ರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಎರಡೂವರೆ ವರ್ಷಗಳ ನಂತರ ಇದೀಗ ಫಲಾನುಭವಿಗಳಿಗೆ ಸ್ಮಾರ್ಟ್‌ಕಾರ್ಡ್‌ ನೀಡಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಅದಕ್ಕಾಗಿ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ಅನುಮೋದನೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.

ಗಿರೀಶ್ ಗರಗ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಎರಡೂವರೆ ವರ್ಷಗಳ ನಂತರ ಇದೀಗ ಫಲಾನುಭವಿಗಳಿಗೆ ಸ್ಮಾರ್ಟ್‌ಕಾರ್ಡ್‌ ನೀಡಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಅದಕ್ಕಾಗಿ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ಅನುಮೋದನೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.

ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಮಾತ್ರ ದೊರಕುವಂತೆ ಮಾಡುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಅನ್ನಭಾಗ್ಯ ಯೋಜನೆಯಲ್ಲಿ ನಿಯಮ ಮೀರಿ ಬಿಪಿಎಲ್‌ ಕಾರ್ಡ್‌ ಹೊಂದಿರುವವರನ್ನು ಪತ್ತೆ ಮಾಡಿ ಅವರ ಪಡಿತರ ಚೀಟಿ ರದ್ದು ಮಾಡಲಾಗಿದೆ. ಅದರ ಜತೆ ಆದಾಯ ತೆರಿಗೆ ಪಾವತಿಸುತ್ತಿರುವವರೂ ಗೃಹಲಕ್ಷ್ಮೀ ಅಡಿ ಸಹಾಯಧನ ಪಡೆಯುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಇದೀಗ ಶಕ್ತಿ ಯೋಜನೆ ಲಾಭ ರಾಜ್ಯದ ಮಹಿಳೆಯರು ಮಾತ್ರ ಪಡೆಯುವಂತೆ ಮಾಡಲು ಸ್ಮಾರ್ಟ್‌ಕಾರ್ಡ್‌ ನೀಡಲು ಸಾರಿಗೆ ಇಲಾಖೆ ಯೋಜಿಸಿದ್ದು, ಅದಕ್ಕಾಗಿ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

629.73 ಕೋಟಿ ರು. ಉಚಿತ ಪ್ರಯಾಣ:

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2023ರ ಜೂನ್‌ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಪ್ರೀಮಿಯಂ ಸೇವೆಗಳನ್ನು ಹೊರತುಪಡಿಸಿ ಉಳಿದ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರು ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಯಿತು. ಆರಂಭದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಪ್ರತಿದಿನ ಸರಾಸರಿ 45ರಿಂದ 50 ಲಕ್ಷದಷ್ಟಿರುತ್ತಿತ್ತು. ಆದರೀಗ ಆ ಸಂಖ್ಯೆ 75ರಿಂದ 75 ಲಕ್ಷಕ್ಕೆ ಹೆಚ್ಚಳವಾಗಿದೆ. ಅಲ್ಲದೆ, 2023ರ ಜೂ.11ರಿಂದ 2025ರ ಡಿ. 23ರವರೆಗೆ ರಾಜ್ಯದ ಮಹಿಳೆಯರು ಒಟ್ಟಾರೆ 629.73 ಕೋಟಿ ಉಚಿತ ಪ್ರಯಾಣ ಮಾಡಿದ್ದಾರೆ. ಈ ಉಚಿತ ಪ್ರಯಾಣದ ಟಿಕೆಟ್‌ ಮೊತ್ತ 16,243 ಕೋಟಿ ರು.ಗಳಾಗಿದೆ.

ಕಿರಿಕಿರಿ ತಪ್ಪಿಸಲು, ನೈಜ ಫಲಾನುಭವಿಗಳ ಬಳಕೆಗೆ ಒತ್ತು:

ಶಕ್ತಿ ಯೋಜನೆ ಜಾರಿಯಾದಾಗಿನಿಂದಲೂ ದಾಖಲೆ ಪರಿಶೀಲನೆ ವಿಚಾರದಲ್ಲಿ ಬಸ್ ನಿರ್ವಾಹಕರು ಮತ್ತು ಮಹಿಳಾ ಪ್ರಯಾಣಿಕರ ನಡುವೆ ಕಿತ್ತಾಟಗಳು ನಡೆಯುತ್ತಲೇ ಇವೆ. ಕೆಲವೊಮ್ಮೆ ಅನ್ಯರಾಜ್ಯದ ಮಹಿಳೆಯರೂ ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣ ಮಾಡಿದ್ದುಂಟು. ಈ ಎಲ್ಲದರಿಂದ ನಿರ್ವಾಹಕರು ಮತ್ತು ಮಹಿಳಾ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.

ಅಲ್ಲದೆ, ಶಕ್ತಿ ಯೋಜನೆ ಆರಂಭದಿಂದಲೂ ನೈಜ ಫಲಾನುಭವಿಗಳು ಯೋಜನೆ ಲಾಭ ಪಡೆಯುವಂತೆ ಮಾಡಲು ಮಹಿಳೆಯರಿಗೆ ಸ್ಮಾರ್ಟ್‌ಕಾರ್ಡ್‌ ವಿತರಿಸಬೇಕು ಎಂದು ನಾಲ್ಕೂ ನಿಗಮಗಳು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿವೆ. ಇದೀಗ ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆ, ಸ್ಮಾರ್ಟ್‌ಕಾರ್ಡ್ ವಿತರಣೆಗೆ ಬಹುತೇಕ ಒಪ್ಪಿಗೆ ಸೂಚಿಸಿದೆ. ಅದಕ್ಕೂ ಮುನ್ನ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ಅನುಮೋದನೆ ಪಡೆಯಬೇಕಿದೆ. ಹೀಗಾಗಿ ಮುಂದೆ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ, ಅನುಮೋದನೆ ಪಡೆಯುವ ಸಾಧ್ಯತೆಗಳಿವೆ.

ಸೇವಾಸಿಂಧು ಅಡಿ ಅರ್ಜಿ ಸಲ್ಲಿಕೆಗೆ ಅವಕಾಶ:

ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿದಾಗ ಸ್ಮಾರ್ಟ್‌ಕಾರ್ಡ್‌ಗಾಗಿ ಮಹಿಳಾ ಪ್ರಯಾಣಿಕರಿಂದ ಶುಲ್ಕ ಪಡೆಯಬೇಕೇ ಅಥವಾ ಸರ್ಕಾರದಿಂದಲೇ ಅದರ ವೆಚ್ಚ ಭರಿಸಲಾಗುತ್ತದೆಯೇ ಎಂಬುದು ನಿರ್ಧಾರವಾಗಲಿದೆ. ಸದ್ಯ ಸಾರಿಗೆ ನಿಗಮಗಳಿಂದ ಸಲ್ಲಿಕೆಯಾಗಿರುವ ಪ್ರಸ್ತಾವನೆಯಲ್ಲಿ ಶುಲ್ಕದ ವಿಚಾರ ಬಗ್ಗೆ ಸ್ಪಷ್ಟತೆಯಿಲ್ಲ. ಇನ್ನು, ಸಚಿವ ಸಂಪುಟ ಒಪ್ಪಿಗೆ ದೊರೆತ ನಂತರ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ದಾಖಲೆಗಳನ್ನು ಸಲ್ಲಿಸಿ ಮಹಿಳಾ ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್‌ಗೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿ ಮಾಡಲಾಗುತ್ತದೆ. ಅದನ್ನು ಪರಿಶೀಲಿಸಿ, ಬಸ್‌ ನಿಲ್ದಾಣ ಅಥವಾ ಸೂಕ್ತ ಸ್ಥಳಗಳಲ್ಲಿ ಸ್ಮಾರ್ಟ್‌ಕಾರ್ಡ್ ವಿತರಿಸಲು ಸಾರಿಗೆ ನಿಗಮಗಳು ಈಗಾಗಲೇ ನಿರ್ಧರಿಸಿವೆ. ಅದರ ಜತೆಗೆ, ಮುಂಬರುವ ದಿನಗಳಲ್ಲಿ ಸ್ಮಾರ್ಟ್‌ಕಾರ್ಡ್‌ ಇಲ್ಲದ ಮಹಿಳಾ ಪ್ರಯಾಣಿಕರು ಬಸ್‌ಗಳಲ್ಲಿ ಹಣ ನೀಡಿ ಟಿಕೆಟ್‌ ಪಡೆದು ಸಂಚರಿಸುವಂತೆ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಶಕ್ತಿ ಯೋಜನೆ ಫಲಾನುಭವಿ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್‌ ನೀಡುವ ಕುರಿತು ಪ್ರಸ್ತಾವನೆಯಿದೆ. ಈ ವಿಚಾರವನ್ನು ಶೀಘ್ರ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಒಪ್ಪಿಗೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗೃಹಲಕ್ಷ್ಮೀ, ಗೃಹ ಜ್ಯೋತಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ ಮಾದರಿಯಲ್ಲೇ ಸ್ಮಾರ್ಟ್‌ಕಾರ್ಡ್‌ ಪಡೆಯಲು ಸೇವಾ ಸಿಂಧು ವೆಬ್‌ಟ್‌ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗುವುದು.

-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ