ಸಾರಾಂಶ
ಕಲಬುರಗಿ ಜಗತ್ ವೃತ್ತದ ದಿಬ್ಬದ ಮೇಲಿರುವ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಭಾನುವಾರ 7 ಅಡಿ ಉದ್ದದ ಕೆರೆ ಹಾವು ಪ್ರತ್ಯಕ್ಷವಾಗಿ ಕೆಲಕಾಲ ಭಯ ಹುಟ್ಟಿಸಿತ್ತು.
ಕನ್ನಡಪ್ರಭ ವಾರ್ತೆ, ಕಲಬುರಗಿ
ಇಲ್ಲಿನ ಜಗತ್ ವೃತ್ತದ ದಿಬ್ಬದ ಮೇಲಿರುವ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಭಾನುವಾರ 7 ಅಡಿ ಉದ್ದದ ಕೆರೆ ಹಾವು ಪ್ರತ್ಯಕ್ಷವಾಗಿ ಕೆಲಕಾಲ ಭಯ ಹುಟ್ಟಿಸಿತ್ತು.ಕಲಬುರಗಿ ಜಿಲ್ಲಾಧಿಕಾರಿಗಳಾದ ಬಿ ಫೌಜಿಯಾ ತರನ್ನುಮ್ ವಾಸವಾಗಿರುವ ಈ ಮನೆಯಲ್ಲಿನ ಮೊಗಸಾಲೆಯಲ್ಲಿ, ಅತಿಥಿಗಳು ಕುಳಿತುಕೊಳ್ಳಲು ಅಳಡಿಸಿರುವ ಆಸನಗಳಿರುವ ಕೋಣೆಯಲ್ಲಿ ಭಾರಿ ಗಾತ್ರದ ಈ ಕೆರೆ ಹಾವು ಕಂಡಿತ್ತು.
ತಕ್ಷಣ ಉರಗ ಸ್ನೇಹಿತ, ರಕ್ಷಕ ಪ್ರಶಾಂತ್ ಈತನಿಗೆ ಅಲ್ಲಿನ ಮನೆ ಗೆಲೆಸದ ಸಿಬ್ಬಂದಿ ಕರೆ ಮಾಡಿದರು. ಸಣ್ಣದಾಗಿ ಮಲೆ ಜಿನುಗುತ್ತಿತ್ತು. ಮಳೆ ಮಧ್ಯೆಯೇ ಡಿಸಿಯವರ ಮನೆಗೆ ಆಗಮಿಸಿದ ಸ್ನೇಕ್ ಪ್ರಶಾಂತ್ ಅದನ್ನು ಉಪಾಯವಾಗಿ ಹಿಡಿದು ಕೋಣೆಯಿಂದ ಹೊರಗೆ ತಂದರು.ಇದೊಂದು ಕೆರೆ ಹಾವು (ಇಲಿ ಹಾವು) ಅಷ್ಟೊಂದು ವಿಷ ಇರೋದಿಲ್ಲವಾದರೂ ಸಣ್ಣ ಪ್ರಮಾಣದಲ್ಲಿ ವಿಷವಿರುತ್ತದೆ. ಅಪಾಯಕಾರಿಯಲ್ಲ ಎಂದು ಹೇಳಿರುವ ಪ್ರಶಾಂತ್ ಡಿಸಿಯವರ ಮನೆಯಿಂದ ರಕ್ಷಣೆ ಮಾಡಿರುವ ಹಾವನ್ನು ದೂರ ನಗರದ ಹೊರಗಡೆ ಬಿಟ್ಟಿದ್ದಾಗಿ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಪ್ರಾಂಗಣ ಗಿಡ ಮರಗಳಿಂದ ಕೂಡಿದೆ. ಇಲ್ಲಿ ಆಗಾಗ ಹಾವುಗಳು ಬರುತ್ತಿರುತ್ತವೆ. ಹಿಂದಿನ ಅದೆಷ್ಟೋ ಜಿಲ್ಲಾಧಿಕಾರಿಗಳು ತಮಗೆ ಕರೆ ಮಾಡಿದಾಗ ಹೋಗಿ ಹಾವುಗಳನ್ನು ರಕ್ಷಿಸಿದ್ದೇನೆ. ಫೌಜಿಯಾ ತರನ್ನುಮ್ ಇವರು ಈ ಮನೆಗೆ ಬಂದ ನಂತರದಲ್ಲಿ ಇದೇ ಮೊದಲ ಬಾರಿಗೆ ಹಾವು ಕಂಡಿದೆ ಎಂದು ಪ್ರಶಾಂತ ಹೇಳಿದ್ದಾನೆ.