ಸಾರಾಂಶ
ಈ ಸ್ಪರ್ಧೆಯಲ್ಲಿ ವಿಶ್ವಾದ್ಯಂತ ೧೩೫ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅವರಲ್ಲಿ ಕೇವಲ ೨೮ ಜನರನ್ನು ಅಂತಿಮ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಅನ್ನಪೂರ್ಣ ಶೆಣೈ ಅವರು ಚಾಂಪಿಯನ್ ಪ್ರಶಸ್ತಿ ಗೆದ್ದು, ನಾಡಿಗೆ ಹೆಮ್ಮೆಯನ್ನುಂಟು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿನಿ ಅನ್ನಪೂರ್ಣ ಶೆಣೈ ಜಾಗತಿಕ ಮಟ್ಟದ ‘ಐಇಇಇ ಸ್ಟೆಮ್ ಚಾಂಪಿಯನ್’ ಬಹುಮಾನಕ್ಕೆ ಪಾತ್ರರಾಗಿದ್ದಾರೆ.ಈ ಸ್ಪರ್ಧೆಯಲ್ಲಿ ವಿಶ್ವಾದ್ಯಂತ ೧೩೫ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅವರಲ್ಲಿ ಕೇವಲ ೨೮ ಜನರನ್ನು ಅಂತಿಮ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಅವರಲ್ಲಿ ಅನ್ನಪೂರ್ಣ ಶೆಣೈ ಅವರು ಚಾಂಪಿಯನ್ ಪ್ರಶಸ್ತಿ ಗೆದ್ದು, ನಾಡಿಗೆ ಹೆಮ್ಮೆಯನ್ನುಂಟು ಮಾಡಿದ್ದಾರೆ.ಐಇಇಇ ಸ್ಟೆಮ್ ಚಾಂಪಿಯನ್ ಕಾರ್ಯಕ್ರಮವು ಅಧೀನ ವಿಶ್ವವಿದ್ಯಾಲಯ ಮಟ್ಟದ ವಿದ್ಯಾರ್ಥಿಗಳಿಗಾಗಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಶಿಕ್ಷಣದ ಬಗ್ಗೆ ಒತ್ತು ನೀಡುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲಕ ಆಯ್ಕೆಯಾದ ಚಾಂಪಿಯನ್‌ಗಳು ತಮ್ಮ ಸಮುದಾಯಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿಜ್ಞಾನ ಶಿಕ್ಷಣದಲ್ಲಿ ಮೌಲ್ಯಯುತ ಕೊಡುಗೆ ನೀಡುತ್ತಾರೆ.
ಈ ಗೌರವದೊಂದಿಗೆ ಅನ್ನಪೂರ್ಣ ಶೆಣೈ ಅವರು ಐಇಇಇ ಸಂಪನ್ಮೂಲಗಳನ್ನು ಯೋಜನೆ ಹಾಗೂ ಕೌಶಲ್ಯದ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.ಅವರ ಈ ಮಹತ್ತರ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಸಂತಸ ವ್ಯಕ್ತ ಪಡಿಸಿದ್ದಾರೆ.