ಈ ನಾಡು ಕಂಡ ಅಪ್ಪಟ ಜಂಟಲ್ ಮ್ಯಾನ್ ರಾಜಕಾರಣಿ ಎಸ್.ಎಂ.ಕೃಷ್ಣ: ಎಚ್.ವಿಶ್ವನಾಥ್

| Published : Dec 11 2024, 12:46 AM IST

ಈ ನಾಡು ಕಂಡ ಅಪ್ಪಟ ಜಂಟಲ್ ಮ್ಯಾನ್ ರಾಜಕಾರಣಿ ಎಸ್.ಎಂ.ಕೃಷ್ಣ: ಎಚ್.ವಿಶ್ವನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕೀಯದಲ್ಲಿ ಟೀಕೆಗಳು ಬಂದಾಗ ಅವುಗಳನ್ನು ಹೇಗೆ ಸಮಚಿತ್ತದಿಂದ ಸ್ವೀಕರಿಸಬೇಕು, ಆಡಳಿತದ ಅವಧಿಯಲ್ಲಿ ಎದುರಾಗುವ ಸಂಕಷ್ಟಗಳನ್ನು ಯಾವ ರೀತಿ ನಿಭಾಯಿಸಬೇಕು ಎಂಬುದಕ್ಕೆ ಎಸ್.ಎಂ.ಕೃಷ್ಣ ಅವರ ರಾಜಕೀಯ ಜೀವನ ಮಾದರಿ ಆಗುವಂತಹ ಉದಾಹರಣೆ. ಎಸ್.ಎಂ.ಕೃಷ್ಣ ಅವರ ಜೀವನ ರೀತಿ, ಅವರ ಉಡುಗೆ ತೊಡುಗೆ, ಅವರ ಭಾಷಾ ಶುದ್ಧತೆ, ಅವರಿಗೆ ಇದ್ದ ಊಟದ ಪ್ರೀತಿ ಎಲ್ಲವೂ ಚೆಂದ.

ಕನ್ನಡಪ್ರಭ ವಾರ್ತೆ ಮೈಸೂರು

ಈ ನಾಡು ಕಂಡ ಅಪ್ಪಟ ಜಂಟಲ್ ಮ್ಯಾನ್ ರಾಜಕಾರಣಿ ಅಂದರೆ ಅದು ಎಸ್.ಎಂ.ಕೃಷ್ಣ. ರಾಜಕೀಯ ಎಂಬ ಮುತ್ಸದಿ ಪದಕ್ಕೆ ನಿಜವಾದ ಅನ್ವರ್ಥವಾಗಿ ಬದುಕಿದವರು ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಹೇಳಿದ್ದಾರೆ.

ರಾಜಕೀಯದಲ್ಲಿ ಟೀಕೆಗಳು ಬಂದಾಗ ಅವುಗಳನ್ನು ಹೇಗೆ ಸಮಚಿತ್ತದಿಂದ ಸ್ವೀಕರಿಸಬೇಕು, ಆಡಳಿತದ ಅವಧಿಯಲ್ಲಿ ಎದುರಾಗುವ ಸಂಕಷ್ಟಗಳನ್ನು ಯಾವ ರೀತಿ ನಿಭಾಯಿಸಬೇಕು ಎಂಬುದಕ್ಕೆ ಎಸ್.ಎಂ.ಕೃಷ್ಣ ಅವರ ರಾಜಕೀಯ ಜೀವನ ಮಾದರಿ ಆಗುವಂತಹ ಉದಾಹರಣೆ. ಎಸ್.ಎಂ.ಕೃಷ್ಣ ಅವರ ಜೀವನ ರೀತಿ, ಅವರ ಉಡುಗೆ ತೊಡುಗೆ, ಅವರ ಭಾಷಾ ಶುದ್ಧತೆ, ಅವರಿಗೆ ಇದ್ದ ಊಟದ ಪ್ರೀತಿ ಎಲ್ಲವೂ ಚೆಂದ ಎಂದಿದ್ದಾರೆ.

ನನ್ನ ರಾಜಕೀಯ ಜೀವನದಲ್ಲಿ ಅವರ ನೇತೃತ್ವದ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವನಾಗಿದ್ದ ದಿನಗಳು ನನ್ನ ಬದುಕಿನ ಅತ್ಯಂತ ಅಮೂಲ್ಯ ಘಳಿಗೆಗಳು. ಈ ನಾಡಿಗೆ ಎಸ್.ಎಂ. ಕೃಷ್ಣ ಅವರು ಕೊಟ್ಟ ಕೊಡುಗೆಗಳನ್ನು ಹೇಳುತ್ತಾ ಹೋದರೆ ಅದೇ ದೊಡ್ಡ ಪುಸ್ತಕವಾಗುತ್ತದೆ. ರಾಜಕಾರಣಿಗಳು ತಮ್ಮ ಕಾಲದಲ್ಲಿ ಮಾಡಿದ ಕೆಲಸಗಳನ್ನು ಅವರೇ ಹೇಳಿ ಕೊಳ್ಳಬೇಕಾದ ಕಾಲಘಟ್ಟದಲ್ಲಿ ಜನರೇ ಪಕ್ಷಾತೀತವಾಗಿ ಜಾತ್ಯತೀತವಾಗಿ ಎಸ್.ಎಂ. ಕೃಷ್ಣ ಅವರ ಆಡಳಿತ ಕಾಲದ ಸಾಧನೆಗಳನ್ನು ಸ್ಮರಿಸುತ್ತಿರುವುದು ಅವರಿಗೆ ಸಿಕ್ಕ ಬಹುದೊಡ್ಡ ಗೌರವವೇ ಸರಿ ಎಂದು ತಿಳಿಸಿದ್ದಾರೆ.

ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಅವರ ಅಗಲಿಕೆಯಿಂದ ಆದಂತಹ ನೋವನ್ನು ತಡೆಯುವ ಶಕ್ತಿ ತಾಯಿ ಶ್ರೀ ಚಾಮುಂಡೇಶ್ವರಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.ಡಾ. ರಾಜ್‌ ಕುಮಾರ್‌, ನಾಗಪ್ಪ ಅಪಹರಣ ಪ್ರಕರಣ

ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಹಾಗೂ ಮಾಜಿ ಸಚಿವ ಎಚ್‌. ನಾಗಪ್ಪ ಅವರನ್ನು ಕುಖ್ಯಾತ ಕಾಡುಗಳ್ಳ, ನರಹಂತಕ, ಶ್ರೀಗಂಧ ಕಳ್ಳ ಸಾಗಾಣಿಕೆದಾರ ವೀರಪ್ಪನ್‌ ಬೇರೆ ಬೇರೆ ಸಂದರ್ಭಗಳಲ್ಲಿ ಅಪಹರಿಸಿದ್ದರಿಂದ ಅಂದು ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ. ಕೃಷ್ಣ ಅವರಿಗೆ ತೀವ್ರ ಸವಾಲು ಎದುರಾಗಿತ್ತು.

ಡಾ.ರಾಜ್‌ಕುಮಾರ್‌ ಅವಹರಣ ಪ್ರಕರಣವಂತೂ ರಾಜ್ಯಾದ್ಯಂತ ಕಾನೂನು, ಸುವ್ಯವಸ್ಥೆ ಸಮಸ್ಯೆಗೆ ಕಾರಣವಾಗಿತ್ತು. ಸತತ 108 ದಿನಗಳ ನಂತರ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಿ, ಕರೆತರಲಾಯಿತು.

ಆದರೆ ನಾಗಪ್ಪ ಪ್ರಕರಣದಲ್ಲಿ ಆ ರೀತಿಯಾಗಲಿಲ್ಲ. ಅವರು ಚಂಗಡಿ ಅರಣ್ಯ ಪ್ರದೇಶದಲ್ಲಿ ಹತರಾದರು. ಇದು ಕೂಡ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು.

ಇದರ ಜೊತೆಗೆ ಕಾವೇರಿ ಸಮಸ್ಯೆ, ಬರ ಕೂಡ ಎದುರಾಗಿದ್ದವು. ಎಲ್ಲವನ್ನು ಎಸ್‌.ಎಂ. ಕೃಷ್ಣ ಸಮಚಿತ್ತದಿಂದ ಎದುರಿಸಿದರು.ಎಸ್‌.ಎಂ. ಕೃಷ್ಣ ಅವರಿಗೆ ಇತ್ತು ಅಭಿಮಾನಿಗಳ ಸಂಘ

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಮೈಸೂರಿನಲ್ಲಿ ಅಭಿಮಾನಿಗಳ ಸಂಘ ಇತ್ತು. ವಿಕ್ರಾಂತ್‌ ಪಿ. ದೇವೇಗೌಡ ಅವರು ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪ್ರತಿ ವರ್ಷ ಮೇ 1 ರಂದು ಕಾರ್ಮಿಕ ದಿನಾಚರಣೆಯಂದು ಎಸ್‌.ಎಂ. ಕೃಷ್ಣ ಅವರ ಹುಟ್ಟು ಹಬ್ಬ ಆಚರಿಸುತ್ತಿದ್ದರು. ಎಸ್.ಎಂ. ಕೃಷ್ಣ, ಪ್ರೇಮಾ ಕೃಷ್ಣ ಅವರು ಮೈಸೂರಿಗೆ ಬಂದಲ್ಲಿ ದೇವೇಗೌಡರ ಮನೆಗೆ ಭೇಟಿ ನೀಡುತ್ತಿದ್ದರು.

ಪತ್ರಕರ್ತರ ಬಡಾವಣೆಗೆ ಕಾರಣಕರ್ತರು:

ಮೈಸೂರಿನ ಆರ್‌.ಟಿ. ನಗರದಲ್ಲಿ ಪತ್ರಕರ್ತರ ಬಡಾವಣೆ ನಿರ್ಮಾಣಕ್ಕೆ ಎಸ್‌.ಎಂ. ಕೃಷ್ಣ ಅವರು ಕಾರಣಕರ್ತರು. ಆಂದೋಲನ ಪತ್ರಿಕೆ ಸಂಸ್ತಾಪಕರಾದ ರಾಜಶೇಖರ ಕೋಟಿ ಅವರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದಾಗ ಮೈಸೂರಿನಲ್ಲಿ ಪತ್ರಕರ್ತರಿಗೆ ಹೊಸ ಬಡಾವಣೆಯಲ್ಲಿ ಆರು ಎಕರೆ ಜಮೀನು ನೀಡುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶಿಸಿದ್ದರು. ನಂತರ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗ ಇದು ಕಾರ್ಯರೂಪಕ್ಕೆ ಬಂದಿತು. ಬಡಾವಣೆಯ ಉದ್ಘಾಟನಾ ಸಮಾರಂಭದಲ್ಲಿ ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ಪಾಲ್ಗೊಂಡಿದ್ದರು.