ವರ್ತಮಾನದ ಸಣ್ಣ ಕುತೂಹಲಗಳೇ ಭವಿಷ್ಯದ ದೊಡ್ಡ ಸಾಧನೆಗೆ ದಾರಿ: ಡಾ.ರಾಜಗೋಪಾಲ್

| Published : May 25 2024, 12:51 AM IST

ವರ್ತಮಾನದ ಸಣ್ಣ ಕುತೂಹಲಗಳೇ ಭವಿಷ್ಯದ ದೊಡ್ಡ ಸಾಧನೆಗೆ ದಾರಿ: ಡಾ.ರಾಜಗೋಪಾಲ್
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಅಜ್ಜರಕಾಡಿನ ಡಾ. ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮೇ 23ರಂದು ವಿಜ್ಞಾನ ಸಂಘದ ಸಹಯೋಗದಲ್ಲಿ ಎಕ್ಸ್ ಪ್ಲೋರ್ ವಿದ್ ಯು - ೨೦೨೪ ಎಂಬ ವಾರ್ಷಿಕ ವಿಜ್ಞಾನ ವಸ್ತು ಪ್ರದರ್ಶನ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಉಡುಪಿ

ಶಾಲಾ ಕಾಲೇಜುಗಳಲ್ಲಿ ನಡೆಯುವ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಎಚ್ಚರಿಸಿ, ಕುತೂಹಲವನ್ನು ಸೃಷ್ಟಿ ಮಾಡುತ್ತವೆ. ಇಂತಹ ಕುತೂಹಲವೇ ಭವಿಷ್ಯದಲ್ಲಿ ದೊಡ್ಡ ಸಾಧನೆ ಮಾಡುವಂತೆ ಪ್ರೇರೇಪಿಸುತ್ತದೆ ಎಂದು ಎಂಜಿಎಂ ಕಾಲೇಜಿನ ನಿವೃತ್ತ ಸಸ್ಯಶಾಸ್ತ್ರಜ್ಞ ಡಾ.ಪಿ.ಕೆ. ರಾಜಗೋಪಾಲ್ ಹೇಳಿದ್ದಾರೆ.

ಅವರು ಉಡುಪಿ ಅಜ್ಜರಕಾಡಿನ ಡಾ. ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಮೇ 23ರಂದು ವಿಜ್ಞಾನ ಸಂಘದ ಸಹಯೋಗದಲ್ಲಿ ನಡೆದ ಎಕ್ಸ್ ಪ್ಲೋರ್ ವಿದ್ ಯು - ೨೦೨೪ ಎಂಬ ವಾರ್ಷಿಕ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವರ್ತಮಾನದ ವಿದ್ಯಾರ್ಥಿಗಳ ಸಣ್ಣ ಸಣ್ಣ ಕುತೂಹಲಗಳೇ ದೊಡ್ಡ ದೊಡ್ಡ ಸಂಶೋಧನೆಗಳಾಗುತ್ತದೆ ಎಂದು ಹೇಳಿದರು.

ಪ್ರಾಂಶುಪಾಲ ಪ್ರೊ. ಭಾಸ್ಕರ ಶೆಟ್ಟಿ ಎಸ್. ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಪ್ರಶ್ನೆಯೇ ವಿಜ್ಞಾನದ ಮೂಲಾಧಾರ. ಕಾಲೇಜಿನಲ್ಲಿ ನೀಡಿದ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳುವಂತೆ ಕರೆ ನೀಡಿದರು.

ವಿಜ್ಞಾನ ನಿಕಾಯದ ಡೀನ್‌ ಪ್ರೊ. ಕೆ. ಶ್ರೀಧರಪ್ರಸಾದ್ ಸ್ವಾಗತಿಸಿ, ಕಾರ್ಯಕ್ರಮದ ವೈಶಿಷ್ಟ್ಯತೆಯ ಬಗ್ಗೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಮತಿ ಅಡಿಗ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ವಾಣಿ ಆರ್ ಬಲ್ಲಾಳ್, ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಣಿಭೂಷಣ್‌ ಡಿಸೋಜಾ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಉದಯ ರಾಜ್ ಎಸ್. ಹಾಗೂ ವಿಜ್ಞಾನ ಸಂಘದ ಸಂಚಾಲಕ ಕೇಶವಮೂರ್ತಿ ಎಂ.ವಿ. ಉಪಸ್ಥಿತರಿದ್ದರು. ಶ್ರೇಯ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ದಿಶಾ ಹಾಗೂ ನಾಗರತ್ನ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಎಲ್ಲಾ ವಿಜ್ಞಾನ ವಿಭಾಗಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅದೇ ದಿನ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಎಲ್ಲಾ ವಿಜ್ಞಾನ ವಿಭಾಗಗಳಿಂದ ಸೇರಿ ಒಟ್ಟು ೫೩ ವಿವಿಧ ವಿಜ್ಞಾನ ಮಾದರಿಗಳು ಈ ದಿನ ಪ್ರದರ್ಶನಗೊಂಡವು.