ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿಕೇಂದ್ರ ಸರ್ಕಾರದಿಂದ ಅತ್ಯುತ್ತಮ ಯೋಜನೆಯೆಂದು ಪ್ರಶಸ್ತಿ ಪಡೆದು ಬರೀ ಕಾಗದದಲ್ಲೇ ಉಳಿದಿದ್ದ ಇಲ್ಲಿನ ಚಿಟಗುಪ್ಪಿ ಆಸ್ಪತ್ರೆಯಲ್ಲಿನ "ಸ್ಮಾರ್ಟ್ ಹೆಲ್ತ್ ಕೇರ್ "ನ ಅವ್ಯವಹಾರದ ಕುರಿತು ಜ. 27ರಂದು ವಿಚಾರಣೆ ನಡೆಯಲಿದೆ. ಸ್ಮಾರ್ಟ್‌ಸಿಟಿ ಹಾಗೂ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳೆಲ್ಲ ವಿಚಾರಣೆ ಎದುರಿಸುವಂತಾಗಿದೆ.
ಏನಿದು ಹೆಲ್ತ್ ಕೇರ್:ಸ್ಮಾರ್ಟ್‌ಸಿಟಿ ಯೋಜನೆಯಡಿ 2019ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ "ಸ್ಮಾರ್ಟ್‌ಹೆಲ್ತ್ ಕೇರ್ " ಯೋಜನೆ ಜಾರಿಗೊಳಿಸಲಾಗಿತ್ತು. ಆಸ್ಪತ್ರೆಯಲ್ಲಿ ಸಂಪೂರ್ಣ ಡಿಜಿಟಲೀಕರಣ ಜಾರಿಗೊಳಿಸುವ ವ್ಯವಸ್ಥೆಯಿದು. ಇದು ಬರೀ ಕಾಗದದಲ್ಲೇ ಮಾತ್ರ ಉಳಿದಿದೆ. ಈ ಮಷಿನ್ ಖರೀದಿಗೆ ₹ 3 ಕೋಟಿ ವೆಚ್ಚವನ್ನು ಸ್ಮಾರ್ಟ್‌ಸಿಟಿ ಮಾಡಿದೆ. ಇದರ ನಿರ್ವಹಣೆಗೆ ಪಾಲಿಕೆಯಿಂದ ಬರೋಬ್ಬರಿ ₹ 1.5 ಕೋಟಿ ವೆಚ್ಚವಾಗಿದೆ. ಅಸಲಿಗೆ ಈ ಮಷಿನ್ ಅಳವಡಿಕೆಯಾದ ಬಳಿಕ ಒಂದೇ ಒಂದು ದಿನವೂ ಕಾರ್ಯನಿರ್ವಹಿಸಿಲ್ಲ.
ಏನಿದರ ವಿಶೇಷ?:ಇಲ್ಲಿ ಬರುವ ರೋಗಿ ಮೊದಲು ಡಿಜಿಟಲ್ ನೋಂದಣಿ ಮಾಡಿಸಬೇಕು. ಅದು ಸಂಬಂಧಿತ ವೈದ್ಯರಿಗೆ ಡಿಜಿಟಲ್ ಮೂಲಕ ರವಾನೆಯಾಗುತ್ತದೆ. ವೈದ್ಯರು ರೋಗಿ ತಪಾಸಣೆ ಮಾಡಿದ ಬಳಿಕ ಔಷಧಿ, ವಿವಿಧ ತಪಾಸಣೆಯನ್ನು ಕಂಪ್ಯೂಟರ್ ಮೂಲಕವೇ ಸೂಚಿಸಬೇಕಾಗುತ್ತದೆ. ಔಷಧಿಯೂ ನೋಂದಣಿ ಪತ್ರದ ಮೇಲಿರುವಂಥ "ಕ್ಯೂಆರ್ " ಕೋಡ್ ಸ್ಕ್ಯಾನ್ ಮಾಡಿದ ತಕ್ಷಣವೇ ವೆಂಡಿಂಗ್ ಮಷಿನ್ ಮೂಲಕ ಪಡೆಯಬಹುದಾಗಿದೆ. ಒಂದು ಸಲ ಒಬ್ಬ ರೋಗಿ ಇಲ್ಲಿಗೆ ಬಂದು ಚಿಕಿತ್ಸೆ ಪಡೆದ ಮೇಲೆ ಆತನ ಸಮಗ್ರ ಮಾಹಿತಿ ಈ ವ್ಯವಸ್ಥೆಯಲ್ಲಿ ಸದಾಕಾಲ ಇರುತ್ತದೆ. ಆತ ಮತ್ತೊಮ್ಮೆ ಆಸ್ಪತ್ರೆಗೆ ಬಂದರೆ ನೋಂದಣಿ ಮಾಡಿಸುವ ಅಗತ್ಯ ಬೀಳುವುದಿಲ್ಲ. ಆತನ ನೋಂದಣಿ ಸಂಖ್ಯೆ ಹೇಳಿದರೆ ಕಂಪ್ಯೂಟರ್ ಸ್ಕ್ರೀನ್ ಮೇಲೆ ಥಟನೇ ಬರುತ್ತದೆ. ರೋಗಿಗೆ ಬೇರೆ ಊರಲ್ಲಿರುವ ತಜ್ಞ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕಿದ್ದರೂ ಅದನ್ನು ಕೂಡ ಇಲ್ಲೇ ಕುಳಿತು ವರ್ಚುವಲ್ ಆಗಿ ಪಡೆದುಕೊಳ್ಳಬಹುದಾಗಿದೆ. ಹೀಗೆ ಪ್ರತಿಯೊಂದು ಅತ್ಯಾಧುನಿಕ ಸೌಲಭ್ಯಗಳು ಇಲ್ಲಿ ಲಭ್ಯವಾಗುತ್ತವೆ ಎಂದು ಹೇಳಲಾಗಿತ್ತು. ಒಪಿಡಿ, ಐಪಿಡಿ ಎಲ್ಲ ರೋಗಿಗಳ ಸಮಗ್ರ ಮಾಹಿತಿ ಇಲ್ಲಿರಬೇಕು. ಇದ್ಯಾವುದು ಈಗ ಅಲ್ಲಿ ಆಗುತ್ತಿಲ್ಲ.
2019ರಲ್ಲಿ ಜಾರಿಗೊಳಿಸಲಾಗಿದ್ದ ಈ ವ್ಯವಸ್ಥೆಗೆ ಬರೋಬ್ಬರಿ 5 ವರ್ಷ ಖಾಸಗಿ ಏಜೆನ್ಸಿಯೊಂದು ನಿರ್ವಹಣೆ ಮಾಡಬೇಕಿತ್ತು. ವರ್ಷಕ್ಕೆ ₹ 30 ಲಕ್ಷದಂತೆ 5 ವರ್ಷಕ್ಕೆ ₹ 1.5 ಕೋಟಿ ಆ ಏಜೆನ್ಸಿಗೆ ಹೋಗಿದೆ. ಈಗಲೂ ಬರುವಂತಹ ರೋಗಿಗಳಿಗೆ ವರದಿಗಳನ್ನೆಲ್ಲ ಕೈ ಬರಹದಲ್ಲೇ ಬರೆದುಕೊಡಲಾಗುತ್ತಿದೆ. ಏಜೆನ್ಸಿ ಅವಧಿಯೂ ಮುಕ್ತಾಯವಾಗಿದ್ದು, ಅದು ತನ್ನ ಪಾಲಿನ ಹಣ ಪಡೆದುಕೊಂಡು ಹೋಗಿದೆ.ಸದನ ಸಮಿತಿ:
ಪಾಲಿಕೆಯು ಇದರ ವಿಚಾರಣೆಗೆ ಸದನ ಸಮಿತಿ ರಚಿಸಿದೆ. ಹಿರಿಯ ಸದಸ್ಯ ವೀರಣ್ಣ ಸವಡಿ ನೇತೃತ್ವದಲ್ಲಿ ಸಮಿತಿ ಇದೆ. ಮಾಜಿ ಮೇಯರ್ ಈರೇಶ ಅಂಚಟಗೇರಿ, ತಿಪ್ಪಣ್ಣ ಮಜ್ಜಗಿ, ಶಿವು ಹಿರೇಮಠ, ವಿಪಕ್ಷ ನಾಯಕ ರಾಜಶೇಖರ ಕಮತಿ ಹೀಗೆ ಐದು ಜನರ ಸಮಿತಿ ರಚಿಸಲಾಗಿದೆ.ಜ. 27ಕ್ಕೆ ಈ ಸಮಿತಿಯು ಮೊದಲ ಸಭೆ ಕರೆದಿದೆ. ಅಂದು ನಡೆಯುವ ಸಭೆಯಲ್ಲಿ ಸ್ಮಾರ್ಟ್‌ಸಿಟಿ ಹಾಗೂ ಪಾಲಿಕೆ ಅಧಿಕಾರಿ ವರ್ಗ ಭಾಗವಹಿಸಲಿದೆ. ಕೆಲಸ ಮಾಡದೇ, ಏನೇನು ವರ್ಕ್ ಆಗದೇ ಅದ್ಹೇಗೆ ಖಾಸಗಿ ಏಜೆನ್ಸಿಗೆ ದುಡ್ಡು ಸಂದಾಯವಾಗಿದೆ. ಏಕೆ ಇದು ವರ್ಕ್ ಆಗಿಲ್ಲ ಎಂಬುದರ ವಿಚಾರಣೆ ನಡೆಸಲಿದೆ. ಈ ಕುರಿತು ವರದಿ ಸಿದ್ಧಪಡಿಸಿ ಮೇಯರ್ ಅವರಿಗೆ ಹಸ್ತಾಂತರಿಸಲಿದೆ. ಅದನ್ನು ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಬಳಿಕ ಕ್ರಮದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ದುಡ್ಡು ಪಡೆದು ತೆರಳಿರುವ ಏಜೆನ್ಸಿಯಿಂದ ಮತ್ತೆ ಹಣ ವಸೂಲಿ ಮಾಡಲು ಸದನ ಸಮಿತಿ ಶಿಫಾರಸು ಮಾಡುತ್ತದೆಯೇ? ಮಾಡಿದರೂ ಅದು ಸಾಧ್ಯವೇ? ಇದರಲ್ಲಿ ತಪ್ಪಿತಸ್ಥ ಅಧಿಕಾರಿ ವರ್ಗಕ್ಕೆ ಏನು ಕ್ರಮವಾಗಲಿದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಸುಳ್ಳು ಮಾಹಿತಿ ನೀಡಿದ ಸ್ಮಾರ್ಟ್ ಸಿಟಿ
ಈ ನಡುವೆ ಸ್ಮಾರ್ಟ್‌ಸಿಟಿ ಯೋಜನೆ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಏನೇನು ಕೆಲಸ ಮಾಡಲಾಗಿದೆ ಎಂಬುದರ ಮಾಹಿತಿ ಪುಸ್ತಕವನ್ನು ಪ್ರಕಟಿಸಿದ್ದು, ಅದರಲ್ಲಿ ಚಿಟಗುಪ್ಪಿ ಆಸ್ಪತ್ರೆಯಲ್ಲಿನ ಸ್ಮಾರ್ಟ್ ಹೆಲ್ತ್ ಕೇರ್ ಬಗ್ಗೆಯೂ ಪ್ರಸ್ತಾಪಿಸಿದೆ. ಅತ್ಯುತ್ತಮವಾಗಿ ನಡೆದಿದೆ ಎಂದು ತಿಳಿಸಿದೆ. ಆದರೆ, ಅಸಲಿಗೆ ಆ ಯೋಜನೆ ಈ ವರೆಗೂ ಸರಿಯಾಗಿ ಜಾರಿಯೇ ಆಗಿಲ್ಲ ಎಂಬುದು ಮಾತ್ರ ಸ್ಪಷ್ಟ. ಹೀಗಾಗಿ ಸುಳ್ಳು ಮಾಹಿತಿ ನೀಡಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಸ್ಮಾರ್ಟ್ ಹೆಲ್ತ್ ಕೇರ್ ಸಿಸ್ಟ್ಂನಲ್ಲಿ ಆಗಿರುವ ಅವ್ಯವಹಾರದ ಕುರಿತು ವಿಚಾರಣೆ ನಡೆಸಲು ಜ. 27ರಂದು ಸಭೆ ಕರೆಯಲಾಗಿದೆ. ಅಧಿಕಾರಿ ವರ್ಗವೆಲ್ಲ ಭಾಗವಹಿಸಲಿದೆ. ಅದಾದ ಬಳಿಕ ಮೇಯರ್ ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ಸದನ ಸಮಿತಿ ಅಧ್ಯಕ್ಷ ವೀರಣ್ಣ ಸವಡಿ ಹೇಳಿದ್ದಾರೆ.ಸ್ಮಾರ್ಟ್ ಹೆಲ್ತ್ ಕೇರ್ ಸಿಸ್ಟ್ಂ ಕೆಲಸ ಮಾಡದೇ ₹ 1.5 ಕೋಟಿ ಪಾಲಿಕೆಯಿಂದ ಸಂದಾಯವಾಗಿದೆ. ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಅಧಿಕಾರಿ ವರ್ಗದ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದೆ. ಈ ಬಗ್ಗೆ ಪರಿಶೀಲಿಸಲು ಅಧ್ಯಕ್ಷರು ಸಭೆ ಕರೆಯಲಿದ್ದಾರೆ ಸದನ ಸಮಿತಿ ಸದಸ್ಯ ಈರೇಶ ಅಂಚಟಗೇರಿ ತಿಳಿಸಿದ್ದಾರೆ.