ರಾಜ್ಯ ಸರಕಾರ ನೀಡುತ್ತಿರುವ ಜುಜುಬಿ ಅನುದಾನ ಕಳೆದ ಆರು ತಿಂಗಳಿನಿಂದ ಸಿಗದೆ ಸಂಕಷ್ಟಕ್ಕೀಡಾದ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ತಮ್ಮ ಹಕ್ಕು, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜ. 28ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಉಡುಪಿ: ರಾಜ್ಯ ಸರಕಾರ ನೀಡುತ್ತಿರುವ ಜುಜುಬಿ ಅನುದಾನ ಕಳೆದ ಆರು ತಿಂಗಳಿನಿಂದ ಸಿಗದೆ ಸಂಕಷ್ಟಕ್ಕೀಡಾದ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ತಮ್ಮ ಹಕ್ಕು, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜ. 28ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ಅಧ್ಯಕ್ಷೆ ಡಾ. ಕಾಂತಿ ಹರೀಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಆರು ತಿಂಗಳಿನಿಂದ ಶಾಲೆಗಳಿಗೆ ಅನುದಾನ ಬಾರದೆ ಸಂಕಷ್ಟ ಸ್ಥಿತಿ ಎದುರಾಗಿದೆ. ಆದ್ದರಿಂದ ಅನಿವಾರ್ಯವಾಗಿ ಪ್ರತಭಟನೆ ನಡೆಸಬೇಕಾಗಿದೆ ಎಂದರು. ಸರ್ಕಾರದ ಅನುದಾನ ಪಡೆವ 180 ವಿಶೇಷ ಶಾಲೆಗಳು ರಾಜ್ಯದಲ್ಲಿದ್ದು, 2007ರಿಂದ ಶಿಕ್ಷಕರು ಹಾಗೂ ಶಿಕ್ಷಕೇತರರಿಗೆ ಸೇವಾ ಭದ್ರತೆಗಾಗಿ ಮುಂದಿಟ್ಟ ಬೇಡಿಕೆ ಈಡೇರಿಲ್ಲ. ಸರ್ಕಾರದ ದ್ವಂದ್ಧ ನೀತಿಯಿಂದ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುತ್ತಿಲ್ಲ. ಶಿಶು ಕೇಂದ್ರಿತ ವ್ಯವಸ್ಥೆಯಡಿ ಅನುದಾನ ಪಡೆವ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ 1987ರಲ್ಲಿ ಜಾರಿಗೆ ತಂದ ಅನುದಾನ ನೀತಿ ಅನ್ವಯಿಸಬೇಕು. ವಿಶೇಷ ಶಾಲೆಗಳ ಅನುದಾನ ಶೇ. 40 ಏರಿಕೆಯ ಪ್ರಸ್ತಾವನೆಗೆ ಸರಕಾರ ಕೂಡಲೇ ಮಂಜೂರಾತಿ ನೀಡಬೇಕು, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವಿಶೇಷ ಶಿಕ್ಷಕರಿಗೆ ಪೂರ್ಣ ಪ್ರಮಾಣದ ಆರ್ಥಿಕ ಸೌಲಭ್ಯ ಒದಗಿಸಬೇಕು, ಶಿಶು ಕೇಂದ್ರಿತ ಸಹಾಯ ಧನ ಯೋಜನೆಯ ಮಾರ್ಗದರ್ಶಿ ಸೂತ್ರವನ್ನು ಐದು ವರ್ಷಕ್ಕೊಮ್ಮೆ ಪರಿಷ್ಕರಿಸಬೇಕು, ವಿಶೇಷ ಶಾಲೆಗಳಿಗೆ ಇಲಾಖಾ ಅನುದಾನವನ್ನು ಎರಡು ಕಂತುಗಳಲ್ಲಿ ಕ್ಲಪ್ತ ಕಾಲದಲ್ಲಿ ಒದಗಿಸಬೇಕು ಎಂಬುದು ವಿಶೇಷ ಶಿಕ್ಷಕರ ಆಗ್ರಹವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ಅಧ್ಯಕ್ಷ ರವೀಂದ್ರ ಎಚ್., ಸಂಘದ ಗೌರವಾಧ್ಯಕ್ಷೆ ಆಗ್ನೆಸ್ ಕುಂದರ್, ಶಶಿಕಲಾ ಕೋಟ್ಯಾನ್, ಯೂನಿಸ್, ದಿಲ್ದಾರ್ ಫಝಲುರ್ ರೆಹಮಾನ್, ಕೌಸರ್ ಉಪಸ್ಥಿತರಿದ್ದರು.