ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಎಸ್.ಎಂ.ಕೃಷ್ಣ ತಮ್ಮದೇ ತವರು ಮಂಡ್ಯ ಜಿಲ್ಲೆಯಲ್ಲಿ ಇದೇ ತಿಂಗಳ 20ರಿಂದ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಶುಭ ಕೋರಿ ಪತ್ರ ಬರೆದಿದ್ದರು.ವಾರದ ಹಿಂದೆ ಮಂಡ್ಯ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದ ಅವರು, ಸಮ್ಮೇಳನದ ಯಶಸ್ಸಿಗಾಗಿ ಸಂದೇಶ ಕಳಿಸಿದ್ದರು. ಇದೇ ಅವರ ಕೊನೆಯ ಪತ್ರವಾಗಿದೆ.
ಪತ್ರದಲ್ಲೇನಿದೆ?:ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ರೂಪುಗೊಂಡ ಮಂಡ್ಯದಲ್ಲಿ 3ನೇ ಬಾರಿಗೆ ನಡೆಯುತ್ತಿರುವ ಕನ್ನಡದ ಸಿರಿಹಬ್ಬ ಯಶಸ್ವಿಯಾಗಲೆಂದು ಶುಭ ಹಾರೈಸುತ್ತೇನೆ.
ಸಾಹಿತ್ಯ ಸಮ್ಮೇಳನಗಳು ಕೇವಲ ಜನಜಾತ್ರೆಗಳಾಗದೆ ಕನ್ನಡದ ಅಸ್ಮಿತೆ ಸಾರುವ ಹಬ್ಬವಾಗಿದೆ. ತಂತ್ರಜ್ಞಾನ ಬೆಳೆದಂತೆ ಕನ್ನಡದ ಆವಿಷ್ಕಾರಗಳು ಪರಿಷ್ಕೃತಗೊಂಡು ರಾಜ್ಯದ ಎಲ್ಲೆ ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಬಳಕೆ ಎದ್ದು ಕಾಣುತ್ತಿದೆ. ಡಾ. ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಕನ್ನಡಕ್ಕೆ ಅಧಿಕೃತ ಶಾಸ್ತ್ರೀಯ ಸ್ಥಾನಮಾನ ಕಲ್ಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ.ಮಂಡ್ಯ ಆತಿಥ್ಯಕ್ಕೆ ಹೆಸರಾದ ಜಿಲ್ಲೆ. ಈ ಹಿಂದಿನ ಸಮ್ಮೇಳನಗಳನ್ನು ತಮ್ಮ ಮನೆಯ ಹಬ್ಬವಾಗಿ ಆಚರಿಸಿದ ಕೀರ್ತಿ ಮಂಡ್ಯ ಜನರಿಗೆ ಸಲ್ಲುತ್ತದೆ. ಪ್ರಥಮ ಬಾರಿಗೆ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಜಯದೇವಿ ತಾಯಿ ಲಿಗಾಡೆಯವರು ಪ್ರಥಮ ಮಹಿಳಾ ಸಮ್ಮೇಳನಾಧ್ಯಕ್ಷರಾಗಿದ್ದು ಐತಿಹಾಸಿಕ ದಾಖಲೆ. ಅದೇ ರೀತಿ 1994ರಲ್ಲಿ ನಾನು ಉಪ ಮುಖ್ಯಮಂತ್ರಿಯಾಗಿದ್ದಾಗ ಜಿ. ಮಾದೇಗೌಡರ ನೇತೃತ್ವದಲ್ಲಿ ನಡೆದ ಸಮ್ಮೇಳನ ಅವಿಸ್ವರಣೀಯ.
1994ರ ಸಾಹಿತ್ಯ ಸಮ್ಮೇಳನದ ಅವಧಿಯಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ನನ್ನ ಸನ್ನಿತ್ರ, ಹಿರಿಯ ಸಾಹಿತಿ, ಗೋ. ರು. ಚನ್ನಬಸಪ್ಪನವರು ಪ್ರಸ್ತುತ ಸಮ್ಮೇಳನಾಧ್ಯಕ್ಷರಾಗಿ ನೇಮಕಗೊಂಡಿರುವುದು ಸಂತಸ ತಂದಿದ್ದು ಅವರಿಗೆ ನನ್ನ ಶುಭ ಹಾರೈಕೆ.ನಾಡಿನ ಶ್ರೀಮಂತ ಸಾಹಿತ್ಯ ಪರಂಪರೆಗೆ ಮಂಡ್ಯದ ಕೊಡುಗೆ ಅಪಾರ. ಪ್ರಾತಃಸ್ಮರಣೀಯರಾದ ಪಿಟೀಲು ಚೌಡಯ್ಯ, ಬಿ.ಎಂ. ಶ್ರೀಕಂಠಯ್ಯ, ಪು.ತಿ.ನರಸಿಂಹಾಚಾರ್, ಕೆ.ಎಸ್. ನರಸಿಂಹಸ್ವಾಮಿ, ಜಾನಪದ ತಜ್ಞ ಡಾ। ಎಚ್.ಎಲ್.ನಾಗೇಗೌಡ, ಖ್ಯಾತ ನಟ ಅಂಬರೀಶ್ ಅವರನ್ನು ಪ್ರಸ್ತುತ ಸಮ್ಮೇಳನದಲ್ಲಿ ನೆನೆಯುವುದು ಅವಶ್ಯ.
ಸರ್ವರಿಗೂ ಆದರ್ಶನೀಯರಾದ ಜಗದ ಕವಿ ಕುವೆಂಪು ಅವರ ಸರ್ವ ಶಾಂತಿಯ ತೋಟದ ಸ್ತುತಿಯನ್ನು ನೆನೆಯುತ್ತಾ ಸಾಹಿತ್ಯ ಸಮ್ಮೇಳನಕ್ಕೆ ಶುಭವಾಗಲಿ, ಈ ಸಂದರ್ಭದಲ್ಲಿ ಹೊರತರುತ್ತಿರುವ ನೆನಪಿನ ಸಂಪುಟಕ್ಕೆ ನನ್ನ ಶುಭಕಾಮನೆಗಳು.