ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಾಡಿನ ಶೈಕ್ಷಣಿಕ ಕ್ಷೇತ್ರಕ್ಕೆ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಕೊಡುಗೆ ಅಪಾರವಾದುದು ಎಂದು ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.
ರಾಜಾಜಿನಗರ ಪ್ರವೇಶದ್ವಾರದಲ್ಲಿ ಶುಕ್ರವಾರ ಶಿವಕುಮಾರ ಸ್ವಾಮೀಜಿ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಶಿವಕುಮಾರಸ್ವಾಮೀಜಿ ಅವರ ಕಂಚಿನ ಪುತ್ಥಳಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿವಕುಮಾರ ಸ್ವಾಮೀಜಿ ಅವರು ನಾಡು ಕಂಡ ದಿವ್ಯ ಚೇತನವಾಗಿದ್ದಾರೆ. ಹತ್ತಾರು ಸಾವಿರ ಮಕ್ಕಳಿಗೆ ಅನ್ನ, ಅಕ್ಷರ ನೀಡಿ ನಾಡಿನ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಪೋಷಕರಿಗಿಂತಲೂ ಅಧಿಕ ಪ್ರೀತಿಯನ್ನು ಮಕ್ಕಳಿಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಸುಮಂಗಲಿ ಸೇವಾಶ್ರಮದ ಸುಶೀಲಮ್ಮ, ಸಾಹಿತಿ ಪ್ರೊ.ಎಂ.ಜಿ.ನಾಗರಾಜ್, ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ, ಟ್ರಸ್ಟ್ ಅಧ್ಯಕ್ಷ ವೆಂಕಟೇಶ್ ಗೌಡ ಮತ್ತಿತರರು ಹಾಜರಿದ್ದರು.