ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ತಾಲೂಕಿನ ಆಲಹಳ್ಳಿ ಪಟ್ಟದ ಮಠಾಧ್ಯಕ್ಷರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಬುಧವಾರ ಬೆಳಗಿನ ಜಾವ ನಿಧನರಾದರು.ಶ್ರೀಗಳು 3 ದಶಕಗಳಿಂದಲೂ ಭಕ್ತಾಧಿಗಳಿಗೆ ಮಾರ್ಗದರ್ಶನ, ದಾಸೋಹ ಉಣಬಡಿಸುವ ಔದಾರ್ಯ ಗುಣ ಹೊಂದಿದ್ದರು. ಎಲ್ಲಾ ವರ್ಗದ ಸಮಾಜದ ಮುಖಂಡರನ್ನು ಪ್ರೀತಿಸುತ್ತಾ, ಉತ್ತಮ ಬಾಂಧವ್ಯ ಹೊಂದುವ ಮೂಲಕ ಶ್ರೀಗಳು ಖ್ಯಾತರಾಗಿದ್ದರು. 1994ರಲ್ಲಿ ಅವರು ಅಂದಿನ ಮಠಾಧಿಪತಿಗಳಾಗಿದ್ದ ಬಸಪ್ಪ ಶ್ರೀಗಳಿಂದ ಮಠದ ಹೊಣೆಗಾರಿಕೆ ಸ್ವೀಕರಿಸಿ ಮೂರು ದಶಕಗಳ ಕಾಲ ತಮ್ಮ ಹೊಣೆಗಾರಿಕೆ ನಿಭಾಯಿಸುವ ಜೊತೆಗೆ ಸಿದ್ಧಗಂಗಾ ಶ್ರೀ, ಸುತ್ತೂರು ಶ್ರೀಗಳಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದರು.
1947 ಜನವರಿ 1ರಂದು ಜನನ:ಮೈಸೂರು ಜಿಲ್ಲೆ ನರಸೀಪುರ ತಾಲೂಕು ಶಂಭುದೇವನಪುರ ಗ್ರಾಮದ ನಿವಾಸಿಗಳಾದ ಬಸಮ್ಮ ಹಾಗೂ ನಂಜುಂಡಪ್ಪ ದಂಪತಿಗಳ ಏಕೈಕ ಪುತ್ರರಾಗಿ ಶ್ರೀಗಳು 1947 ಜನವರಿ 1ರಂದು ಜನಿಸಿದ್ದರು. ಅವರಿಗೆ ಶಿವನಂಜಪ್ಪ ಎಂದು ನಾಮಕರಣ ಮಾಡಲಾಗಿತ್ತು. ಒಮ್ಮೆ ಆಲಹಳ್ಳಿ ಪಟ್ಟದ ಮಠದ ಹಿಂದಿನ ಶ್ರೀಗಳಾದ ಬಸಪ್ಪ ಸ್ವಾಮೀಜಿ ಇವರ ಮನೆಗೆ ಆಗಮಿಸಿದ್ದ ವೇಳೆ ಬಾಲಕನ ಮೇಲೆ ದೃಷ್ಟಿ ಬೀರಿ ಐದು ವರ್ಷವಾಗಿದ್ದಾಗಲೆ ಶ್ರೀಗಳನ್ನು ಮಠಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದಲೇ ಅವರ ವಿದ್ಯಾಭ್ಯಾಸ ಪ್ರಾರಂಭವಾಗುತ್ತದೆ.
ಆಲಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿ, ಕಲೆ, ನಾಟಕ, ಸಂಗೀತ ಸಾಹಿತ್ಯದಲ್ಲಿ ಅಪಾರ ಆಸಕ್ತಿ ವಹಿಸಿದ್ದರು. ಬಳಿಕ 1972ರಲ್ಲಿ ತೇರಂಬಳ್ಳಿ ಶ್ರೀಗಳಾದ ನಂಜುಂಡ ಸ್ವಾಮೀಜಿಗಳಿಂದ ಜ್ಯೋತಿಷ್ಯ ಶಾಸ್ತ್ರ ಅಧ್ಯಯನ ಮಾಡಿ, ಅದರಲ್ಲಿ ಪಾಂಡಿತ್ಯ ಸಾಧಿಸಿದ್ದರು. 1975 ರಿಂದಲೂ ಶ್ರೀಗಳು ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಮಾರ್ಗದರ್ಶನ ಮಾಡುತ್ತಲೆ ಬಂದಿದ್ದರು.1994ರಲ್ಲಿ ಅಂದಿನ ಮಠಾಧ್ಯಕ್ಷರಾದ ಬಸಪ್ಪ ಸ್ವಾಮೀಜಿ ಶಿವನಂಜಪ್ಪ ಎಂಬ ನಾಮಾಂಕಿತರಾಗಿದ್ದ ಶ್ರೀಗಳಿಗೆ ಶಿವಕುಮಾರ ಸ್ವಾಮಿ ಎಂದು ನಾಮಕರಣ ಮಾಡಿ ಪೀಠವನ್ನು ಹಸ್ತಾಂತರಿಸಿದ್ದರು. ಈ ಹಿನ್ನೆಲೆಯಲ್ಲಿ 30 ವರುಷಗಳ ಕಾಲ ಮಠದ ಹೊಣೆ ವಹಿಸಿಕೊಂಡು ಅನೇಕ ಸಾರ್ಥಕ ಕೆಲಸ ಮೂಡುವ ಮೂಲಕ ಶ್ರೀಗಳು ಜನಪ್ರಿಯರಾಗಿದ್ದರು. ಸಿದ್ಧಗಂಗಾಶ್ರೀಗಳಿಂದ ನಮನ:
ಶಿವಕುಮಾರ ಸ್ವಾಮೀಜಿಯ ನಿಧನ ವಾರ್ತೆ ಕೇಳುತ್ತಿದ್ದಂತೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀಗಳು ಸೇರಿದಂತೆ ಜಿಲ್ಲೆಯ ಅನೇಕ ಶ್ರೀಗಳು ಅಂತಿಮ ನಮನ ಸಲ್ಲಿಸಿದರು. ಗುರುವಾರ ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಕೊಳ್ಳೇಗಾಲ ಶಾಸಕ ಎ.ಆರ್.ಕೖಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಬೃಂಗೇಶ್ ಕಟ್ಟೆ. ಸಿದ್ದಲಿಂಗಸ್ವಾಮಿ, ಮಹದೇವಪ್ರಸಾದ್ ಸೇರಿದಂತೆ ಅನೇಕ ಭಕ್ತಾದಿಗಳು ಶ್ರೀಗಳ ಅಂತಿಮ ದರ್ಶನದಲ್ಲಿ ಪಾಲ್ಗೊಂಡರು.