ಧರ್ಮಸ್ಥಳ ವಿರುದ್ಧ ಅಪಪ್ರಚಾರ: ನಾಳೆ ಪ್ರತಿಭಟನೆ

| Published : Aug 12 2025, 12:30 AM IST

ಸಾರಾಂಶ

ರಾಮನಗರ: ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ದುಷ್ಟರ ಕೂಟ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಇದನ್ನು ಖಂಡಿಸಿ ಆಗಸ್ಟ್ 13ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಧರ್ಮಸ್ಥಳ ಭಕ್ತಾಭಿಮಾನ ವೇದಿಕೆ ಸದಸ್ಯ ಹಾಗೂ ಬಮೂಲ್ ನಿರ್ದೇಶಕ ಹರೀಶ್‌ಕುಮಾರ್ ತಿಳಿಸಿದರು.

ರಾಮನಗರ: ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ದುಷ್ಟರ ಕೂಟ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಇದನ್ನು ಖಂಡಿಸಿ ಆಗಸ್ಟ್ 13ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಧರ್ಮಸ್ಥಳ ಭಕ್ತಾಭಿಮಾನ ವೇದಿಕೆ ಸದಸ್ಯ ಹಾಗೂ ಬಮೂಲ್ ನಿರ್ದೇಶಕ ಹರೀಶ್‌ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಗರದ ಜೂನಿಯರ್ ಕಾಲೇಜು ಮೈದಾನದಿಂದ ಪ್ರಾರಂಭವಾಗುವ ಪ್ರತಿಭಟನಾ ಮೆರವಣಿಗೆ ಬೆಂಗಳೂರು -ಮೈಸೂರು ಹಳೆ ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಯಲಿದೆ. ಆನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯವನ್ನು ಗುರಿಯಾಗಿಸಿಕೊಂಡು ಯಾವುದೇ ದಾಖಲೆಯಿಲ್ಲದೆ ನಿರಂತರವಾಗಿ ಸುಳ್ಳು ಸುದ್ಧಿಗಳನ್ನು ಹರಡಿಸುವುದರಿಂದ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಜೊತೆಗೆ ಸಮಾಜದಲ್ಲಿ ಉದ್ವಿಗ್ನತೆ ಮತ್ತು ಶಾಂತಿಭಂಗಕ್ಕೆ ಕಾರಣವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಸಹ ಶ್ರೀ ಕ್ಷೇತ್ರದ ಪರಮ ಭಕ್ತನಾಗಿದ್ದು ಕೆಲವರು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಮುಸುಕುದಾರಿ ವ್ಯಕ್ತಿಯ ದೂರಿನ ಆಧಾರದ ಮೇಲೆ ಪೊಲೀಸರು ಸ್ಥಳ ಪರಿಶೀಲನೆ ಸೋಗಿನಲ್ಲಿ ಸಮಯ ವ್ಯರ್ಥವಾಗುತ್ತಿದೆ. ಅಲ್ಲದೆ ಸರ್ಕಾರದ ಹಣ ಸಹ ಪೋಲು ಮಾಡುತ್ತಿದ್ದಾರೆ. ಇದೀಗ ಬಾಹುಬಲಿ ಬೆಟ್ಟದ ಸ್ಥಳವನ್ನು ಗುರುತಿಸುವ ಮೂಲಕ ದಿನಕ್ಕೊಂದು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಟೀಕಿಸಿದರು.

ಅಪಪ್ರಚಾರ ಮಾಡುತ್ತಿರುವವರ ಹಿನ್ನೆಲೆ, ಅವರಿಗೆ ಹಣಕಾಸಿನ ನೆರವು ನೀಡುತ್ತಿರುವವರು ಯಾರು ಎಂಬುದನ್ನು ತನಿಖೆ ಮಾಡಬೇಕಿದೆ. ಅಲ್ಲದೆ, ಮುಸುಕುದಾರಿ ವ್ಯಕ್ತಿಯನ್ನು ಮಂಪರು ಪರೀಕ್ಷೆಗೆ ಒಳ ಪಡಿಸಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಪೋಲೀಸ್ ಠಾಣೆಯಲ್ಲಿ ಅನಾಮದೇಯ ಹೆಣವನ್ನು ಹೂಳಿರುವ ಸಂಖ್ಯೆ ಇರುತ್ತದೆ. ಮುಸುಕು ದಾರಿ ಸ್ಥಳ ತೋರಿ ಹೀರೋ ಆಗಲು ಹೊರಟಿದ್ದಾರೆ ಎಂದು ಹರೀಶ್ ಕುಮಾರ್ ಕಿಡಿಕಾರಿದರು.

ಕೆಎಂಎಪ್ ಮಾಜಿ ಅಧ್ಯಕ್ಷ ಪಿ.ನಾಗರಾಜು ಮಾತನಾಡಿ, ಮುಸುಕುದಾರಿ ವ್ಯಕ್ತಿಯೊಬ್ಬ ದಿನಕ್ಕೊಂದು ಸ್ಥಳ ತೋರಿಸುತ್ತಿದ್ದಾನೆ. ಈ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಷ್ಟೆ ಅಲ್ಲದೆ ಭಕ್ತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮಹೇಶ್‌ಶೆಟ್ಟಿ, ಜಯಂತ್.ಟಿ, ಅಂಜಯ್ ಅಂಚನ್ ಅವರುಗಳನ್ನು ವಿಚಾರಣೆಗೆ ಒಳಪಡಿಸಿ, ಮತ್ತೊಂದು ವಿಶೇಷ ತನಿಖಾ ತಂಡ ರಚಿಸಿ ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಸಮಾಜ ಸೇವಕ ಚನ್ನಪಟ್ಟಣದ ರವಿಕುಮಾರ್‌ಗೌಡ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ರಕ್ಷಣೆಗೆ ಭಕ್ತರಾದ ನಾವು ಸಿದ್ದರಿದ್ದೇವೆ. ಅನಾಮಿಕ ವ್ಯಕ್ತಿಯನ್ನು ಕೂಡಲೇ ಮಂಪರು ಪರೀಕ್ಷೆ ಮಾಡಿಸಿ ಆತನ ವಿರುದ್ದ ಕ್ರಮ ವಹಿಸಬೇಕು.ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿ ಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ಧಿಗೋಷ್ಠಿಯಲ್ಲಿ ಬಿಡದಿ ಚಿಕ್ಕಣ್ಣಯ್ಯ, ಲ್ಯಾಬ್‌ ಚಂದ್ರು, ಡಿ.ಕೆ.ಶಿವಕುಮಾರ್, ಪಾಂಡು, ಪ್ರಕಾಶ್, ಮೆಳೆಹಳ್ಳಿ ರವಿ, ಬಿಡದಿ ಮಂಜುನಾಥ್ , ಅರ್ಕೇಶ್ , ಡೇರಿ ವೆಂಕಟೇಶ್, ನಂದೀಶ್ ಮತ್ತಿತರರಿದ್ದರು.

11ಕೆಆರ್ ಎಂಎನ್ 1.ಜೆಪಿಜಿ

ಶ್ರೀ ಧರ್ಮಸ್ಥಳ ಭಕ್ತಾಭಿಮಾನ ವೇದಿಕೆ ಸದಸ್ಯ ಹಾಗೂ ಬಮೂಲ್ ನಿರ್ದೇಶಕ ಹರೀಶ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.