ಅಳವಂಡಿ ಭಾಗದಲ್ಲಿ ಸುಮಾರು ₹552 ಕೋಟಿ ವೆಚ್ಚದ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಈ ತಿಂಗಳಲ್ಲೇ ಟೆಂಡರ್ ಕರೆದು 78 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ
ಕೊಪ್ಪಳ: ಮುಂದಿನ 50 ವರ್ಷಗಳ ಕಾಲ ವಿದ್ಯುತ್ ಸಮಸ್ಯೆ ಎದುರಾಗದಂತೆ ಕೊಪ್ಪಳ ಕ್ಷೇತ್ರದಲ್ಲಿ ಒಟ್ಟು 6 ಸಬ್‌ಸ್ಟೇಷನ್ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ ನೆಲೋಗಿಪುರ (ಭೈರಾಪುರ) ಗ್ರಾಮದಲ್ಲಿ ಜು.24ರಂದು ₹ 27.46 ಕೋಟಿ ಅಂದಾಜು ವೆಚ್ಚದಲ್ಲಿ ನೂತನ 2x20ಎಂವಿಎ, 110/11ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆ ಹಾಗೂ ಮುಂಡರಗಿ-ಬೆಟಗೇರಿ ಎಸ್‌ಸಿ ಲೈನ್‌ನಿಂದ ನೆಲೋಗಿಪುರ ಉಪಕೇಂದ್ರಕ್ಕೆ 6 ಕಿಮೀ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ಈ ಭಾಗದ ರೈತರು ಬಹುವರ್ಷಗಳಿಂದ ಅನುಭವಿಸುತ್ತಿದ್ದ ವಿದ್ಯುತ್ ಸಮಸ್ಯೆಗೆ ಈಗ ಶಾಶ್ವತ ಪರಿಹಾರ ಸಿಗಲಿದೆ. 110 ಕೆವಿ ಉಪಕೇಂದ್ರದ ಮಂಜೂರಾತಿ ಪಡೆದಿರುವುದು ಸಂತಸ ತಂದಿದ್ದು, ಮುಂಬರುವ ದಿನಗಳಲ್ಲಿ ಈ ಭಾಗದ ರೈತರಿಗೆ ಎದುರಾಗುತ್ತಿದ್ದ ಲೋಡ್ ಶೆಡ್ಡಿಂಗ್ ಸಮಸ್ಯೆಗೆ ಮುಕ್ತಿ ಸಿಗಲಿದೆ. ಈ ವಿದ್ಯುತ್ ಉಪಕೇಂದ್ರದ ಕಾಮಗಾರಿ ನಿಗದಿತ ಅವಧಿಯೊಳಗೆ ಗುಣಮಟ್ಟದಿಂದ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಪಡಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಅಳವಂಡಿ ಭಾಗದಲ್ಲಿ ಸುಮಾರು ₹552 ಕೋಟಿ ವೆಚ್ಚದ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಈ ತಿಂಗಳಲ್ಲೇ ಟೆಂಡರ್ ಕರೆದು 78 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕ್ಷೇತ್ರದಲ್ಲಿ ₹ 245 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಪ್ರತಿ ಮನೆಗೂ ತುಂಗಭದ್ರಾ ನೀರು ತಲುಪಲಿದೆ. ಕೇಷಿಪ್ ಯೋಜನೆಯಡಿ ಗಿಣಿಗೇರಿಯಿಂದ ಮುಂಡರಗಿವರೆಗೆ ₹352 ಕೋಟಿ ವೆಚ್ಚದಲ್ಲಿ 40 ಕಿಮೀ ಚತುಸ್ಪಥ ರಸ್ತೆಗೆ ಮಂಜೂರಿಸಿ ಟೆಂಡರ್ ಅನುಮೋದನೆ ಮಾಡಿಸಿ ಟೆಂಡರ್ ಕರೆಯುವಂತಹ ಕೆಲಸವಾಗುತ್ತಿದೆ. ಭಾರತ್ ಮಾಲಾ ಯೋಜನೆಯಡಿ 6 ಲೇನ್ ರಸ್ತೆ ಕಾಮಗಾರಿ ನಡೆಯುತ್ತಿದೆ. ನಿಲೋಗಿಪುರ ಸೇತುವೆ ಸೇರಿದಂತೆ ಹಲವು ಸೇತುವೆಗಳ ನಿರ್ಮಾಣ ಹಾಗೂ ರಸ್ತೆಗಳ ಡಾಂಬರೀಕರಣಕ್ಕೆ ₹ 80 ಕೋಟಿ ಅನುದಾನ ಒದಗಿಸಲಾಗಿದೆ. ಈ ಭಾಗದಲ್ಲಿಯೂ ಹೈಸ್ಕೂಲ್ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಿ ಮಾಡಲಾಗುವುದು ಎಂದು ಹೇಳಿದರು.ಕೊಪ್ಪಳದಲ್ಲಿ 450 ಹಾಸಿಗೆ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಜತೆಗೆ ಮುನಿರಾಬಾದನಲ್ಲಿ ₹240 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಕೇರ್ ಸೆಂಟರ್ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಹೇಳಿದರು.
ಎಸ್‌ಐಆರ್ ನೋಂದಣಿಗೆ ಕರೆ: ಕೇಂದ್ರ ಚುನಾವಣಾ ಆಯೋಗ ಕೈಗೊಂಡಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು.ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಲು ಹಾಗೂ ಪ್ರಜಾಸತ್ತಾತ್ಮಕ ಹಕ್ಕು ಪಡೆಯಲು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಸಂಸದ ಕೆ. ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಕೊಪ್ಪಳ ಜೆಸ್ಕಾಂ ಅಧೀಕ್ಷಕ ಅಭಿಯಂತರ ಮೋಟ್ಲಾ ನಾಯ್ಕ, ಕೆಪಿಟಿಸಿಎಲ್ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ಪ್ರಸಾದಬಾಬು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಯು.ವೀರೇಶ ಹಾಗೂ ಎಲ್.ಅರುಣ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ ನಾಗರಳ್ಳಿ, ಕೆಎಂಎಫ್ ನಿರ್ದೇಶಕ ಕೃಷ್ಣ ರೆಡ್ಡಿ, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ ಸುರೇಶ ರೆಡ್ಡಿ, ಕಾಟನ್ ಪಾಶಾ, ಯಂಕನಗೌಡ್ರ ಹಿರೇಗೌಡ್ರ, ಭರಮಪ್ಪ ಹಟ್ಟಿ, ಶಾಹೀದ್, ಅನ್ವರ ಅಳವಂಡಿ, ಗುರುಬಸವರಾಜ್ ಹಳ್ಳಿಕೇರಿ, ಭೀಮಣ್ಣ ಬೋಚನಹಳ್ಳಿ, ತೋಟಪ್ಪ ಸಿಂಟ್ರ, ಶಿವಕುಮಾರ್ ಶೆಟ್ಟರ್, ಹನಮೇಶ್ ಹೊಸಳ್ಳಿ, ಆನಂದ ಕಿನ್ನಾಳ ಸೇರಿದಂತೆ ಹಲವು ಗಣ್ಯರು, ಮುಖಂಡರು, ಇತರೆ ಜನಪ್ರತಿನಿಧಿ, ಜೆಸ್ಕಾ ಮತ್ತು ಕೆಪಿಟಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಅಧಿಕಾರಿಗಳು, ಸಿಬ್ಬಂದಿ, ರೈತರು, ನಿಲೋಗುಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿದ್ದರು.