ಆಟ, ಓದಿನ ಜತೆಜತೆ ಮಕ್ಕಳಿಗೆ ಕೌಶಲ್ಯ ತರಬೇತಿ

| Published : May 19 2025, 12:15 AM IST

ಆಟ, ಓದಿನ ಜತೆಜತೆ ಮಕ್ಕಳಿಗೆ ಕೌಶಲ್ಯ ತರಬೇತಿ
Share this Article
  • FB
  • TW
  • Linkdin
  • Email

ಸಾರಾಂಶ

ಅರಿವು ಕೇಂದ್ರದಲ್ಲಿರುವ ಗ್ರಂಥಾಲಯದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಬಗೆ ಬಗೆಯ ಪುಸ್ತಕಗಳು ಓದುಗರಿಗೆ ಕೈಬೀಸಿ ಕರಿಯುತ್ತಿವೆ.

ಕನ್ನಡಪ್ರಭ ವಾರ್ತೆ, ಬೀದರ್‌

ತಾಲೂಕಿನ ಅಲಿಯಾಬಾದ್‌ ಗ್ರಾಮ ಪಂಚಾಯತ್‌ ವತಿಯಿಂದ ನಿರ್ಮಿಸಿದ ಅರಿವು ಕೇಂದ್ರವು ಇಲ್ಲಿನ ಮಕ್ಕಳಿಗೆ ಆಟದ ಜೊತೆಗೆ ಓದು, ಓದಿನ ಜೊತೆಗೆ ಕೌಶಲ್ಯ ತರಬೇತಿಯ ತಾಣವಾಗಿದ್ದು ರಜಾ ಮಜಾದಲ್ಲಿರುವ ಮಕ್ಕಳು ಇತ್ತ ಧಾವಿಸುವಂಥ ವಾತಾವರಣ ಸೃಷ್ಟಿಯಾಗಿದೆ. ಅರಿವು ಕೇಂದ್ರದಲ್ಲಿರುವ ಗ್ರಂಥಾಲಯದಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಬಗೆ ಬಗೆಯ ಪುಸ್ತಕಗಳು ಓದುಗರಿಗೆ ಕೈಬೀಸಿ ಕರಿಯುತ್ತಿವೆ. ಇನ್ನು ಈ ಅರಿವು ಕೇಂದ್ರದಲ್ಲಿ ಕಂಪ್ಯೂಟರ್‌, ಪೇಂಟಿಂಗ್‌ ತರಬೇತಿ ಸಹ ನೀಡಲಾಗುತ್ತದೆ. ಓದು, ಕಂಪ್ಯೂಟರ್‌, ಪೇಟಿಂಗ್ ಸಾಕಾಯ್ತು ಎಂದಾಗ ದೇಸಿ ಆಟಗಳ ಝಲಕ್‌ ಸಹ ಇಲ್ಲಿ ನೋಡಲು ಸಿಗುತ್ತದೆ.ಅರಿವು ಕೇಂದ್ರದಿಂದ ಬೇಸಿಗೆಯಲ್ಲಿ ಬಡವರ, ರೈತರ, ನರೇಗಾ ಕೂಲಿಕಾರ್ಮಿಕರ ಮಕ್ಕಳಿಗಾಗಿ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಆಟ, ಪಾಠದ ಜೊತೆಗೆ ತಂತ್ರಜ್ಞಾನ ತರಬೇತಿ ಹಾಗೂ ನಮ್ಮ ಇತಿಹಾಸ ಪರಂಪರೆ ಹೇಳುವ ಐತಿಹಾಸಿಕ ತಾಣಗಳನ್ನು ತೋರಿಸುವ ಮೂಲಕ ಮಣ್ಣಿನ ಇತಿಹಾಸ ತಿಳಿಸಲಾಗುತ್ತಿದೆ.ಇದಕ್ಕೆ ಸ್ಪಷ್ಟವಾಗಿ ಹೇಳಬೇಕಾದರೆ ಇತ್ತೀಚಿಗೆ ಬೀದರ್‌ ಕೋಟೆ, ಐತಿಹಾಸಿಕ ಕರೇಜ್‌, ಪಾಪನಾಶ ಕೆರೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಭೋಜನ ಕೂಡ ಸವಿಯಲಾಗಿದೆ ಎಂದು ಅಲಿಯಾಬಾದ್‌ ಪಿಡಿಒ ಶರತಕುಮಾರ್‌ ಅಭಿಮಾನ ‘ಕನ್ನಡಪ್ರಭ’ಕ್ಕೆ ಮಾತನಾಡಿ ತಿಳಿಸಿದ್ದಾರೆ.ಅರಿವು ಕೇಂದ್ರದ ಸಿಬ್ಬಂದಿ ಕೂಡ ನಿತ್ಯ ಸಾಕಷ್ಟು ಮಕ್ಕಳು ಇಲ್ಲಿಗೆ ಓದಲು ಬರುತ್ತಾರೆ ಅವರನ್ನು ನೋಡುವುದೇ ನಮಗೆ ಖುಷಿ ಕೆಲವೊಂದು ಬಾರಿ ರಜೆ ಇದ್ದಾಗಲೂ ಗ್ರಾಮದ ಮಕ್ಳಳು ಅರಿವು ಕೇಂದ್ರಕ್ಕೆ ಬಂದು ಓದುವ ಆಸಕ್ತಿ ತೋರಿಸುತ್ತಾರೆ ಎಂದು ಹೇಳುತ್ತಾರೆ.

---

ಕೋಟ್: 1

15ನೇ ಹಣಕಾಸು ಯೋಜನೆಯ ಆರ್‌ಡಿಪಿಆರ್‌ನ ಓದುವ ಬೆಳಕು ಯೋಜನೆ ಅಡಿ ಈ ಅರಿವು ಕೇಂದ್ರ ಸ್ಥಾಪಿಸಲಾಗಿದ್ದು, ಗ್ರಾಮೀಣ ಭಾಗದ ಮಕ್ಳಳ ಸರ್ವಾಂಗೀಣ ಅಭಿವೃದ್ಧಿಯ ಧ್ಯೇಯದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ.

- ಡಾ. ಗಿರೀಶ ಬದೋಲೆ, ಜಿಲ್ಲಾ ಪಂಚಾಯತ್‌ ಸಿಇಓ, ಬೀದರ್‌

--

ಕೋಟ್‌:2

ಅರಿವು ಕೇಂದ್ರದಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಈ ಅರಿವು ಕೇಂದ್ರದಿಂದ ಸಿರಿವಂತರ ಮಕ್ಕಳಿಗೆ ಬೇಸಿಗೆ ತರಬೇತಿ ಶಿಬಿರದಲ್ಲಿ ಸಿಗುವ ಎಲ್ಲ ಸೌಲಭ್ಯವು ನಮ್ಮ ಬಡ ಮಕ್ಕಳಿಗೂ ಸಿಗಬೇಕು ಎನ್ನುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್‌ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆ ಅವರ ನಿರ್ದೇಶನದ ಮೇರೆಗೆ ಬೇಸಿಗೆ ಶಿಬಿರ ಆಯೋಜನೆ ಮಾಡಿದ್ದೇವೆ.

-ಶರತಕುಮಾರ್‌ ಅಭಿಮಾನ, ಅಲಿಯಾಬಾದ್ ಪಿಡಿಒ