ರೋಣ ಕ್ಷೇತ್ರದ ಪ್ರೌಢಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್ ವ್ಯವಸ್ಥೆ: ಜಿ.ಎಸ್.ಪಾಟೀಲ್

| Published : Jul 29 2025, 01:04 AM IST

ರೋಣ ಕ್ಷೇತ್ರದ ಪ್ರೌಢಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್ ವ್ಯವಸ್ಥೆ: ಜಿ.ಎಸ್.ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ರೋಣ ತಾಲೂಕಿನ ಮುಗಳಿ ಗ್ರಾಮದಲ್ಲಿ ₹1.62 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಆರ್.ಎಂ.ಎಸ್.ಎ. ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡವನ್ನು ಸೋಮವಾರ ಶಾಸಕ ಜಿ.ಎಸ್. ಪಾಟೀಲ್ ಉದ್ಘಾಟಿಸಿದರು.

ರೋಣ: ಶಿಕ್ಷಣ ಗುಣಮಟ್ಟ ಸುಧಾರಣೆ ನಿಟ್ಟಿನಲ್ಲಿ ಪ್ರತಿಯೊಂದು ಪ್ರೌಢಶಾಲೆಯಲ್ಲೂ ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ತಾಲೂಕಿನ ಮುಗಳಿ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ, ಮುಗಳಿ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ 2022-23ನೇ ಸಾಲಿನ ನಬಾರ್ಡ್ ಆರ್.ಐ.ಡಿ.ಎಫ್. 28 ಯೋಜನೆ ಅಡಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ₹1.62 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಆರ್.ಎಂ.ಎಸ್.ಎ. ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ರೋಣ ಮತಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ಎಲ್ಲ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಹೇಳಿದರು.

ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊರೆಯಲು ಹಾಗೂ ಶಾಲೆಗಳ ಮೂಲಭೂತ ಸೌಲಭ್ಯಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ದೇಶದ ಪ್ರಗತಿ ಶಿಕ್ಷಣ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ರೋಣ ಮತಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳ ಸುಧಾರಣೆಗೆ ಆದ್ಯತೆ ನೀಡಲಾಗುವುದು. ಮುಗಳಿ ಪ್ರೌಢಶಾಲೆಯಲ್ಲಿ ₹1.62 ಕೋಟಿ ವೆಚ್ಚದಲ್ಲಿ 10 ಕೊಠಡಿಗಳ ನಿರ್ಮಿಸಲಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ತಮ್ಮ ಗ್ರಾಮದ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಸದುದ್ದೇಶದಿಂದ ಮುಗಳಿ ಗ್ರಾಮಸ್ಥರು ಮನೆಗೆ ₹2000ಗಳಂತೆ ಸಂಗ್ರಹಿಸಿ ಒಂದು ಎಕರೆ ಜಮೀನು ಖರೀದಿಗೆ ನೆರವಾಗಿದ್ದಾರೆ. 21ನೇ ಶತಮಾನ ವಿದ್ಯೆಯ ಯುಗವಾಗಿದೆ. ವಿದ್ಯಾವಂತರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಗುವುದು. ದೇಶದ ನಿಜವಾದ ಸಂಪತ್ತು ಯುವಕರು, ಮಕ್ಕಳಾಗಿದ್ದಾರೆ. ವ್ಯಕ್ತಿ, ಸಮಾಜ, ದೇಶದ ಪ್ರಗತಿಗೆ ಶಿಕ್ಷಣ ಅತಿ ಮುಖ್ಯ. ಪಾಲಕರು ಶಿಕ್ಷಣದ ಮಹತ್ವ ಅರಿಯಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.

ಶಿಕ್ಷಣಕ್ಕಾಗಿ ಬಾರಿ ರಾಜ್ಯ ಸರ್ಕಾರ ₹44.420 ಕೋಟಿ ಮೀಸಲಿರಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಜಿಲ್ಲಾ ಅಥವಾ ತಾಲೂಕಿಗೆ ಅತ್ಯುತ್ತಮ ಶಾಲೆ ಎಂದೆನಿಸಿಕೊಳ್ಳಬೇಕಾದಲ್ಲಿ ಶಿಕ್ಷಕರ ಜವಾಬ್ದಾರಿ, ಗುಣಮಟ್ಟದ ಶಿಕ್ಷಣ ಅತಿ ಮುಖ್ಯವಾಗಿದೆ. ದೇಶದ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಹಿಂದಿನ ಸರ್ಕಾರದಲ್ಲಿ ಜಾರಿಗೆ ತಂದಿದ್ದ ವಿದ್ಯಾನಿಧಿ ಯೋಜನೆ ಸ್ಥಗಿತಗೊಂಡಿದ್ದು, ಕೂಡಲೇ ರಾಜ್ಯ ಸರ್ಕಾರ ಪುನಃ ಪ್ರಾರಂಭಿಸಬೇಕು ಎಂದರು.

ಸಹಾಯಕ ಯೋಜನಾ ಸಮನ್ವಯ ಜಿಲ್ಲಾಧಿಕಾರಿ ಶರಣು ಗೋಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಭೀಮವ್ವ ಗುಳಗುಳಿ, ಉಪಾಧ್ಯಕ್ಷ ಹನುಮಪ್ಪ ಅಸೂಟಿ, ಶರಣು ಗೊಗೇರಿ, ನಿವೃತ್ತ ಡಿಡಿಪಿಐ ಎಂ.ಎ. ರಡ್ಡೇರ, ತಾಪಂ ಇಒ ಚಂದ್ರಶೇಖರ ಕಂದಕೂರ, ವೀರಣ್ಣ ಶೆಟ್ಟರ್, ಸಿದ್ದಣ್ಣ ಬಂಡಿ, ಪಿಕಾರ್ಡ್‌ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ಯೂಸೂಫ್‌ ಇಟಗಿ, ತಾಪಂ ಮಾಜಿ ಸದಸ್ಯ ಸಿದ್ದಣ್ಣ ಯಾಳಗಿ, ಬಸವರಾಜ ನವಲಗುಂದ, ಪಿಡಿಒ ರಿಯಾಜ್ ಖತೀಬ, ಶೇಖಣ್ಣ ಕೋರಿ, ವೀರಣ್ಣ ಯಾಳಗಿ, ಅಭಿಷೇಕ ನವಲಗುಂದ, ಬಸವರಾಜ ಕೊಟಗಿ, ಎಂ.ಎಸ್. ದೇಸಾಯಿ, ಎಸ್.ಎಲ್. ಉಪ್ಪಾರ, ಬಸವರಾಜ ಉಸಲಕೊಪ್ಪ, ಯಲ್ಲಪ್ಪ ಕುರಿ, ಎಸ್.ಎಸ್‌. ಅವಾರಿ, ರವಿ ಪ್ರಕಾಶ, ಗುರುಬಸಮ್ಮ ಹಿರೇಮಠ, ಮುಖ್ಯೋಪಾಧ್ಯಾಯ ಪಿ.ಎ. ಹುನಗುಂದ, ಆರ್.ಟಿ. ಆರೇರ ಮುಂತಾದವರು ಉಪಸ್ಥಿತರಿದ್ದರು. ಬಿಇಒ ಅರ್ಜುನ ಕಾಂಬೋಗಿ ಸ್ವಾಗತಿಸಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಎ. ಕರಿಗುಡಿ ಕಾರ್ಯಕ್ರಮ ನಿರೂಪಿಸಿದರು.