ಎಸ್.ಎಂ.ಕೃಷ್ಣ ಮಾದರಿ ರಾಜಕಾರಣಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸ್ಮರಣೆ

| Published : Dec 16 2024, 12:46 AM IST

ಎಸ್.ಎಂ.ಕೃಷ್ಣ ಮಾದರಿ ರಾಜಕಾರಣಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸ್ಮರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌.ಎಂ.ಕೃಷ್ಣ ಅವರು ರಾಜಕಾರಣದಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದರೂ ತಮಗೆ ಸಿಕ್ಕಿದ ಅಧಿಕಾರದ ಅವಧಿಯಲ್ಲಿ ಇತಿಹಾಸ ಪುಟದಲ್ಲಿ ಉಳಿದುಕೊಳ್ಳುವಂತ ಕೊಡುಗೆ ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ .

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸೌಮ್ಯ ಸ್ವಭಾವದೊಂದಿಗೆ ಭಾಷಾ ಪಾಂಡಿತ್ಯವನ್ನು ಹೊಂದಿದ್ದ ಎಸ್.ಎಂ. ಕೃಷ್ಣ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಬಂದ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗುವ ಮೂಲಕ ಮಾದರಿ ರಾಜಕಾರಣಿಯಾಗಿದ್ದರು ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಸ್ಮರಿಸಿದರು.

ಪಟ್ಟಣದ ರೈತ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ನಡೆದ ಮಾಜಿ ಮುಖ್ಯಮಂತ್ರಿ ದಿ.ಎಸ್‌.ಎಂ. ಕೃಷ್ಣರ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಾಗಿ ಪಕ್ಷವನ್ನು ಮುನ್ನಡೆಸುವ ಜೊತೆಗೆ ಡಿ.ಕೆ.ಶಿವಕುಮಾರ್, ಕೆ.ಎನ್.ನಾಗೇಗೌಡ, ಡಿ.ಸಿ.ತಮ್ಮಣ್ಣ ಸೇರಿದಂತೆ ಹಲವು ನಾಯಕರನ್ನು ಬೆಳೆಸಿದ ಹೆಮ್ಮೆಯ ನಾಯಕರಾಗಿದ್ದರು ಎಂದರು.

ಎಸ್.ಎಂ.ಕೃಷ್ಣ ಅವರ ತಂದೆ ಮದ್ದೂರು ತಾಲೂಕಿನ ಸೋಮನಹಳ್ಳಿ ಮಲ್ಲಯ್ಯ ಅವರು ಮೈಸೂರು ರಾಜರ ಆಳ್ವಿಕೆಯ ಕಾಲದಲ್ಲಿ ಪ್ರಜಾಪ್ರತಿನಿಧಿ ಸದಸ್ಯರಾಗಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಮಹಾತ್ಮ ಗಾಂಧಿ ಅವರನ್ನು ಎಸ್‌.ಎಂ.ಕೃಷ್ಣ ಅವರು ಚಿಕ್ಕವಯಸ್ಸಿನಲ್ಲಿಯೇ ತಂದೆಯೊಂದಿಗೆ ಚಳವಳಿ ಸ್ಥಳಕ್ಕೆ ಹೋಗಿ ಅಭಿನಂದಿಸಿ ಅಂದಿನ ಕಾಲದಲ್ಲಿಯೇ ಮೂರು ಸಾವಿರ ರು. ಹಣವನ್ನು ಹೋರಾಟಕ್ಕೆ ದೇಣಿಗೆಯಾಗಿ ನೀಡಿದ್ದರು ಎಂದು ವಿವರಿಸಿದರು.

ಎಸ್‌.ಎಂ.ಕೃಷ್ಣ ಅವರ ಸಲಹೆ ಹಾಗೂ ಸಹಕಾರದಿಂದ ನನ್ನ ರಾಜಕೀಯ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಯಿತು. ಮಂಡ್ಯ ಜಿಲ್ಲೆಯಲ್ಲಿ ಗಟ್ಟಿತನದ ರಾಜಕಾರಣಿ ಎಂದು ಗುರುತಿಸಿರುವುದು ನನ್ನ ಸೌಭಾಗ್ಯ. ಅಪಘಾತ ಸಂದರ್ಭದಲ್ಲಿ ನನ್ನ ಜೀವವನ್ನು ಬದುಕಿಸಿದ್ದು ಎಸ್‌.ಎಂ.ಕೃಷ್ಣ ಅವರೇ ಆಗಿದ್ದಾರೆಂದು ನೆನೆದು ಭಾವುಕರಾದರು.

ಎಸ್‌.ಎಂ.ಕೃಷ್ಣ ಅವರು ರಾಜಕಾರಣದಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದರೂ ತಮಗೆ ಸಿಕ್ಕಿದ ಅಧಿಕಾರದ ಅವಧಿಯಲ್ಲಿ ಇತಿಹಾಸ ಪುಟದಲ್ಲಿ ಉಳಿದುಕೊಳ್ಳುವಂತ ಕೊಡುಗೆ ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದರು.

ಇದೇ ವೇಳೆ ಎಸ್‌.ಎಂ.ಕೃಷ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಗಣ್ಯರು ಪುಷ್ಪಾರ್ಚಣೆ ಮಾಡಿ ನಮನ ಸಲ್ಲಿಸಿದರು. ವೇದಿಕೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಜಿಪಂ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ಪ್ರಮುಖರಾದ ಕೆ.ಜೆ.ದೇವರಾಜು, ಚನ್ನಪಿಳ್ಳೆಕೊಪ್ಪಲು ಸಿದ್ದೇಗೌಡ, ಕುಳ್ಳಚನ್ನಂಕಯ್ಯ, ಅಶ್ವಿನ್ ಕುಮಾರ್, ಶಿವಮಾದೇಗೌಡ, ಸುಷ್ಮಾ ರಾಜು, ಕೆ.ಎಸ್.ದ್ಯಾಪೇಗೌಡ, ಆಯೂಬ್ ಪಾಷ, ಪಿ.ಮಾದೇಶ್, ಸಿ.ಮಾಧು, ಕುಂದೂರು ಪ್ರಕಾಶ್, ಕೃಷ್ಣ, ಕೆಂಪರಾಜು ಇದ್ದರು.