ಸಾರಾಂಶ
ಶಿರಸಿ:
ನಿರುದ್ಯೋಗ ಸಮಸ್ಯೆ ತೊಲಗಿಸಬೇಕೆಂದರೆ ಕೌಶಲ್ಯಾಧಾರಿತ ಶಿಕ್ಷಣ ಒಂದೇ ದಾರಿ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್.ವಿ. ಜಯಂತ ಹೇಳಿದರು.ಅವರು ಬನವಾಸಿ ರಸ್ತೆಯಲ್ಲಿರುವ ಕೈಗಾರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ಕೈಗಾರಿಕ ಶಿಶಿಕ್ಷು ತರಬೇತಿ ಯೋಜನೆಯ ಒಂದು ದಿನದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಸರ್ಕಾರದ ಉದ್ಯೋಗಗಳು ದುರ್ಬಲವಾಗಿರುವ ಇಂದಿನ ದಿನದಲ್ಲಿ ಖಾಸಗಿ ಉದ್ಯೋಗಗಳತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಡಿಪ್ಲೊಮಾ, ಐಟಿಐನಂತಹ ಕೌಶಲ್ಯಾಧಾರಿತ ಶಿಕ್ಷಣ ಕಲಿತರೆ ಉದ್ಯೋಗ ಸುಲಭವಾಗಿ ಪಡೆಯಬಹುದೆಂದರು.ಇಲ್ಲಿ ಕೌಶಲ್ಯಾಧಾರಿತ ಶಿಕ್ಷಣ ಪಡೆದವರು ದೇಶ-ವಿದೇಶದಲ್ಲಿ ದೊಡ್ಡ ಮೊತ್ತದ ಸಂಬಳ ಪಡೆಯುತ್ತಿದ್ದಾರೆ. ಕೌಶಲ್ಯ ತಿಳಿದವನು ತಾನೇ ಉದ್ಯೋಗ ಸೃಷ್ಟಿಸುತ್ತಾನೆ ಮತ್ತು ಇನ್ನೊಬ್ಬರಿಗೆ ಉದ್ಯೋಗ ನೀಡುವ ಮಟ್ಟಿಗೆ ಬೆಳೆಯುತ್ತಾನೆಂದು ಹೇಳಿದರು.ಜಿಲ್ಲಾ ಸಣ್ಣ ಕೈಗಾರಿಕೆ ಸಂಘಗಳ ಅಧ್ಯಕ್ಷ ಅಣ್ಣಪ್ಪ ಎಚ್. ಮಾತನಾಡಿ, ಕಾಲ ಬದಲಾಗಿದೆ. ಮಂತ್ರ-ತಂತ್ರದಿಂದ ದುಡಿಯುವ ಕಾಲ ಬದಲಾಗಿದೆ. ಇದರ ಬದಲಾಗಿ ಯಂತ್ರದಿಂದ ದುಡಿಯುವ ಕಾಲ ಬಂದಿದೆ. ಎಷ್ಟೇ ತಂತ್ರಜ್ಞಗಳು ಮುಂದುವರಿದರೂ ಮಾನವನಿಲ್ಲದೇ ಯಾವುದೂ ಅಲ್ಲಾಡುವದಿಲ್ಲ. ಆದ್ದರಿಂದ ಕೈಗಾರಿಕೆಗಳಲ್ಕಿ ಉದ್ಯೋಗ ಸೃಷ್ಟಿಯಾಗುತ್ತದೆ. ಆದರೆ ಉದ್ಯೋಗಕ್ಕೆ ತಕ್ಕಂತೆ ಉದ್ಯೋಗಿಗಳು ಸಿಗುವುದಿಲ್ಲ. ಆದರೂ ಕೂಡಾ ಕೈಗಾರಿಕೆಯ ಮಾಲಕರು ಉದ್ಯೋಗಿಯ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ನೀಡಿ ಮಾನವಿಯತೆ ಮೆರೆಯುತ್ತಾರೆ. ಉದ್ಯೋಗಿಗಳಿಗೆ ಇಂತಹ ಸೌಲಭ್ಯ ಸರ್ಕಾರದಲ್ಲೂ ಸಿಗುವುದಿಲ್ಲ ಎಂದರು.ಇದೇ ವೇಳೆ ತರಬೇತಿ ನೀಡುವ ಸಲುವಾಗಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಅಳವಡಿಸಿರುವ ಅತ್ಯಾಧುನಿಕ ಲೇಸರ್ ವೆಲ್ಡಿಂಗ್ ಮಶಿನ್ ಮತ್ತು ಆಧುನಿಕ ಟೈಯರ್ ಚೆಂಜರ್ ಯಂತ್ರಗಳ ಉದ್ಘಾಟನೆ ಹಾಗೂ ಪ್ರಾತ್ಯಕ್ಷಿಕೆ ನಡೆಸಲಾಯಿತು.ವೇದಿಕೆಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಬೆಳಗಾವಿ ವಿಭಾಗೀಯ ಕಚೇರಿಯ ಸಹಾಯಕ ನಿರ್ದೇಶಕ ಈಶ್ವರಪ್ಪ ದ್ಯಾಮನಗೌಡ, ಸಣ್ಣ ಕೈಗಾರಿಕಾ ಸಂಘದ ಮಾಜಿ ಜಿಲ್ಲಾಧ್ಯಕ್ಷ ಜಿ.ವಿ. ಜೋಶಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಿಂಹ ಶಕ್ತಿ ಒಕ್ಕೂಟದ ಸಿಇಒ ಅಶೋಕ ಹೆಗಡೆ ಉಪಸ್ಥಿತರಿದ್ದರು. ಸಣ್ಣ ಕೈಗಾರಿಕಾ ಸಂಘಗಳ ಕಾರ್ಯದರ್ಶಿ ರಮೇಶ ಹೆಗಡೆ ನಿರ್ವಹಣೆ ಮಾಡಿದರು.