ಸಾರಾಂಶ
ಮೇ 4 ರಿಂದ 6ರ ವರೆಗೆ ಜಯಂತಿ ಪ್ರಚಾರಾರ್ಥ ಕಾರ್ಯಕ್ರಮ ಹಾಗೂ ಮೇ 8 ರಿಂದ 10ರ ವರೆಗೆ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜಯಂತಿ ಕಾರ್ಯಕ್ರಮ ನಡೆಯಲಿವೆ.
ಕನ್ನಡಪ್ರಭ ವಾರ್ತೆ ಬೀದರ್
ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ನಗರದಲ್ಲಿ ಮೇ 8 ರಿಂದ 10ರ ವರೆಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.ಮೇ 4 ರಿಂದ 6ರ ವರೆಗೆ ಜಯಂತಿ ಪ್ರಚಾರಾರ್ಥ ಕಾರ್ಯಕ್ರಮ ಹಾಗೂ ಮೇ 8 ರಿಂದ 10ರ ವರೆಗೆ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜಯಂತಿ ಕಾರ್ಯಕ್ರಮ ನಡೆಯಲಿವೆ.
ಮೇ 4 ರಂದು ಸಂಜೆ 5.30ಕ್ಕೆ ನಗರದ 25 ಬಡಾವಣೆಗಳಲ್ಲಿ ವಚನ ಭಜನೆಯೊಂದಿಗೆ ಬಸವ ಪಥ ಸಂಚಲನ, ಮೇ 5 ರಂದು ಸಂಜೆ 5ಕ್ಕೆ ಬಸವ ಮುಕ್ತಿ ಮಂದಿರದಿಂದ ಬಸವೇಶ್ವರ ವೃತ್ತದ ವರೆಗೆ ಬಸವ ಸೌಹಾರ್ದ ನಡಿಗೆ ಹಮ್ಮಿಕೊಳ್ಳಲಾಗಿದೆ.ಮೇ 6 ರಂದು ಬೆಳಗ್ಗೆ 9ಕ್ಕೆ ಸಿದ್ಧಾರೂಢ ಮಠದಿಂದ ಪಾಪನಾಶ ಮಂದಿರದ ವರೆಗೆ 2024 ಬೈಕ್‌ಗಳ ಮಹಾ ರ್‍ಯಾಲಿ, 8ರಂದು ಬೆಳಗ್ಗೆ 9.30ಕ್ಕೆ ನೆಹರೂ ಕ್ರೀಡಾಂಗಣ ಸಮೀಪದ ಸಾಯಿ ಸ್ಕೂಲ್ ಆವರಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಕಾರು ರ್‍ಯಾಲಿ ನಡೆಯಲಿದೆ.
ಮೇ 8 ರಂದು ಬೆಳಗ್ಗೆ 6ಕ್ಕೆ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ವಚನ ಪಾರಾಯಣ, ಬೆಳಗ್ಗೆ 11 ರಿಂದ ಸಂಜೆ 5 ರ ವರೆಗೆ ಲಿಂ.ಶಕುಂತಲಾ ವಾಲಿ ಅವರ ಸ್ಮರಣಾರ್ಥ ವಾಲಿಶ್ರೀ ಸೂಪರ್ ಸ್ಪೆಷಾಲಿಟಿ ಆಸ್ಪತೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಲಿದೆ.ಲೋಕಸಭೆ ಚುನಾವಣೆಯಲ್ಲಿ ಮತ ಹಕ್ಕು ಚಲಾಯಿಸಿದವರು ತೋರು ಬೆರಳಿಗೆ ಹಚ್ಚಿದ ಶಾಯಿ ತೋರಿಸಿ ಶಿಬಿರದಲ್ಲಿ ತಪಾಸಣೆ, ಪರೀಕ್ಷೆ, ಔಷಧಿ ಹಾಗೂ ಪ್ರಸಾದ ಉಚಿತವಾಗಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಸಂಜೆ 5.30ಕ್ಕೆ ರಂಗ ಮಂದಿರದಲ್ಲಿ ಮಕ್ಕಳಿಂದ ವೇಷ ಭೂಷಣ ಪ್ರದರ್ಶನ, ಸಂಜೆ 6ಕ್ಕೆ ಬೆಂಗಳೂರಿನ ಖ್ಯಾತ ಚಿಂತಕ ಡಾ. ವಾಸು ಎಚ್.ವಿ. ಅವರಿಂದ ಉಪನ್ಯಾಸ, ರಾಜ್ಯಮಟ್ಟದ ಸಂಗೀತ ಕಲಾವಿದರಾದ ಕಲಬುರಗಿಯ ಡಾ. ಜಯದೇವಿ ಜಂಗಮಶೆಟ್ಟಿ, ಬಸವರಾಜ ಹೂಗಾರ, ಸಿದ್ರಾಮಯ್ಯ ಸ್ವಾಮಿ, ಗೋರಟಾ ಜನಾರ್ಧನ್ ವಾಘಮಾರೆ ಹಾಗೂ ರಾಜಕುಮಾರ ಹೂಗಾರ ಮದಕಟ್ಟಿ ಅವರಿಂದ ಸಂಗೀತ, ಭಾಲ್ಕಿಯ ಹಿರೇಮಠ ಸಂಸ್ಥಾನದ ಗುರು ಚನ್ನಬಸವ ಸಾಂಸ್ಕೃತಿಕ, ಕಲಾ, ಕ್ರೀಡಾ ವೇದಿಕೆಯಿಂದ ಮಹಾ ಕ್ರಾಂತಿ ನಾಟಕ ಪ್ರದರ್ಶನ, ನೂಪುರ ನೃತ್ಯ ಅಕಾಡೆಮಿ, ನಾಟ್ಯಶ್ರೀ ಹಾಗೂ ನೃತ್ಯಾಂಗನ ನೃತ್ಯಾಲಯ ವತಿಯಿಂದ ವಚನ ನೃತ್ಯ ಜರುಗಲಿದೆ ಎಂದು ಹೇಳಿದ್ದಾರೆ.9 ರಂದು ಬೆಳಗ್ಗೆ 6ಕ್ಕೆ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ವಚನ ಪಾರಾಯಣ, ಸಂಜೆ 6ಕ್ಕೆ ರಾಜ್ಯಮಟ್ಟದ ಸಂಗೀತ ಕಲಾವಿದರಿಂದ ವಚನ ಸಂಗೀತೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
10 ರಂದು ಸಂಜೆ 5ಕ್ಕೆ ಬಸವೇಶ್ವರ ವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ. ಬಸವ ಭಕ್ತರು, ಬಸವಾನುಯಾಯಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.