ದೀಪಾವಳಿ ಹಬ್ಬದ ಸಡಗರ ಹೆಚ್ಚಿಸುವ ಆಕಾಶ ಬುಟ್ಟಿಗಳು

| Published : Oct 20 2025, 01:04 AM IST

ದೀಪಾವಳಿ ಹಬ್ಬದ ಸಡಗರ ಹೆಚ್ಚಿಸುವ ಆಕಾಶ ಬುಟ್ಟಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಆಕಾಶ ಬುಟ್ಟಿಗಳು ₹100ಗಳಿಂದ ಆರಂಭವಾಗಿ ₹2 ಸಾವಿರಕ್ಕೂ ಹೆಚ್ಚು ಬೆಲೆಯಲ್ಲಿ ದೊರೆಯುತ್ತಿವೆ. ಹಬ್ಬ ಮುಗಿದ ನಂತರ ಈಗ ಆಕಾಶ ಬುಟ್ಟಿಗಳನ್ನು ಮಡಚಿ ಇಟ್ಟು ಮುಂದಿನ ವರ್ಷಕ್ಕೆ ಮತ್ತೆ ತೂಗು ಹಾಕುವ ಅವಕಾಶಗಳು ಇರುವುದು ಮತ್ತೊಂದು ಹೆಗ್ಗಳಿಕೆ ಕೂಡಾ ಹೌದು.

ಲಕ್ಷ್ಮೇಶ್ವರ: ಬೆಳಕಿನ ಹಬ್ಬ ನಾಡಿನ ಬಹುತೇಕರು ಆಚರಿಸುವ ಹಬ್ಬವಾಗಿದೆ. ಮುಂಗಾರು ಬೆಳೆಗಳು ಕೊಯ್ಲಿ ಮುಕ್ತಾಯಗೊಂಡು ಹಿಂಗಾರು ಹಂಗಾಮಿಗೆ ಕಾಲಿಡುವ ಹೊಸ್ತಿಲಲ್ಲಿ ಬರುವ ದೀಪಾವಳಿ ಹಬ್ಬವು ರೈತರು ಹಾಗೂ ವ್ಯಾಪಾರಸ್ತರಿಗೆ ಮಹತ್ತರ ಹಬ್ಬವಾಗಿದೆ. ದೀಪಾವಳಿ ಹಬ್ಬದ ಸಡಗರ ಸಂಭ್ರಮ ಹೆಚ್ಚಿಸುವಲ್ಲಿ ಆಕಾಶ ಬುಟ್ಟಿಗಳು ಪಾತ್ರ ಪ್ರಮುಖವಾಗಿವೆ. ಹಿಂದೂಗಳು ಬೆಳಕಿನ ಹಬ್ಬಕ್ಕೆ ಮನೆಯ ಮುಂದೆ ಹಾಕುವ ಆಕಾಶ ಬುಟ್ಟಿಗಳು ಚಿಣ್ಣರ ಪಾಲಿಗೆ ಕೌತುಕದ ಪುಂಜಗಳಾಗಿವೆ.

ಕಳೆದ 2- 3 ದಶಕಗಳ ಹಿಂದೆ ಆಕಾಶ ಬುಟ್ಟಿಗಳನ್ನು ಬಿದಿರಿನ ಸಣ್ಣ ಎಸಳುಗಳನ್ನು ತಂದು ಅವುಗಳನ್ನು ಜೋಡಿಸಿ ಚೌಕಾಕಾರದ ಬುಟ್ಟಿ ತಯಾರಿಸಿ ಅವುಗಳಿಗೆ ಬಣ್ಣದ ಹಾಳೆಗಳನ್ನು ಅಂಟಿಸಿ ಆಕಾಶ ಬುಟ್ಟಿ ಮನೆಯಲ್ಲಿ ತಯಾರಿಸುತ್ತಿದ್ದರು. ಆಕಾಶ ಬುಟ್ಟಿಯಲ್ಲಿ ಸಣ್ಣ ದೀಪ ಇಟ್ಟು ದೀಪಾವಳಿ ಹಬ್ಬದಿಂದ ಆರಂಭವಾಗುವ ಬೆಳಕಿನ ಹಬ್ಬದ ಸಡಗರ ಕಾರ್ತಿಕ ಮಾಸದವರಗೆ ಸಾಗುತ್ತಿತ್ತು.

ಆದರೆ ಈಗ ಆಧುನಿಕತೆಯ ಹೊಡೆತಕ್ಕೆ ಸಿಕ್ಕಿ ಕ್ರಿಯಾಶೀಲತೆ ಮಾಯವಾಗಿ ಖಾರ್ಕಾನೆಯಲ್ಲಿ ತಯಾರಾಗಿಸುವ ಆಕಾಶ ಬುಟ್ಟಿ ತಂದು ಜೋತು ಬಿಟ್ಟು ಅದರಲ್ಲೊಂದು ದೀಪ ಹಚ್ಚಿ ಬೆಳಕಿನ ಹಬ್ಬ ಆಚರಿಸುವ ಪರಿಪಾಟ ಆರಂಭವಾಗಿದೆ.

ಈಗ ಮಾರುಕಟ್ಟೆಯಲ್ಲಿ ತಹರೇವಾರಿ ಆಕಾಶ ಬುಟ್ಟಿಗಳು ನೋಡುಗರ ಕಣ್ಣು ಕುಕ್ಕುವಂತೆ ಮಾಡುತ್ತಿರುವುದು ಸೋಜಿಗದ ಸಂಗತಿಯಾಗಿದೆ. ಆಕಾಶ ಬುಟ್ಟಿಗಳು ₹100ಗಳಿಂದ ಆರಂಭವಾಗಿ ₹2 ಸಾವಿರಕ್ಕೂ ಹೆಚ್ಚು ಬೆಲೆಯಲ್ಲಿ ದೊರೆಯುತ್ತಿವೆ. ಹಬ್ಬ ಮುಗಿದ ನಂತರ ಈಗ ಆಕಾಶ ಬುಟ್ಟಿಗಳನ್ನು ಮಡಚಿ ಇಟ್ಟು ಮುಂದಿನ ವರ್ಷಕ್ಕೆ ಮತ್ತೆ ತೂಗು ಹಾಕುವ ಅವಕಾಶಗಳು ಇರುವುದು ಮತ್ತೊಂದು ಹೆಗ್ಗಳಿಕೆ ಕೂಡಾ ಹೌದು.

ಆಕಾಶ ಬುಟ್ಟಿಗಳ ವಿವಿಧ ಬಣ್ಣ, ಆಕಾರಗಳಿಂದ ಸಾರ್ವಜನಿಕರ ಮನಸ್ಸನ್ನು ಗೆಲ್ಲುವ ಕಾರ್ಯ ಮಾಡುತ್ತಿವೆ ಎಂದರೆ ತಪ್ಪಾಗಲಾರದು.

ಕುಂಬಾರರ ಉದ್ಯೋಗಕ್ಕೆ ಕುತ್ತು ತರುತ್ತಿರುವ ರೆಡಿಮೇಡ್ ಹಣತೆಗಳು - ದೀಪಾವಳಿ ಹಬ್ಬ ಆರಂಭದ ಕಾಲದಿಂದ ಕುಂಬಾರರು ತಯಾರು ಮಾಡಿದ ಮಣ್ಣಿನ ದೀಪಗಳನ್ನು ಮನೆಯ ಮುಂದೆ ಸಾಲಾಗಿ ಜೋಡಿಸಿ ಎಣ್ಣೆ ಬತ್ತಿ ಹಾಕಿ ದೀಪ ಹಚ್ಚಿ ಸಂಭ್ರಮಿಸುವ ಬೆಳಕಿನ ಹಬ್ಬವು ಈಗ ಕಣ್ಮರೆಯಾಗಿ ಕುಂಬಾರರು ಮಣ್ಣಿನ ಹಣತೆ ತಯಾರಿಸುವ ಕಾರ್ಯ ಬಿಟ್ಟು ರೆಡಿಮೇಡ್ ದೀಪದ ಹಣತೆ ತಂದು ಮಾರಾಟ ಮಾಡುವ ಕಾರ್ಯ ಮಾಡುತ್ತಿರುವುದು ಆಧುನಿಕತಯೆ ಹೊಡೆತಕ್ಕೆ ಸಿಲುಕಿ ಅವಸಾನದತ್ತ ಸಾಗುತ್ತಿರುವುದು ನೋವಿನ ಸಂಗತಿಯಾದರೂ ಆಧುನಿಕತೆಯನ್ನು ಒಪ್ಪಿ ಮುಂದೆ ಸಾಗುವ ಅನಿವಾರ್ಯತೆ ನಮ್ಮ ಮುಂದೆ ಇದೆ.