ಭಕ್ತಿ ಮತ್ತು ಸಂಕಲ್ಪದ ಪ್ರತೀಕವಾಗಿ ಸತತ 16 ವರ್ಷಗಳಿಂದ ಈ ಪಾದಯಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಈ ಪಾದಯಾತ್ರೆಯಿಂದ ನಮ್ಮ ಭಾಗದಲ್ಲಿ ಉತ್ತಮ ಮಳೆಯಾಗಿ, ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಿ ರೈತರು ಸಮೃದ್ಧ ಜೀವನ ನಡೆಸಲೆಂದು ಆಶಿಸಿದರು.

ಚಿಂತಾಮಣಿ: ಲೋಕಕಲ್ಯಾಣಕ್ಕಾಗಿ, ಉತ್ತಮ ಮಳೆ- ಬೆಳೆ ಹಾಗೂ ಜನ- ಜಾನುವಾರುಗಳ ಸುಖ, ಶಾಂತಿ ಮತ್ತು ನೆಮ್ಮದಿಯ ಬಾಳಿಗಾಗಿ ಪ್ರಾರ್ಥಿಸಿ, ನಗರದ 300ಕ್ಕೂ ಹೆಚ್ಚು ಭಕ್ತಾದಿಗಳು ಚಿಂತಾಮಣಿಯಿಂದ ಕಲಿಯುಗದ ಪ್ರತ್ಯಕ್ಷ ದೈವ ತಿರುಮಲ ತಿರುಪತಿಗೆ ಹದಿನಾರನೇ ವರ್ಷದ ಭವ್ಯ ಪಾದಯಾತ್ರೆ ಕೈಗೊಂಡಿದ್ದಾರೆ.

ನಗರದ ಆಜಾದ್ ಚೌಕದಲ್ಲಿರುವ ಶ್ರೀ ಹರಿಹರೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಧಾರ್ಮಿಕ ಪಾದಯಾತ್ರೆಗೆ ಬಿಜೆಪಿ ಮುಖಂಡ ಜಿ.ಎನ್. ವೇಣುಗೋಪಾಲ್ ಚಾಲನೆ ನೀಡಿ ಮಾತನಾಡಿ, ಭಕ್ತಿ ಮತ್ತು ಸಂಕಲ್ಪದ ಪ್ರತೀಕವಾಗಿ ಸತತ 16 ವರ್ಷಗಳಿಂದ ಈ ಪಾದಯಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಈ ಪಾದಯಾತ್ರೆಯಿಂದ ನಮ್ಮ ಭಾಗದಲ್ಲಿ ಉತ್ತಮ ಮಳೆಯಾಗಿ, ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಿ ರೈತರು ಸಮೃದ್ಧ ಜೀವನ ನಡೆಸಲೆಂದು ಆಶಿಸಿದರು.

ಹಿರಿಯರು, ಯುವಕರು ಸೇರಿ ಸುಮಾರು 300ಕ್ಕೂ ಹೆಚ್ಚು ಗೋವಿಂದ ನಾಮಸ್ಮರಣೆಯ ಭಕ್ತರು ಈ ಸುದೀರ್ಘ ನಡಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಪಾದಯಾತ್ರೆ ಹೊರಡುವ ಮುನ್ನ ಅಜಾದ್ ಚೌಕ ಮತ್ತು ಹರಿಹರೇಶ್ವರ ದೇವಾಲಯದ ಆವರಣವು ಸಂಪೂರ್ಣವಾಗಿ ಗೋವಿಂದ ಮುಕುಂದ ನಾಮಸ್ಮರಣೆಯಿಂದ ಮೊಳಗುತ್ತಿತ್ತು. ಕರ್ಪೂರದ ಆರತಿ, ಧೂಪದ ಸುಗಂಧ ಮತ್ತು ಭಕ್ತರ ಜಯಘೋಷಗಳು ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದವು. ಭಕ್ತಾದಿಗಳಿಗೆ ದಾರಿಯುದ್ದಕ್ಕೂ ಯಾವುದೇ ತೊಂದರೆಯಾಗದಂತೆ ಅಗತ್ಯ ಸೌಕರ್ಯಗಳು ಮತ್ತು ವಾಹನಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.