ಸ್ಮಾರ್ಟ್ ಹೆಲ್ತ್ ಕೇರ್ ಅವ್ಯವಹಾರ: ಉತ್ತರಿಸಲು ತಡವರಿಸಿದ ಅಧಿಕಾರಿಗಳು

| Published : Feb 15 2025, 12:31 AM IST

ಸಾರಾಂಶ

ಚಿಟಗುಪ್ಪಿ ಆಸ್ಪತ್ರೆಯಲ್ಲಿ ₹ 3.26 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಹೆಲ್ತ್ ಕೇರ್ ಅಳವಡಿಸಲಾಗಿತ್ತು. ಆದರೆ, ಅದರಂತೆ ಯಾವುದೇ ಕೆಲಸಗಳು ಅಲ್ಲಿ ನಡೆದಿಲ್ಲ. ಆದರೂ ಖಾಸಗಿ ಏಜೆನ್ಸಿಗೆ ಬಿಲ್ ಕೊಡಲಾಗಿತ್ತು.

ಹುಬ್ಬಳ್ಳಿ:

ಚಿಟಗುಪ್ಪಿ ಆಸ್ಪತ್ರೆಯಲ್ಲಿ 2018ರಲ್ಲಿ ಅಳವಡಿಸಿದ್ದ ಸ್ಮಾರ್ಟ್ ಹೆಲ್ತ್ ಕೇರ್ ಯೋಜನೆಯಲ್ಲಿನ ಅವ್ಯವಹಾರ ಕುರಿತಂತೆ ಪಾಲಿಕೆ ರಚಿಸಿರುವ ಸದನ ಸಮಿತಿ ಶುಕ್ರವಾರ ಮೊದಲ ಸಭೆಯನ್ನು ಆಸ್ಪತ್ರೆಯಲ್ಲಿ ನಡೆಸಿ ಆಸ್ಪತ್ರೆ ಹಾಗೂ ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ಪಡೆಯಿತು.

ಸದನ ಸಮಿತಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲು ಅಲ್ಲಿನ ವೈದ್ಯರು, ಸಿಬ್ಬಂದಿ ತಡಬಡಿಸಿದರು ಎಂದು ಮೂಲಗಳು ತಿಳಿಸಿವೆ. ಅಂದಿನ ಸರ್ಕಾರದ ನಿರ್ದೇಶನದಂತೆ ಸ್ಮಾರ್ಟ್ ಹೆಲ್ತ್ ಕೇರ್ ಯೋಜನೆ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಇಲ್ಲಿನ ಚಿಟಗುಪ್ಪಿ ಆಸ್ಪತ್ರೆಯಲ್ಲಿ ₹ 3.26 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಹೆಲ್ತ್ ಕೇರ್ ಅಳವಡಿಸಲಾಗಿತ್ತು. ಆದರೆ, ಅದರಂತೆ ಯಾವುದೇ ಕೆಲಸಗಳು ಅಲ್ಲಿ ನಡೆದಿಲ್ಲ. ಆದರೂ ಖಾಸಗಿ ಏಜೆನ್ಸಿಗೆ ಬಿಲ್ ಕೊಡಲಾಗಿತ್ತು. ಈ ಬಗ್ಗೆ ಪಾಲಿಕೆ ಸಾಮಾನ್ಯಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಆಗ ಇದರ ತನಿಖೆಗೆ ಪಾಲಿಕೆ ಸದನ ಸಮಿತಿ ರಚಿಸಿತ್ತು. ಸಮಿತಿ ರಚಿಸಿ ಎರಡು ತಿಂಗಳಾದ ಮೇಲೆ ಮೊದಲ ಸಭೆ ನಡೆಸಲಾಯಿತು.

ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸ್ಮಾರ್ಟ್‌ಸಿಟಿ ಅಧಿಕಾರಿಗಳ ಬಳಿ ಸಮರ್ಪಕ ಉತ್ತರವೇ ಇರಲಿಲ್ಲ. ಅಲ್ಲದೆ ಅಗತ್ಯ ದಾಖಲೆಗಳನ್ನೂ ಒದಗಿಸುವಲ್ಲಿ ವಿಫಲರಾದರು. ಮುಂದಿನ ಸಭೆ ವೇಳೆ ದಾಖಲೆ ಸಲ್ಲಿಸುವುದಾಗಿ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಚಿಟಗುಪ್ಪಿ ಆಸ್ಪತ್ರೆಯ ಅಧಿಕಾರಿಗಳು ಮತ್ತು ಸ್ಮಾರ್ಟ್‌ಸಿಟಿ ಅಧಿಕಾರಿಗಳ ಮಧ್ಯೆ ಹೊಂದಾಣಿಕೆಯೇ ಕಂಡು ಬರಲಿಲ್ಲ. ಪರಸ್ಪರರು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ ಹೊರತು ಮಾಹಿತಿ ನೀಡಲಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಸಭೆ ಬಳಿಕ ಆಸ್ಪತ್ರೆಗೆ ತೆರಳಿದ ಸದಸ್ಯರಿಗೆ ಕಂಡು ಬಂದಿದ್ದು 8 ಕಂಪ್ಯೂಟರ್ ಮತ್ತು 5 ಪ್ರಿಂಟರ್, ಒಂದು ವೆಂಡಿಂಗ್ ಮಷಿನ್. ಇದು ಕೂಡ ಬಟ್ಟೆ ಇಡುವ ಕಬೋರ್ಡ್. ವೆಂಡಿಂಗ್‌ ಮಷಿನ್‌ನಲ್ಲಿ ಫ್ರಿಜ್ ಇರಲಿಲ್ಲ. ಹೀಗಿದ್ದಾಗ ಔಷಧ ಹೇಗೆ ಸ್ಟೋರ್ ಮಾಡುತ್ತೀರಿ. ಔಷಧಗಳನ್ನು ನಿರ್ದಿಷ್ಟ ಉಷ್ಣಾಂಶದಲ್ಲಿ ಸಂಗ್ರಹಿಸಿಡಬೇಕೆಂಬುದು ಸಾಮಾನ್ಯ ಜ್ಞಾನ ಎಂದು ಸದಸ್ಯರು ತರಾಟೆಗೆ ತೆಗೆದುಕೊಂಡರು.

ರೋಗಿಗಳ ದತ್ತಾಂಶ ಸಂಗ್ರಹಣೆ ನಿರ್ವಹಣೆ ಮತ್ತು ಮೇಲ್ವಿಚಾರಣೆ ಯಾರು ಮಾಡುತ್ತಾರೆ ಎಂದು ಕೇಳಿದ ಪ್ರಶ್ನೆಗೆ, ಚಿಟಗುಪ್ಪಿ ಆಸ್ಪತ್ರೆಯ 6 ಸಿಬ್ಬಂದಿ ನಿರ್ವಹಿಸುತ್ತಾರೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು. ಇದರಿಂದ ಕೆಂಡಾಮಂಡಲರಾದ ಸದಸ್ಯರು, ಯೋಜನೆಯ ಗುತ್ತಿಗೆದಾರರು ಏನು ಮಾಡುತ್ತಾರೆ. ಅವರ ಸಿಬ್ಬಂದಿ ಇಲ್ಲ ಎನ್ನುವುದಾದರೆ ನಿರ್ವಹಣೆ ವೆಚ್ಚ ₹ 70 ಲಕ್ಷ ಪಾವತಿಸಿದ್ದಾದರೂ ಹೇಗೆ ಎಂಬ ಪ್ರಶ್ನೆಗಳಿಗೆ ಸ್ಮಾರ್ಟ್‌ಸಿಟಿ ಮತ್ತು ಚಿಟಗುಪ್ಪಿ ಆಸ್ಪತ್ರೆ ಅಧಿಕಾರಿಗಳು ಕಂಗಾಲಾದರು.

ದತ್ತಾಂಶ ಸಾಫ್ಟ್‌ವೇರ್‌ನ ವೆಚ್ಚದ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಒಟ್ಟಾರೆ, ಸಮಿತಿ ಸದಸ್ಯರ ನಿರೀಕ್ಷೆಗೆ ತಕ್ಕಂತೆ ಮಾಹಿತಿ ಲಭ್ಯವಾಗಲ್ಲಿಲ್ಲ ಎಂಬುದು ಕಂಡು ಬಂದಿತು.

ಪಾಲಿಕೆ ಸಭಾನಾಯಕ ವೀರಣ್ಣ ಸವಡಿ ಅಧ್ಯಕ್ಷತೆಯ ಸದನ ಸಮಿತಿಯಲ್ಲಿ ಮಾಜಿ ಮೇಯರ್‌ಗಳಾದ ಈರೇಶ ಅಂಚಟಗೇರಿ, ಶಿವು ಹಿರೇಮಠ, ಕಾಂಗ್ರೆಸ್‌ನ ಡಾ. ಮಯೂರ ಮೋರೆ ಹಾಗೂ ಪ್ರತಿಪಕ್ಷ ನಾಯಕ ರಾಜಶೇಖರ ಕಮತಿ ಸದಸ್ಯರಾಗಿದ್ದಾರೆ. ಕಾಂಗ್ರೆಸ್ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳದೇ ಇದ್ದದ್ದು ಅಚ್ಚರಿ ಮೂಡಿಸಿತು. ಆರೋಗ್ಯ ಅಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಹೆಚ್ಚುವರಿ ಆಯುಕ್ತ ವಿಜಯಕುಮಾರ್, ಐಟಿ ವಿಭಾಗದ ಸಂತೋಷ ಯರಂಗಳಿ, ಸ್ಮಾರ್ಟ್‌ಸಿಟಿ ಎಂಜಿನಿಯರ್ ಬಸವರಾಜ್ ಸಭೆಯಲ್ಲಿದ್ದರು.ಯೋಜನೆಗೆ ಸಂಬಂಧಿಸಿ ಕೆಲ ವಿವರ ಪಡೆದಿದ್ದೇವೆ. ಇನ್ನೂ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಪ್ರಮುಖವಾಗಿ ಟೆಂಡರ್ ದಾಖಲೆಗಳು ಮತ್ತು ನಿರ್ವಹಣೆ ವೆಚ್ಚದ ದಾಖಲೆಗಳ ಪರಿಶೀಲನೆ ಅಗತ್ಯವಿದೆ. ಅವುಗಳನ್ನು ಸಲ್ಲಿಸುವಂತೆ ತಿಳಿಸಿದ್ದೇವೆ ಎಂದು ಪಾಲಿಕೆ ಸದನ ಸಮಿತಿ ಅಧ್ಯಕ್ಷ ವೀರಣ್ಣ ಸವಡಿ ಹೇಳಿದರು.

₹ 3.26 ಕೋಟಿ ವೆಚ್ಚದಲ್ಲಿ ಅಳವಡಿಸಿದ ಸ್ಮಾರ್ಟ್ ಹೆಲ್ತ್‌ಕೇರ್ ಯೋಜನೆ ಬಗ್ಗೆ ಮಾಹಿತಿ ಸರಿಯಾಗಿ ಇಲ್ಲದಿರುವುದು ಕಂಡು ಬಂತು. ಒಟ್ಟು ₹ 78 ಲಕ್ಷ ನಿರ್ವಹಣಾ ವೆಚ್ಚದ ಪೈಕಿ ₹ 70 ಲಕ್ಷ ಗುತ್ತಿಗೆದಾರರಿಗೆ ಪಾವತಿಸಿದ್ದಾರೆ. ಇನ್ನಷ್ಟು ಮಾಹಿತಿ ಹಾಗೂ ದಾಖಲೆಗಳೊಂದಿಗೆ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಪಾಲಿಕೆ ಸದನ ಸಮಿತಿ ಸದಸ್ಯ ಈರೇಶ ಅಂಚಟಗೇರಿ ಹೇಳಿದರು.