ಗ್ರಾಮೀಣ ಪ್ರತಿಭೆ ಸ್ಮಿತಾಗೆ ಆರು ಚಿನ್ನದ ಪದಕ

| Published : Mar 29 2024, 12:51 AM IST

ಸಾರಾಂಶ

ಗ್ರಾಮೀಣ ಪ್ರತಿಭೆ ಸ್ಮಿತಾ, ಮೈಸೂರು ವಿವಿಯಲ್ಲಿ ಎಂಎಸ್‌ಡಬ್ಯೂವಿನಲ್ಲಿ ಆರು ಚಿನ್ನದ ಪದಕದೊಂದಿಗೆ ಸಾಧನೆ ಮಾಡಿದ್ದಾಳೆ. ಆದರೆ ಈಕೆಯ ಈ ಸಾಧನೆಯ ಹಿಂದೆ ಇರುವುದು ಆಕೆಯ ಪದವಿ ಶಿಕ್ಷಣದ ಪ್ರಾಧ್ಯಾಪಕ ನಂದೀಶ್‌ ವೈ.ಡಿ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಬಜತ್ತೂರು ಎಂಬ ಗ್ರಾಮದಲ್ಲಿ ಹುಟ್ಟಿ ಬೆಳೆದು ಅಲ್ಲಿಯೇ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪಡೆದು, ಉಪ್ಪಿನಂಗಡಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಪಡೆದ ಗ್ರಾಮೀಣ ಪ್ರತಿಭೆ ಸ್ಮಿತಾ, ಮೈಸೂರು ವಿವಿಯಲ್ಲಿ ಎಂಎಸ್‌ಡಬ್ಯೂವಿನಲ್ಲಿ ಆರು ಚಿನ್ನದ ಪದಕದೊಂದಿಗೆ ಸಾಧನೆ ಮಾಡಿದ್ದಾಳೆ. ಆದರೆ ಈಕೆಯ ಈ ಸಾಧನೆಯ ಹಿಂದೆ ಇರುವುದು ಆಕೆಯ ಪದವಿ ಶಿಕ್ಷಣದ ಪ್ರಾಧ್ಯಾಪಕ ನಂದೀಶ್‌ ವೈ.ಡಿ. ‘ನಾನು ತೀರಾ ಬಡ ಕುಟುಂಬದವಳು. ಕಲಿಯುವುದಕ್ಕೆ ಆಸಕ್ತಿ ಇತ್ತು. ಯಾವುದನ್ನು ಕಲಿಯಬೇಕೆನ್ನುವುದರ ಬಗ್ಗೆ ಅರಿವಿರಲಿಲ್ಲ. ನನ್ನ ಕಲಿಕಾಸಕ್ತಿಯನ್ನು ಗುರುತಿಸಿ, ಕಲಿಕೆಗೆ ದಿಕ್ಕು ತೋರಿಸಿ, ನನ್ನಂತಹ ಬಡ ವಿದ್ಯಾರ್ಥಿನಿಯೊಬ್ಬಳು 6 ಚಿನ್ನದ ಪದಕದೊಂದಿಗೆ ಸ್ನಾತಕೋತರ ಪದವಿ ಪರೀಕ್ಷೆಯನ್ನು ಉತ್ತೀರ್ಣಳಾಗಿದ್ದೇನೆ ಎಂದರೆ ಅದಕ್ಕೆ ನನ್ನ ಪದವಿ ಶಿಕ್ಷಣದ ಪ್ರಾಧ್ಯಾಪಕ ನಂದೀಶ್ ವೈ.ಡಿ. ಅವರೇ ಕಾರಣ’ ಎಂದು ಸ್ಮಿತಾ ಹೇಳುತ್ತಾರೆ. ಇಂಥ ಗುರುವಿದ್ದರೆ ಅದೆಷ್ಟೋ ಗ್ರಾಮೀಣ ಬಡ ಪ್ರತಿಭೆಗಳ ಅನಾವರಣವಾಗುತ್ತಿತ್ತು ಅಲ್ಲವೇ?. ಸಾಧನೆಗೆ ಬೆನ್ನೆಲುಬಾಗಿ ನಿಂತ ಪ್ರಾಧ್ಯಾಪಕ: ಪ್ರಾಧ್ಯಾಪಕ ನಂದೀಶ್ ವೈ.ಡಿ. ಕಿರಿಯ ವಯಸ್ಸಿನ ಪ್ರಾಧ್ಯಾಪಕ, ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕರ್ತವ್ಯಕ್ಕೆ ಸೇರಿದಾಗ, ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿ ಕಾಲೇಜಿಗೆ ಆಗಮಿಸಿದ ಸ್ಮಿತಾಳ ಕಲಿಕಾಸಕ್ತಿಯನ್ನು ಕಂಡ ಅವರು ಸಮಾಜ ವಿಜ್ಞಾನದತ್ತ ಗಮನ ಹರಿಸಲು ಸಲಹೆ ನೀಡಿದರು. ಮನೆಯಲ್ಲಿನ ಬಡತನ ಆಕೆಯ ಕಲಿಕೆಗೆ ಅಡಚನೆಯಾಗಬಾರದೆಂದು ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಲು, ಪರೀಕ್ಷೆ ಬರೆಯಲು ಉತ್ತೇಜನ ನೀಡಿದರು. ಪ್ರಾಧ್ಯಾಪಕರಿಂದ ದೊರೆತ ಬೆಂಬಲವನ್ನು ಉತ್ತಮವಾಗಿ ಬಳಸಿಕೊಂಡ ಸ್ಮಿತಾ ಬಿಎಸ್‌ಡಬ್ಲ್ಯೂ ಪರೀಕ್ಷೆಯಲ್ಲಿ ರ‍್ಯಾಂಕ್‌ಗಳಿಸಿ ಊರಿಗೆ ಗೌರವ ತಂದಿದ್ದಳು. ವಿದ್ಯಾರ್ಥಿನಿಯ ಈ ಸಾಧನೆಗೆ ನೀರೆರೆದ ಪ್ರಾಧ್ಯಾಪಕ ನಂದೀಶ್‌ ಅವರು, ಆಕೆಗೆ ಅಗತ್ಯ ಮಾರ್ಗದರ್ಶನ ನೀಡಿ ಆಕೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತರ ಪದವಿ ಪಡೆಯಲು ಪ್ರೇರಣೆ ನೀಡಿದರು. ಮೈಸೂರು ವಿವಿಗೆ ಸೇರಿದ ಸ್ಮಿತಾಗೆ ಅಲ್ಲಿಯೂ ಅಗತ್ಯ ವಿದ್ಯಾರ್ಥಿವೇತನ ಸಿಗುವಂತೆ ಸಹಕರಿಸಿದರು. ಇದೀಗ ಆಕೆ ಎಂಎಸ್‌ಡಬ್ಲ್ಯೂ ಸ್ನಾತಕೋತ್ತರ ಪದವಿಯನ್ನು ಆರು ಚಿನ್ನದ ಪದಕಗೊಂದಿಗೆ ಪೂರ್ಣಗೊಳಿಸಿ ಸಾಧನೆ ಮಾಡಿದ್ದಾಳೆ.