ನರಸಿಂಹರಾಜಪುರ: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣ ಹೆಚ್ಚಾಗುತ್ತಿದೆ. ಬ್ಯಾಂಕಿನ ಹೆಸರು ಹೇಳಿಕೊಂಡು ಅನೇಕರಿಗೆ ವಂಚಿಸುತ್ತಿರುವುದು ಆಘಾತ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಖಾತೆ, ತಮ್ಮ ಮೊಬೈಲ್‌ಗೆ ಬರುವ ಓಟಿಪಿಗಳ ಬಗ್ಗೆ ನುರಿತ ಬ್ಯಾಂಕ್ ನೌಕರರಿಂದ ಸಾರ್ವಜನಿಕರಿಗೆ ಹೆಚ್ಚೆಚ್ಚು ಅರಿವು ಮೂಡಿಸುವುದು ಅತ್ಯಗತ್ಯ ಎಂದು ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದರು.

ಶುಕ್ರವಾರ ತಾಲೂಕಿನ ಅಳೇಹಳ್ಳಿ ಗ್ರಾಮದಲ್ಲಿ ನಡೆದ ಸಾಕ್ಷರತಾ ಪ್ರಚಾರದಲ್ಲಿ ಮಾತನಾಡಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ಕೆಲ ಜನರಿಗೆ ಕೂಡ ಜ್ಞಾನವಿಲ್ಲ. ಅಂತಹವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಮಾಹಿತಿ ಅವಶ್ಯಕತೆ ಇದೆ ಎಂದರು.ಆರ್ಥಿಕ ಸಾಕ್ಷರತಾ ಪ್ರಸಾರಕಿ ಎಂ.ಪಿ.ಸುನೀತಾ ಮಾತನಾಡಿ, ತಂತ್ರಜ್ಞಾನ ಮುಂದುವರಿಯುತ್ತಿರುವ ಈ ಕಾಲಘಟ್ಟದಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಕೆವೈಸಿ, ಸಿಕೆವೈಸಿ, ನಾಮನಿರ್ದೇಶನ ಅಂಶಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು. ಕರ್ನಾಟಕ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಸುದರ್ಶನ್ ಮಾತನಾಡಿ, ಬ್ಯಾಂಕಿನ ಖಾತೆಗಳು ಹಾಗೂ ಶಿಕ್ಷಣ, ಸಾಲ ಸೌಲಭ್ಯ ಗಳ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕ್ ಸಿಬ್ಬಂದಿ ಆದರ್ಶ್, ಬ್ಯಾಂಕಿನಲ್ಲಿ ಇರುವ ವಿಮೆಗಳಾದ ಪಿ ಎಂ ಎಸ್ ಬಿ ವೈ, ಪಿ ಎಂ ಜೆ ಜೆ ಬಿ ವೈ ಹಾಗೂ ಎ ಪಿ ವೈ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಲೋಚನಾ, ಒಕ್ಕೂಟದ ಮೇಲ್ವಿಚಾರಕ ಚೇತನ್, ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್, ರಾಜೇಶ್, ಪೋಲಿಸ್ ಇಲಾಖೆಯ ಚಂದ್ರಶೇಖರ್, ಸ್ವಸಹಾಯ ಸಂಘದ ಸದಸ್ಯರು ಹಾಗೂ ಕೃಷಿಕರು ಭಾಗವಹಿಸಿದ್ದರು.