ಸಾರಾಂಶ
ಮಂತ್ರಾಲಯದಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮುಂಭಾಗದಲ್ಲಿದ್ದ ಭಕ್ತರನ್ನು ಶ್ರೀಗಳು ಒಳಗಡೆ ಕರೆಸಿಕೊಂಡು ರಾಯರ ಮಡಿಲಲ್ಲಿ ಮಲಗಲು ಅವಕಾಶ ಮಾಡಿಕೊಟ್ಟರು.
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಮಂತ್ರಾಲಯದಲ್ಲಿ ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬಯಲಲ್ಲೇ ಮಲಗಿದ್ದ ಶ್ರೀಗುರುರಾಯರ ಭಕ್ತರು ಪರದಾಡಿದ್ದು, ಇದನ್ನು ಗಮನಿಸಿದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ವಿಶೇಷ ವ್ಯವಸ್ಥೆಯನ್ನು ಮಾಡಿ ಆಶ್ರಯ ಕಲ್ಪಿಸಿಕೊಟ್ಟಿದ್ದಾರೆ.
ಸುಕ್ಷೇತ್ರದಲ್ಲಿ ಕಲಿಯುಗದ ಕಲ್ಪತರು, ಯತಿಕುಲ ತಿಲಕ ಶ್ರೀರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವವು ಅದ್ದೂರಿಯಾಗಿ ನಡೆಯುತ್ತಿದೆ. ದೂರದ ಊರುಗಳಿಂದ ಆಗಮಿಸಿರುವ ಭಕ್ತರು ಕುಟುಂಬ ಸದಸ್ಯರೊಂದಿಗೆ ಶ್ರೀಮಠದ ಮುಂಭಾದ ಆವರಣದಲ್ಲಿ ಸೋಮವಾರ ರಾತ್ರಿ ಮಲಗಿದ್ದು, ಇದೇ ವೇಳ ಭಾರಿ ಮಳೆ ಸುರಿದಿದೆ. ಮಳೆಯಿಂದಾಗಿ ಮಕ್ಕಳು, ವೃದ್ಧರು, ಮಹಿಳೆಯರು ತೀವ್ರ ಸಮಸ್ಯೆಯನ್ನು ಅನುಭವಿಸಿದ್ದು, ಚಳಿಯಿಂದಾಗಿ ಜಾಗರಣೆ ಮಾಡಿದ್ದಾರೆ. ಇದನ್ನು ಗಮನಿಸಿದ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಕೂಡಲೇ ಸಿಬ್ಬಂದಿಗೆ ಸೂಚನೆ ನೀಡಿ ಶ್ರೀಮಠದ ಮುಖದ್ವಾರದ ಪಕ್ಕದ ಬಾಗಿಲನ್ನು ತೆಗೆಸಿ, ಮಳೆಗೆ ನೆಂದ ಭಕ್ತರನ್ನು ಒಳಗಡೆ ಕರೆಯಿಸಿ ಮಂಟಪ ಹಾಗೂ ಪ್ರಾಕಾರದಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದು, ಶ್ರೀಗಳ ಈ ಕಾರ್ಯಕ್ಕೆ ಭಕ್ತರು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.ಮಳೆಕೊಟ್ಟ ವರ:
ಅತ್ಯಂತ ಪರಮಪವಿತ್ರವಾದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನದ ಶೀಲಾಮಂಟಪದ ಪ್ರಾಕಾರದಲ್ಲಿಯೇ ಮಲಗುವ ಅವಕಾಶ ಸಿಕ್ಕಿದ್ದಕ್ಕೆ ಭಕ್ತರು ತುಂಬಾ ಧನ್ಯತಾ ಭಾವವನ್ನು ಹೊಂದುವಂತೆ ಮಾಡಿದ್ದು, ಶ್ರೀಗುರುರಾಯರ ಬೃಂದಾವನ ಸಮೀಪದಲ್ಲಿಯೇ ನಿದ್ರೆ ಮಾಡಿದ್ದು ಅದೃಷ್ಟವೇ ಸರಿ, ಮಳೆ ಬಂದು ತೊಂದರೆ ನೀಡಿದರು ಪರವಾಗಿಲ್ಲ. ರಾಯರ ಸನ್ನಿಧಾನದ ಮುಂದೆ ಮಲಗುವ ಅವಕಾಶವು ನೀಡಿರುವುದು ವರವಾಗಿದೆ. ಅದಕ್ಕಾಗಿ ಮಳೆಗೆ ಧನ್ಯವಾದ ಹೇಳುತ್ತೇವೆ ಎಂದು ಭಕ್ತರಾದ ಸುಲೋಚನಾ, ಚಲಪತಿ ವೆಂಕಟೇಶ್ವರಲು ಹಾಗೂ ವೇಣು ಅವರು ತಿಳಿಸಿದರು.ಶ್ರೀಗಳ ಭರವಸೆ : ಸುಕ್ಷೇತ್ರದಲ್ಲಿ ಸೋಮವಾರ ರಾತ್ರಿ ಮಹಾಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ, ಭಕ್ತರಿಗೆ ವಸತಿ, ಓಡಾಟ, ಕೂಡಲು ಸಹ ಸಮಸ್ಯೆಯಾಗಿದೆ. ಇದು ಭಕ್ತರಿಗೆ ತುಂಬಾ ಅಸೌಕರ್ಯದ ಸಂಗತಿಯಾಗಿದೆ. ಶ್ರೀಮಠದಿಂದ ಮುಂಬರುವ ದಿನಗಳಲ್ಲಿ ಏನೇನು ಮಾಡಲು ಸಾಧ್ಯವೋ ಅವುಗಳನ್ನೆಲ್ಲಾ ಮಾಡಿ ಹೆಚ್ಚಿನ ಸವಲತ್ತು ಕಲ್ಪಿಸಿಕೊಡಲಾಗುವುದು ಎಂದು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದರು ಭರವಸೆ ನೀಡಿದ್ದಾರೆ.
ರಾತ್ರಿ ಮಠದ ಮುಂಭಾಗದಲ್ಲಿ ಮಲಗಿದ್ದ ಅಸಂಖ್ಯಾತ ಭಕ್ತರ ಅಸೌಕರ್ಯವನ್ನು ಕಂಡು ಎಲ್ಲರನ್ನು ಮಠದ ಒಳಗಡೆ ಬಿಡಿಸಿ ಗುರುಸಾರ್ವಭೌಮರ ಮಡಿಲಲ್ಲಿ ಮಲಗಲು ಅವಕಾಶ ಮಾಡಿಕೊಟ್ಟಿದ್ದು, ಇನ್ನು ಹಲವರಿಗೆ ಸಮಸ್ಯೆಯಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸುವ ಕೆಲಸವನ್ನು ಮಾಡಲಾಗುವುದು.ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು, ಪೀಠಾಧಿಪತಿ, ಶ್ರೀರಾಯರ ಮಠ, ಮಂತ್ರಾಲಯ