ಇಂದು ಎಸ್.ಎಂ.ಕೃಷ್ಣರ ಅಂತ್ಯಕ್ರಿಯೆ: ಸಿದ್ಧತೆ ಪರಿಶೀಲಿಸಿದ ಡಿಸಿಎಂ ಡಿಕೆಶಿ

| Published : Dec 11 2024, 12:47 AM IST

ಇಂದು ಎಸ್.ಎಂ.ಕೃಷ್ಣರ ಅಂತ್ಯಕ್ರಿಯೆ: ಸಿದ್ಧತೆ ಪರಿಶೀಲಿಸಿದ ಡಿಸಿಎಂ ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಳೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಎಲ್ಲರೂ ಬರಲಿದ್ದಾರೆ. ವಿಶೇಷ ವಾಹನದಲ್ಲಿ ಪಕ್ಷದ ಎಲ್ಲಾ ಶಾಸಕರು ಬರುತ್ತಾರೆ. ಕೇಂದ್ರ ನಾಯಕರು ಬರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರ ಪೋನ್ ಕೂಡ ನಾನು ರಿಸೀವ್ ಮಾಡೋಕೆ ಆಗಿಲ್ಲ .

ಕನ್ನಡಪ್ರಭ ವಾರ್ತೆ ಮದ್ದೂರು

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಅಂತ್ಯಕ್ರಿಯೆ ಹುಟ್ಟೂರು ತಾಲೂಕಿನ ಸೋಮನಹಳ್ಳಿಯ ತಮ್ಮ ಖಾಲಿ ಜಮೀನಿನಲ್ಲಿ ನಡೆಯಲಿದ್ದು, ಸಿದ್ಧತೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಥಳ ಪರಿಶೀಲನೆ ನಡೆಸಿದರು.

ಬೆಂಗಳೂರು - ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ಸೋಮನಹಳ್ಳಿ ಕಾಫಿ ಡೇ ಹತ್ತಿರದ ಖಾಲಿ ಜಾಗದಲ್ಲಿ ಎಸ್.ಎಂ.ಕೃಷ್ಣರ ಅಂತ್ಯಕ್ರಿಯೆ ನೆರವೇರಿಸಲು ನಡೆಯುತ್ತಿರುವ ಸಿದ್ಧತೆಗಳನ್ನು ವೀಕ್ಷಿಸಿದರು.

ಕೃಷ್ಣರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಆಗಮಿಸಲಿರುವ ಹಿನ್ನೆಲೆಯಲ್ಲಿ ಗಣ್ಯರು, ಅತಿಗಣ್ಯರು ಸೇರಿದಂತೆ ಸ್ಥಳೀಯರು ಹಾಗೂ ಸಾರ್ವಜನಿಕರು ವೀಕ್ಷಿಸಲು ಅನುಕೂಲವಾಗುವಂತೆ ಕೈಗೊಳ್ಳುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಗಣ್ಯರು, ಸಾರ್ವಜನಿಕರ ದರ್ಶನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.

ಈ ವೇಳೆ ಮಾತನಾಡಿದ ಅವರು, ನಾಳೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಎಲ್ಲರೂ ಬರಲಿದ್ದಾರೆ. ವಿಶೇಷ ವಾಹನದಲ್ಲಿ ಪಕ್ಷದ ಎಲ್ಲಾ ಶಾಸಕರು ಬರುತ್ತಾರೆ. ಕೇಂದ್ರ ನಾಯಕರು ಬರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರ ಪೋನ್ ಕೂಡ ನಾನು ರಿಸೀವ್ ಮಾಡೋಕೆ ಆಗಿಲ್ಲ ಎಂದರು.

ಕೇಂದ್ರ, ರಾಜ್ಯಕ್ಕೆ ಎಸ್.ಎಂ.ಕೃಷ್ಣ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಿ ಅವರಿಗೆ ಗೌರವ ನೀಡುವ ಸಲುವಾಗಿ ನಾಳೆ ಎಲ್ಲಾ ಸರ್ಕಾರಿ ಹಾಗೂ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದೇವೆ. ಮಂಡ್ಯದ ಜನ ತಪ್ಪು ತಿಳಿಯಬಾರದು. ಕುಟುಂಬಸ್ಥರ ಆಸೆಯಂತೆ ಅವರ ಸ್ವಂತ ಜಾಗದಲ್ಲೇ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.