ಸ್ಮಾರ್ಟ್ ಹೆಲ್ತ್‌ ಕೇರ್‌: ವಸೂಲಿ ಆಗುತ್ತಾ ಹಣ!

| Published : Nov 11 2025, 02:30 AM IST

ಸ್ಮಾರ್ಟ್ ಹೆಲ್ತ್‌ ಕೇರ್‌: ವಸೂಲಿ ಆಗುತ್ತಾ ಹಣ!
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧೀನದಲ್ಲಿ ಬರುವ ಚಿಟಗುಪ್ಪಿ ಆಸ್ಪತ್ರೆಯಲ್ಲಿ ನಡೆದಿರುವ ಸ್ಮಾರ್ಟ್‌ ಹೆಲ್ತ್‌ ಕೇರ್‌ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಸದನ ಸಮಿತಿ ಅಪೂರ್ಣ ಮಾಹಿತಿ ಪಡೆದು ವರದಿ ನೀಡಿ ಕೈತೊಳೆದುಕೊಂಡಿದೆಯೇ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧೀನದಲ್ಲಿ ಬರುವ ಚಿಟಗುಪ್ಪಿ ಆಸ್ಪತ್ರೆಯಲ್ಲಿ ನಡೆದಿರುವ ಸ್ಮಾರ್ಟ್‌ ಹೆಲ್ತ್‌ ಕೇರ್‌ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಸದನ ಸಮಿತಿ ಅಪೂರ್ಣ ಮಾಹಿತಿ ಪಡೆದು ವರದಿ ನೀಡಿ ಕೈತೊಳೆದುಕೊಂಡಿದೆಯೇ? ಸಮಿತಿ ಶಿಫಾರಸಿನಂತೆ ಯೋಜನೆಗೆ ಪೋಲಾಗಿರುವ ದುಡ್ಡನ್ನು ಪಾಲಿಕೆ ವಸೂಲಿ ಮಾಡುತ್ತದೆಯೇ? ಇಂಥ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿವೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಸದನ ಸಮಿತಿ ರಚನೆಯಾಗಿ ಬರೋಬ್ಬರಿ ಒಂದು ವರ್ಷ ಮೂರು ತಿಂಗಳಿಗೆ ಸಮಿತಿ ತನ್ನ ವರದಿಯನ್ನು ಮೇಯರ್‌ಗೆ ಸಲ್ಲಿಸಿದ್ದು ಆಗಿದೆ. ಹಲವಾರು ಬಾರಿ ಮಾಹಿತಿ ನೀಡುವಂತೆ ಅಧಿಕಾರಿ ವರ್ಗಕ್ಕೆ ತಿಳಿಸಿದರೂ ಈವರೆಗೂ ಸರಿಯಾಗಿ ಮಾಹಿತಿಯನ್ನೇ ನೀಡಿಲ್ಲ ಎಂದು ಸಮಿತಿ ತನ್ನ ಅಸಹಾಯಕತೆಯನ್ನು ವರದಿಯಲ್ಲಿ ವ್ಯಕ್ತಪಡಿಸಿದೆ. ಆದರೆ, ಈ ಯೋಜನೆಗೆ ಹೊರಗುತ್ತಿಗೆ ಆಧಾರದ ಮೇಲೆ ಈ ಯೋಜನೆಗೆ ಬಳಸಿದ ಮಾನವ ಶಕ್ತಿಗೆ ಪಾಲಿಕೆಯಿಂದಲೇ ₹ 70 ಲಕ್ಷ ವೇತನ ನೀಡಲಾಗಿದೆ. ಈ ಹಣವನ್ನು ಸ್ಮಾರ್ಟ್‌ಸಿಟಿಯಿಂದ ವಸೂಲಿ ಮಾಡಬೇಕು. ಜತೆಗೆ ಈ ಯೋಜನೆಯಲ್ಲಿ ವಿನಿಯೋಗಿಸಲಾದ ₹ 3.26 ಕೋಟಿ ವೆಚ್ಚ ಸಂಪೂರ್ಣ ಪೋಲಾಗಿದೆ. ಆದಕಾರಣ ಯೋಜನೆ ತಯಾರಿಸಿದ ಅಧಿಕಾರಿಗಳಿಂದ ಹಾಗೂ ಯೋಜನೆ ಕಾರ್ಯಗತಗೊಳಿಸದ ಗುತ್ತಿಗೆದಾರರಿಂದ ಈದುಡ್ಡನ್ನು ವಸೂಲಿ ಮಾಡಬೇಕು ಎಂದು ಶಿಫಾರಸು ಮಾಡಿದೆ.

ಯೋಜನೆ ತಯಾರಿಸಿದ್ದು ಯಾರು? ಅನುಷ್ಠಾನ ಯಾವ ರೀತಿ ಆಗಿದೆ ಎಂಬುದರ ಮಾಹಿತಿ ಅಧಿಕಾರಿ ವರ್ಗ ತಿಳಿಸಿಲ್ಲ ಎಂದು ವರದಿಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದೆ. ಆದ ಕಾರಣ ಆಯುಕ್ತರಿಗೆ ವಿವರವಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಮೇಯರ್‌ ಸೂಚಿಸಿದ್ದಾರೆ. ಹೀಗಾಗಿ ಇದೀಗ ಸ್ಮಾರ್ಟ್‌ಸಿಟಿ ಹೆಲ್ತ್‌ ಕೇರ್‌ ಅವ್ಯವಹಾರದ ಚೆಂಡು ಆಯುಕ್ತರ ಅಂಗಳದಲ್ಲಿದೆ. ಸದನ ಸಮಿತಿಯೇ ವರದಿ ಸಲ್ಲಿಸಲು ಒಂದು ವರ್ಷಕ್ಕೂ ಅಧಿಕ ಕಾಲ ತೆಗೆದುಕೊಂಡಿದೆ.

ಇನ್ನು ಆಯುಕ್ತರು, ಆಗ ಟೆಂಡರ್‌ ಪಡೆದ ಗುತ್ತಿಗೆದಾರ ಯಾರು? ನಿರ್ವಹಣೆಗಾಗಿ (ಸಿಬ್ಬಂದಿ ವೇತನ) ಯಾವ ಆಧಾರದ ಮೇಲೆ ₹ 70 ಲಕ್ಷ ಪಾಲಿಕೆಯಿಂದ ಬಿಡುಗಡೆಯಾಯಿತು? ಮಾಡಿದ್ದು ಯಾರು? ಯೋಜನೆ ತಯಾರಿಸಿದ್ದು ಯಾರು? ಯಾರ ಶಿಫಾರಸಿನ ಆಧಾರದ ಮೇಲೆ ಯೋಜನೆ ಜಾರಿಗೊಳಿಸಲಾಯಿತು? ಇದರಲ್ಲಿ ಯಾವ ಅಧಿಕಾರಿಗಳ ತಪ್ಪಿದೆ ಎಂಬುದರ ಕುರಿತು ಪರಿಶೀಲನೆ ನಡೆಸಿ ವರದಿಯನ್ನು ಆಡಳಿತ ಮಂಡಳಿಗೆ ಸಲ್ಲಿಸಬೇಕಿದೆ. ಅಪೂರ್ಣ ಮಾಹಿತಿಯ ವರದಿ ಸಲ್ಲಿಸಲು ಸದನ ಸಮಿತಿ ಒಂದು ವರ್ಷಕ್ಕೂ ಅಧಿಕ ಕಾಲ ತೆಗೆದುಕೊಂಡಿದೆ. ಇನ್ನೂ ಪಾಲಿಕೆ ಅಧಿಕಾರಿ ವರ್ಗ ಇನ್ನೆಷ್ಟು ಕಾಲ ತೆಗೆದುಕೊಳ್ಳುತ್ತದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಜತೆಗೆ ಈಗ ಶಿಫಾರಸಿನಂತೆ ₹ 70 ಲಕ್ಷ ಸ್ಮಾರ್ಟ್‌ಸಿಟಿಯಿಂದ ಹಾಗೂ ₹ 3.26 ಕೋಟಿ ಅಧಿಕಾರಿ ವರ್ಗ ಹಾಗೂ ಗುತ್ತಿಗೆದಾರರಿಂದ ವಸೂಲಿ ಮಾಡಲು ಸಾಧ್ಯವೇ? ಆ ಕೆಲಸವನ್ನು ಪಾಲಿಕೆ ಮಾಡುತ್ತದೆಯೇ?

ಇನ್ನು 2019ರಲ್ಲಿ ಈ ಯೋಜನೆ ಜಾರಿಗೊಳಿಸಿದ ವೇಳೆ ಈಗಿನ ಆಯುಕ್ತ ರುದ್ರೇಶ ಘಾಳಿ, ಚಿಟಗುಪ್ಪಿ ಆಸ್ಪತ್ರೆಯ ಈಗಿನ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಕೂಡ ಆಗ ಇರಲಿಲ್ಲ. ಹೀಗಾಗಿ ಅವ್ಯವಹಾರದ ಪರಿಶೀಲನೆ, ವಿಚಾರಣೆಯನ್ನು ಆಯುಕ್ತರು ಯಾವ ರೀತಿ ಮಾಡುತ್ತಾರೆ. ಪೋಲಾಗಿರುವ ಸಾರ್ವಜನಿಕರ ದುಡ್ಡು ವಸೂಲಿ ಮಾಡಲು ಪಾಲಿಕೆ ಏನು ಹೆಜ್ಜೆ ಇಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಸ್ಮಾರ್ಟ್‌ ಹೆಲ್ತ್‌ ಕೇರ್‌ ಯೋಜನೆಗೆ ಸಂಬಂಧಪಟ್ಟಂತೆ ಸದನ ಸಮಿತಿ ವರದಿ ಸಲ್ಲಿಸಿದೆ. ಆದರೆ, ವರದಿಯಲ್ಲಿ ಅಧಿಕಾರಿ ವರ್ಗ ಕೆಲವೊಂದಿಷ್ಟು ಮಾಹಿತಿ ನೀಡಿಲ್ಲ ಎಂಬುದು ಉಲ್ಲೇಖಿಸಲಾಗಿದೆ. ಆದಕಾರಣ ಆ ಮಾಹಿತಿ ಪಡೆದು, ಯೋಜನೆ ಸಮಗ್ರವಾಗಿ ಪರಿಶೀಲಿಸಿ ವರದಿ ನೀಡುವಂತೆ ಆಯುಕ್ತರಿಗೆ ತಿಳಿಸಿದೆ. ಅವರು ವರದಿ ಕೊಟ್ಟ ಬಳಿಕ ಸಾಮಾನ್ಯಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

ಜ್ಯೋತಿ ಪಾಟೀಲ, ಮೇಯರ್‌, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ