ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ಶಿವಕುಮಾರ ಶ್ರೀ

| Published : Aug 13 2024, 12:52 AM IST

ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ಶಿವಕುಮಾರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಸ್ವಾತಂತ್ರ್ಯ ಪೂರ್ವ 1946 ರಲ್ಲಿಯೆ ಲಿಂಗೈಕ್ಯ ತರಳಬಾಳು ಮಠದ ಶಿವಕುಮಾರ ಶ್ರೀಗಳು ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದರು ಎಂದು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಅಣ್ಣನ ಬಳಗದ ವತಿಯಿಂದ ಜರುಗಿದ ತರಳಬಾಳು ಜಗದ್ಗುರು ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಯವರ 86ನೇ ಶ್ರದ್ಧಾಂಜಲಿ ಹಾಗೂ ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೂಲತಃ ತೂಲಹಳ್ಳಿಯವರಾದ ಶ್ರೀ ಗುರುಶಾಂತರಾಜ ದೇಶಕೇಂದ್ರ ಸ್ವಾಮೀಜಿಯವರು ಶಿಕ್ಷಣ ಪ್ರೇಮಿಗಳಾಗಿದ್ದು, 1938 ರಲ್ಲಿ ದಾವಣಗೆರೆಯಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಿದ್ದರು. ಶ್ರೀಗಳ ತ್ಯಾಗ, ಬಲಿದಾನವು ಸಮಾಜಕ್ಕೆ ಅಪರೂಪವಾದ ಕೊಡುಗೆಯಾಗಿದೆ ಎಂದರು.

ಇಂದು ತರಳಬಾಳು ಮಠದಿಂದ ನಾಡಿನಾದ್ಯಂತ 250ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ಸ್ಥಾಪನೆಗೊಂಡಿದ್ದು, ಇದರಲ್ಲಿ 50 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ಪೌರಾಣಿಕವಾಗಿ ಸಾಕಷ್ಟು ಕಥಾನಕಗಳಿದ್ದೂ ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆಗೆ ಜೀವನ ಆದರ್ಶವನ್ನು ತೋರಿಸುವ ಪುರಾಣಗಳ ಕಥೆಗಳನ್ನು ಓದಬೇಕು. ಜೊತೆಗೆ ಜ್ಞಾನ ಸಂಪಾದನೆ ನಿರಂತರವಾಗಿರಬೇಕು ಎಂದು ತಿಳಿಸಿದರು.

ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ಹಾ.ಮ.ನಾಗಾರ್ಜುನ ಮಾತನಾಡಿ, ವೀರಗಾಸೆಯು ಗಂಡು ಮೆಟ್ಟಿದ ಕಲೆ. ಶ್ರೀ ಮಠವು ಅನೇಕ ವರ್ಷಗಳಿಂದ ಜಾನಪದ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಜೊತೆಗೆ ಜಾನಪದ ಕಲೆಯನ್ನು ಪೋಷಿಸುವ ಕೆಲಸ ಮಾಡುತ್ತಿದೆ ಎಂದರು.

ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕಲೆಯನ್ನು ಆಸ್ವಾದಿಸುವ ಪ್ರಜೆಗಳಾಗದೆ ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಬೆಳೆಸಿಕೊಳ್ಳಬೇಕು ಎಂದರು.

ಪುರುವಂತಿಕೆ ಸ್ಪರ್ಧೆಯಲ್ಲಿ ಹಾನಗಲ್‌ನ ಅರಳೇಶ್ವರದ ಶ್ರೀಸಿದ್ದೇಶ್ವರ ಪುರುವಂತಿಕೆ ಸೇವಾ ಸಂಘವು ಪ್ರಥಮ, ಸವಣೂರಿನ ಯಲವಗಿಯ ಶ್ರೀ ವೀರಭದ್ರೇಶ್ವರ ಸೇವಾ ಸಂಘ ದ್ವಿತೀಯ ಸ್ಥಾನ ಪಡೆದರೆ, ಗದಗದ ಮುಳಗುಂದ ಶ್ರೀ ವೀರಭದ್ರೇಶ್ವರ ಪುರವಂತಿಕೆ ಚಮ್ಮಳ ತೃತೀಯ ಸ್ಥಾನ ಪಡೆದಿದೆ.

ವೀರಗಾಸೆ ಸ್ಪರ್ಧೆಯಲ್ಲಿ ತರೀಕೆರೆ ಬಾವಿಕೆರೆಯ ಶ್ರೀ ಚಾಮುಂಡೇಶ್ವರಿ ಮಹಿಳಾ ವೀರಗಾಸೆ ತಂಡವು ಪ್ರಥಮ, ಹಾಸನ ಶ್ರೀ ವೀರಭದ್ರೇಶ್ವರ ವೀರಗಾಸೆ ಕಲಾತಂಡವು ದ್ವಿತೀಯ ಸ್ಥಾನ ಪಡೆದಿದ್ದು, ಹೊಳಲ್ಕೆರೆಯ ತಾಳಿಕಟ್ಟೆಯ ಶ್ರೀ ಬೀರಲಿಂಗೇಶ್ವರ ಮಹಿಳಾ ಕಲಾ ತಂಡವು ತೃತೀಯ ಸ್ಥಾನ ಪಡೆದುಕಿಂಡಿದೆ.

ಈ ವೇಳೆ ಮಾಲೇನಹಳ್ಳಿ ಬಸಪ್ಪ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ 11 ವೀರಗಾಸೆ ತಂಡದವರು ಭಾಗವಹಿಸಿದ್ದರು.