ್ತು ತೆರಿಗೆ ಹಣದಿಂದ ಎಂಬುದನ್ನು ಮರೆತು, ಸೋಲಿನ ಹತಾಶೆಯಲ್ಲಿ ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ. ಭ್ರಷ್ಟಾಚಾರದ ಹಣವನ್ನು ತೆಲಂಗಾಣಕ್ಕೆ ಸಾಗಿಸಿದ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೂ ವೇತನ ನೀಡಲಾಗದ ಜನವಿರೋಧಿ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದರು.

ಸಂಸದರಿಗೆ ವಾರ್ಷಿಕ ₹5 ಕೋಟಿ ಅನುದಾನ ನೀಡಲಾಗುತ್ತದೆ. ಈ ಅನುದಾನದಲ್ಲಿ ರಾಷ್ಟ್ರೀಯ ಹೆದ್ದಾರಿಯಂತಹ ಪ್ರಮುಖ ಕಾರ್ಯಗಳಿಗೆ ಆದ್ಯತೆ ನೀಡಬೇಕಾಗಿದೆ. ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ ಅವಲಂಬಿಸುವುದು ಅನಿವಾರ್ಯ ಸಂಸದರ ಹೊಣೆ ಮುಖ್ಯವಾಗಿ ದೇಶದ ಅಗತ್ಯಗನುಗುಣವಾಗಿ ಕಾನೂನು ರಚನೆ ಮಾಡುವುದು ಎಂದು ಹೇಳಿದರು.

ಪರೋಕ್ಷವಾಗಿ ಕಾಂಗ್ರೆಸ್ಸಿಗೆ ಟಾಂಗ್ ನೀಡಿದ ಶಾಸಕ ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಕ್ಷೇತ್ರದಲ್ಲಿ ತಮ್ಮದು ಏನೂ ನಡೆಯೋದಿಲ್ಲ ಎಂಬುದು ಆ ಪಕ್ಷದ ಮುಖಂಡರಿಗೆ ಈಗ ಮನವರಿಕೆಯಾಗಿದೆ. ಜನರ ತೆರಿಗೆ ಹಣದಲ್ಲಿ ನಡೆದ ಪಕ್ಷದ ಚೀಪ್ ರಾಜಕಾರಣದಿಂದಾಗಿ ರಾಜ್ಯದ ಜನತೆ ಬದುಕು ಸಂಕಷ್ಟಕ್ಕೀಡಾಗಿದೆ. ಗ್ಯಾರಂಟಿ ಯೋಜನೆ ₹62 ಸಾವಿರ ಕೋಟಿ ಹಣದಿಂದ ರಾಜ್ಯದ ಬೊಕ್ಕಸ ಬರಿದಾಗಿದೆ. ಪೆಟ್ರೋಲ್ ಡೀಸೆಲ್ ಧಾರಣೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದಿದ್ದು ಜನರು ಜೀವ ಕೈಲಿ ಹಿಡಿದು ಬದುಕುವಂತಾಗಿದೆ ಎಂದೂ ದೂರಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಕುಣಜೆ ಕಿರಣ್ ಮಾತನಾಡಿ, ಜೆಡಿಎಸ್ ಎಲ್ಲಿದೆ ಎಂದು ಕೇಳಿದವರಿಗೆ ಈ ಚುನಾವಣೆ ಫಲಿತಾಂಶ ಉತ್ತರ ನೀಡಿದೆ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮೋಸದಿಂದ ಒಂದು ಸ್ಥಾನ ಗೆದ್ದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಜೊತೆ ಸೇರಿ ಕೆಲಸ ಮಾಡುವ ಸೌಭಾಗ್ಯ ದೊರೆತಿದ್ದು ಬಿಜೆಪಿಯವರು ಕೊಡುತ್ತಿರುವ ಪ್ರೀತಿಗೆ ಮನಸೋತಿದ್ದೇವೆ. ಮತ್ತು ಈ ಹೊಂದಾಣಿಕೆ ಶಾಶ್ವತವಾಗಿ ಮುಂದುವರೆಯಲಿದೆ ಎಂದರು.

ಪದವೀಧರ ಕ್ಷೇತ್ರದ ವಿಜೇತ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ಕಾಂಗ್ರೆಸ್ಸಿನ ಪೊಳ್ಳು ಭರವಸೆ ಮತ್ತು ಪಕ್ಷದೊಳಗಿನ ಬಂಡಾಯದ ನಡುವೆಯೂ ಕಾರ್ಯಕರ್ತರು ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬ ಮನೋಭಾವದಲ್ಲಿ ಹಗಲಿರುಳು ಶ್ರಮಿಸಿದ ಪರಿಣಾಮವಾಗಿ ನಮಗೆ ಜಯ ದೊರೆತಿದೆ. ಸಂಸದ ಬಿ.ವೈ.ರಾಘವೇಂದ್ರರಿಗೆ ಸಚಿವ ಸ್ಥಾನ ದೊರೆಯದಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗದು ಎಂಬ ನಂಬಿಕೆ ಇದೆ. ಜನಪ್ರತಿನಿಧಿಯಾಗಿ ನಿಮ್ಮ ಋಣ ತೀರಿಸುತ್ತೇನೆ ಎಂದರು.

ವಿಧಾನಪರಿಷತ್ ಸದಸ್ಯ ಭೋಜೇಗೌಡ ಮಾತನಾಡಿ, ದೇಶಕ್ಕೆ ನರೇಂದ್ರ ಮೋದಿಯವರ ನೇತೃತ್ವ ಅನಿವಾರ್ಯವಾಗಿದೆ. ಈ ಹಿನ್ನೆಲೆ ಬಿಜೆಪಿ ಜೆಡಿಎಸ್ ಮೈತ್ರಿ ಸಹಕಾರಿಯಾಗಿದ್ದು ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಕಾರ್ಯಕರ್ತರ ಭಾವನೆಗಳಿಗೂ ಸ್ಪಂದಿಸುವ ಅಗತ್ಯವಿದೆ. ಮತ್ತು ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮ ಮಾಡಬೇಕಿದೆ ಎಂದರು.

ಮಂಡಲ ಬಿಜೆಪಿ ಅಧ್ಯಕ್ಷ ನವೀನ್ ಹೆದ್ದೂರು ಪ್ರಾಸ್ತಾವಿಕವಾಗಿ ಮಾತನಾಡಿ, ಎಂಪಿ, ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರ ಗೆಲ್ಲುವುದಕ್ಕೆ ಎಲ್ಲರ ಶ್ರಮ ಕಾರಣವಾಗಿದೆ. ಕ್ಷೇತ್ರದ 62 ಗ್ರಾಪಂಗಳಲ್ಲಿ 59ರಲ್ಲಿ ಲೀಡ್ ಸಾಧಿಸಿದ್ದೇವೆ. ಕ್ಷೇತ್ರದ 40ಗ್ರಾಪಂ ವ್ಯಾಪ್ತಿಯ 226 ಬೂತ್‍ಗಳಲ್ಲಿ ಚಲಾವಣೆಯಾದ ಅರ್ಧಕ್ಕಿಂತ ಹೆಚ್ಚಿನ ಮತ ಗಳಿಸಿದ್ದೇವೆ ಎಂದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರದಲ್ಲಿ ಪ್ರಥಮ ಬಾರಿಗೆ ಪಟ್ಟಣಕ್ಕಾಗಮಿಸಿದ ಸಂಸದರನ್ನು ಬೈಕ್ ರ್‍ಯಾಲಿ ಮೂಲಕ ಸ್ವಾಗತಿಸಲಾಯ್ತು.

ವೇದಿಕೆಯಲ್ಲಿ ರಾಘವೇಂದ್ರ ನಾಯಕ್, ಬಿ.ಸ್ವಾಮಿರಾವ್, ಮಹೇಶ್ ಹುಲ್ಕುಳಿ, ರತ್ನಾಕರ ಶೆಣೈ, ಬೇಗುವಳ್ಳಿ ಸತೀಶ್, ಜೆಡಿಎಸ್ ಗುರುದತ್, ಸಾಲೇಕೊಪ್ಪ ರಾಮಚಂದ್ರ, ಶೈಲಾ ನಾಗರಾಜ್, ಯಶೋದಾ ಮಂಜುನಾಥ್ ಇದ್ದರು. ಮೋಹನ ಭಟ್ ಸ್ವಾಗತಿಸಿ ರಕ್ಷಿತ್ ಮೇಗರವಳ್ಳಿ ನಿರೂಪಿಸಿದರು.