ವ್ಯಕ್ತಿತ್ವದ ವಿಕಾಸಕ್ಕೆ ಕೌಶಲ್ಯ ಅಗತ್ಯ: ಶಂಭುಲಿಂಗ ನಡುವಿನಮನಿ

| Published : Feb 08 2025, 12:32 AM IST

ಸಾರಾಂಶ

ನಮ್ಮೊಳಗಿನ ನಾಯಕತ್ವದ ಗುಣದಿಂದ ಸಮಾಜಕ್ಕೆ ಸಾರ್ಥಕ ಕೊಡುಗೆ ನೀಡಲು ಸಾಧ್ಯ. ನಾವು ಬೆಳೆಯುವ ಜತೆಗೆ ನಮ್ಮವರನ್ನೂ ಬೆಳೆಸಿದಾಗ ಸಾಮಾಜಿಕ ಪರಿಕಲ್ಪನೆಗೆ ಒಂದು ಅರ್ಥ ಬಂದೀತು.

ಯಲ್ಲಾಪುರ: ಉತ್ತಮ ಮಾನವ ಸಂಪನ್ಮೂಲ ಸೃಜಿಸಲು ಉತ್ತಮ ಕೌಶಲ್ಯದ ಅಗತ್ಯವಿದೆ ಎಂದು ಶಿಕ್ಷಣ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಮಧ್ಯ ಕರ್ನಾಟಕ ಮೇಲ್ವಿಚಾರಕ ಶಂಭುಲಿಂಗ ನಡುವಿನಮನಿ ಅಭಿಪ್ರಾಯಪಟ್ಟರು.

ಶಿಕ್ಷಣ ಫೌಂಡೇಶನ್ ಸಂಸ್ಥೆ ಮತ್ತು ಜಿಪಂ ಸಹಯೋಗದಲ್ಲಿ ಯಲ್ಲಾಪುರದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ನಾಯಕತ್ವ ಮತ್ತು ಕೌಶಲ್ಯ ಅಭಿವೃದ್ಧಿ ಕುರಿತು ಮಾತನಾಡಿದರು.

ನಮ್ಮೊಳಗಿನ ನಾಯಕತ್ವದ ಗುಣದಿಂದ ಸಮಾಜಕ್ಕೆ ಸಾರ್ಥಕ ಕೊಡುಗೆ ನೀಡಲು ಸಾಧ್ಯ. ನಾವು ಬೆಳೆಯುವ ಜತೆಗೆ ನಮ್ಮವರನ್ನೂ ಬೆಳೆಸಿದಾಗ ಸಾಮಾಜಿಕ ಪರಿಕಲ್ಪನೆಗೆ ಒಂದು ಅರ್ಥ ಬಂದೀತು ಎಂದರು.

ಜಿಲ್ಲಾ ಸಂಯೋಜಕ ಪ್ರಕಾಶ ಹಾಲಪ್ಪನವರ್ ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಕಾರ್ಯಕ್ಷಮತೆ ಇದ್ದರೆ ಅದು ಹೆಚ್ಚು ಪರಿಣಾಮಕಾರಿ ಆಗಬಲ್ಲದು. ಒತ್ತಡದಿಂದ ಕೆಲಸ ನಿರ್ವಹಿಸಬಾರದು. ತರಬೇತಿಯಿಂದ ಬೌದ್ಧಿಕ ಜ್ಞಾನ ಪಡೆದರೆ ನಮ್ಮಲ್ಲಿರುವ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಸಹಾಯಕವಾಗಬಲ್ಲದು ಎಂದರು.

ತರಬೇತಿಯಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಎಐ ತರಬೇತುದಾರ ಶಿವಯ್ಯ ಗೊಡಮನಿ ಮಾಹಿತಿ ನೀಡಿದರು. ಶಿಕ್ಷಣ ಫೌಂಡೇಶನ್ ಡಿಜಿ ವಿಕಸನದ, ಜಿಲ್ಲಾ ಸಂಯೋಜಕ ಈಶ್ವರ ಬರಿಗಲ್, ಯಲ್ಲಪ್ಪ ಉಪಸ್ಥಿತರಿದ್ದರು.ಹಸು ಮೇಲೆ ಅಪರಿಚಿತರಿಂದ ಹಲ್ಲೆ

ಯಲ್ಲಾಪುರ: ತಾಲೂಕಿನ ಮಂಚಿಕೇರಿ ಹತ್ತಿರದ ದೇವರ ಕಲ್ಲಳ್ಳಿಯಲ್ಲಿ ಹಸುವಿನ ಮೇಲೆ ಗುರುವಾರ ಅಪರಿಚಿತರು ಯಾವುದೋ ಆಯುಧದಿಂದ ಹಲ್ಲೆ ನಡೆಸಿದ್ದಾರೆ.ಪರಮೇಶ್ವರ್ ಹೆಗಡೆ ಎಂಬವರ ಮನೆಯ ಗೀರ್ ತಳಿಯ ಹಸುವಿನ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದು, ಉಮ್ಮಚಗಿಯ ಪಶು ವೈದ್ಯ ರಾಜೇಶ್ ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದಾರೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಹೊನ್ನಾವರ: ತಾಲೂಕಿನ ಗೇರುಸೊಪ್ಪಾದ ಸೂಳೆಮುರ್ಕಿ ಕ್ರಾಸ್ ಬಳಿ ಶುಕ್ರವಾರ ಅಪಘಾತದಲ್ಲಿ ಶಿಲೆಕಲ್ಲು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಧರೆಗೆ ಗುದ್ದಿ ಪಲ್ಟಿಯಾಗಿದೆ.ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದೆ. ಶಿಲೆಕಲ್ಲು ತುಂಬಿದ ಲಾರಿ ಶಿವಮೊಗ್ಗದಿಂದ ಬಂದಿದ್ದು, ಮುರ್ಡೆಶ್ವರದ ದೇವಾಲಯಕ್ಕೆ ಹೋಗುತ್ತಿತ್ತು ಎನ್ನಲಾಗಿದೆ. ಚಾಲಕ ಹಾಗೂ ಕ್ಲೀನರ್‌ನನ್ನು ಚಿಕಿತ್ಸೆಗೆ ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.