ಸಾರಾಂಶ
ಬಳ್ಳಾರಿ: ಇಂದಿನ ವಿದ್ಯಾರ್ಥಿಗಳಿಗೆ ಪಠ್ಯದ ಕಲಿಕೆಯ ಜೊತೆಗೆ ಬಹು ಕೌಶಲ್ಯ ಕಲಿಸುವ ಅಗತ್ಯವಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ.ಶರಣ ಪ್ರಕಾಶ ಆರ್.ಪಾಟೀಲ ಹೇಳಿದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಇಂಕ್ಯುಬೇಷನ್ ಹಾಗೂ ಜಾಬ್ ಪೋರ್ಟಲ್ ಅನ್ನು ಬುಧವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಡಿಗ್ರಿಗಳು ಸಾಲುತ್ತಿಲ್ಲ. ಪಠ್ಯದ ಜೊತೆಯಲ್ಲಿ ಕೌಶಲ್ಯ, ಜ್ಞಾನ, ಸಂವಹನ ಮತ್ತು ಸಾಮಾನ್ಯ ಜ್ಞಾನವೂ ಪ್ರತಿಯೊಬ್ಬರಿಗೆ ಅಗತ್ಯ. ಈ ನಿಟ್ಟಿನಲ್ಲಿ ಎಐಸಿಟಿಸಿಯ ಜೊತೆಯಲ್ಲಿ ಸರ್ಕಾರ `ಕಲಿಕೆಯ ಜೊತೆಯಲ್ಲಿ ಕೌಶಲ್ಯಕ್ಕೆ ಆದ್ಯತೆ ನೀಡುವ ಪಠ್ಯವನ್ನು ರಚಿಸಲು ಕೋರಿದೆ ಎಂದರು.ಇದು ಆವಿಷ್ಕಾರಗಳ ಯುಗ. ಹೊಸ ಆವಿಷ್ಕಾರಗಳಿಗೆ- ಹೊಸ ತಂತ್ರಜ್ಞಾನಗಳಿಗೆ ಪ್ರತಿಯೊಂದು ಕ್ಷೇತ್ರ, ಪ್ರತಿಯೊಬ್ಬರೂ ಕೌಶಲ್ಯವಂತರಾಗಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಉದ್ಯೋಗಮೇಳಗಳಲ್ಲಿ ನೋಂದಣಿ ಆಗುವವರಿಗೆ ಅಗತ್ಯವಿರುವ ಕೌಶಲ್ಯ, ಸಂವಹನ, ಜ್ಞಾನ ಇನ್ನಿತರೆಗಳ ಜೊತೆಯಲ್ಲಿ ಎಐ-ಮೆಷಿನ್ ಲರ್ನಿಂಗ್ ತಂತ್ರಜ್ಞಾನದ ಬಳಕೆಯ ಜ್ಞಾನವನ್ನು ನೀಡಲಾಗುತ್ತಿದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಾಬ್ ಪೋರ್ಟಲ್ ಉದ್ಘಾಟಿಸಿದ ಎಫ್‌ಕೆಸಿಸಿಐನ ಅಧ್ಯಕ್ಷ ಉಮಾರೆಡ್ಡಿ ಮಾತನಾಡಿ, ಸ್ಕಿಲ್ ಡೆವಲಪ್ ಮೆಂಟ್ ಮತ್ತು ಇಂಕ್ಯುಬೇಷನ್ ಸೆಂಟರ್ ಆಧುನಿಕ ಡಿಟಿಟಲ್ ತಂತ್ರಜ್ಞಾನವನ್ನು ಹೊಂದಿದ್ದು, ಉದ್ಯಮಶೀಲತೆಯ ಕೇಂದ್ರವಾಗಿದೆ. ಎಫ್‌ಕೆಸಿಸಿಐ ಬಿಡಿಸಿಸಿಐ ಜೊತೆ ಸ್ಟಾರ್ಟ್ಅಪ್ ಮಾರ್ಗದರ್ಶನ, ತರಬೇತಿ ಮತ್ತು ಹೂಡಿಕೆಯ ಸಂಪರ್ಕ ನೀಡಲಿದೆ. ಬಿಡಿಸಿಸಿಐ ಹೊಸ ಅವಕಾಶಗಳನ್ನು ನೀಡಲಿ, ಕರ್ನಾಟಕದ ಪ್ರಗತಿಗೆ ಕೈಜೋಡಿಸಲಿ ಎಂದು ಹಾರೈಸಿದರು.ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಇಂಕ್ಯುಬೇಷನ್ ಸೆಂಟರ್ ಯುವಶಕ್ತಿಗೆ - ನವ ಉದ್ಯಮಿಗಳಿಗೆ ಆಶಾಕಿರಣವಾಗಿ ಸೇವೆ ಸಲ್ಲಿಸುವ ಜವಾಬ್ದಾರಿಗಳನ್ನು ನಿರ್ವಹಿಸಲಿದೆ. ಇಂಕ್ಯುಬೇಷನ್ ಸೆಂಟರ್ ಮುಂಬೈನ ವಿಕಸಿತ ಮ್ಯಾನೇಜ್ ಮೆಂಟ್ ಕನ್ಸಲ್ಟೆನ್ಸಿ ಪ್ರೈ ಲಿಮಿಟೆಡ್ ಮತ್ತು ಲಾರ್ವನ್ ಹೋಲ್ಡಿಂಗ್ ಜೊತೆಯ ಒಪ್ಪಂದ ಮಾಡಿಕೊಂಡಿದ್ದು, ಉದ್ಯಮಿಗಳಿಗೆ ಬಂಡವಾಳ ಮತ್ತು ಜ್ಞಾನದ ಮಾರ್ಗದರ್ಶನ ನೀಡಲಿದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಮರ್ಚೆಡ್ ಮಲ್ಲಿಕಾರ್ಜುನಗೌಡ ಅವರು, ಜಾಬ್ ಪೋರ್ಟಲ್ ಕುರಿತು ಸಮಗ್ರ ಮಾಹಿತಿ ನೀಡಿದರಲ್ಲದೆ, ಉದ್ಯಮಿಗಳು ಮತ್ತು ಉದ್ಯೋಗಾಸಕ್ತರು ಈ ಪೋರ್ಟಲ್ ನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಮೇಯರ್ ಮುಲ್ಲಂಗಿ ನಂದೀಶ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.